
ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಅವರ ಸಿಬ್ಬಂದಿಗಳನ್ನು ಸಿಬಿಐ ಮಂಗಳವಾರ ವಿಚಾರಣೆಗೆ ಒಳಪಡಿಸಿದೆ. ಇದು ರಾಜೇಂದ್ರ ಕುಮಾರ್ ಅವರ ವಿರುದ್ಧ ಆರೋಪಿಸಲಾಗಿರುವ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿರುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
"ರಾಜೇಂದ್ರ ಕುಮಾರ್ ಅವರ ೨-೩ ಸಿಬ್ಬಂದಿಗಳನ್ನು ವಿಚಾರಣೆಗೆ ಕರೆಸಲಾಗಿತ್ತು" ಎಂದು ಹೆಸರು ಹೇಳಲು ಇಚ್ಛಿಸಿದ ಸಿಬಿಐ ಅಧಿಕಾರಿ ಹೇಳಿದ್ದಾರೆ.
ಕುಮಾರ್ ಅವರ ಕಚೇರಿಯಿಂದ ವಶ ಪಡಿಸಿಕೊಂಡಿದ್ದ ದಾಖಲೆಗಳ ತನಿಖೆಯಿಂದ ಮೇಲ್ನೋಟಕ್ಕೆ ಆಪಾದಿತರು ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿರುವುದು, ಮತ್ತು ಕ್ರಿಮಿನಲ್ ಅಪರಾಧ ಎಸಗಿರುವುದು ಸ್ಪಷ್ಟವಾಗಿದೆ ಎಂದು ಸಿಬಿಐ ಈ ಹಿಂದೆ ತಿಳಿಸಿತ್ತು.
ಕುಮಾರ್ ಅವರ ದೆಹಲಿಯ ಕಚೇರಿಯ ಮೇಲೆ ಸಿಬಿಐ ಡಿಸೆಂಬರ್ ೧೫ರಂದು ದಾಳಿ ನಡೆಸಿ ದಾಖಲೆಗಳನ್ನು ವಶಪಡಿಸಿಕೊಂಡಿತ್ತು.
"ಯಾವುದೇ ನೋಟಿಸ್ ನೀಡದೆ ದೆಹಲಿ ಮುಖ್ಯಮಂತ್ರಿ ಕಚೇರಿಯ ಸಿಬ್ಬಂದಿಗಳಿಗೆ ಕರೆ ಮಾಡಿ ಸಿಬಿಐ ವಿಚಾರಣೆಗೆ ಕರೆದಿದೆ. ಈ ಹಿಂದೆ ಇತರ ಮಂತ್ರಿಗಳ ಸಿಬ್ಬಂದಿಗಳನ್ನು ಹೀಗೆಯೇ ಕರೆಯಲಾಗಿತ್ತು" ಎಂದು ಕೇಜ್ರಿವಾಲ್ ಮಂಗಳವಾರ ಟ್ವೀಟ್ ಮಾಡಿದ್ದಾರೆ.
ಇದಕ್ಕೆ ಸ್ಪಷ್ಟನೆ ನೀಡಿರುವ ಸಿಬಿಐ ಅಧಿಕಾರಿ, ನಾವು ಕರೆದಿರುವುದು ರಾಜೇಂದ್ರ ಕುಮಾರ್ ಅವರ ಸಿಬ್ಬಂದಿಗಳನ್ನು ಮಾತ್ರ, ಮುಖ್ಯಮಂತ್ರಿ ಕಚೇರಿಯ ಸಿಬ್ಬಂದಿಗಳನ್ನಲ್ಲ ಎಂದಿದೆ.
Advertisement