ಉಪನ್ಯಾಸಕರಿಂದ ಪಿಯು ಮೌಲ್ಯಮಾಪನ ಬಹಿಷ್ಕಾರ: ಸಿಎಂ ಸಂಧಾನ ಸಭೆ ವಿಫಲ

ವೇತನ ತಾರತಮ್ಯ ವಿರೋಧಿಸಿ ಪಿಯುಸಿ ಉತ್ತರ ಪತ್ರಿಕೆಗಳ ಮೌಲ್ಯ ಮಾಪನ ಬಹಿಷ್ಕರಿಸುವ ನಿರ್ಧಾರ ಕೈಗೊಂಡಿರುವ...
ಉಪನ್ಯಾಸಕರೊಂದಿಗೆ ಸಿಎಂ ಸಭೆ
ಉಪನ್ಯಾಸಕರೊಂದಿಗೆ ಸಿಎಂ ಸಭೆ
ಬೆಂಗಳೂರು: ವೇತನ ತಾರತಮ್ಯ ವಿರೋಧಿಸಿ ಪಿಯುಸಿ ಉತ್ತರ ಪತ್ರಿಕೆಗಳ ಮೌಲ್ಯ ಮಾಪನ ಬಹಿಷ್ಕರಿಸುವ ನಿರ್ಧಾರ ಕೈಗೊಂಡಿರುವ ಉಪನ್ಯಾಸಕರ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ನಡೆಸಿದ ಸಂಧಾನ ಸಭೆ ವಿಫಲವಾಗಿದ್ದು, ಬಹಿಷ್ಕಾರ ನಿರ್ಧಾರ ಅಚಲ ಎಂದು ಉಪನ್ಯಾಸಕರು ಹೇಳಿದ್ದಾರೆ.
ಮೌಲ್ಯ ಮಾಪನ ಬಹಿಷ್ಕಾರ ನಿರ್ಧಾರ ಕೈಗೊಂಡಿರುವ ಅಧ್ಯಾಪಕರ ಸಂಘದ ಪದಾಧಿಕಾರಿಗಳೊಂದಿಗೆ ಇಂದು ಸಿಎಂ ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ನಡೆಸಿದರು. ಈ ವೇಳೆ ಸಿಎಂ, ಉಪನ್ಯಾಸಕರ ಬೇಡಿಕೆಗಳ ಬಗ್ಗೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಲಿದೆ. ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ಬಹಿಷ್ಕಾರ ನಿರ್ಧಾರ ಕೈಬಿಡುವಂತೆ ಮನವಿ ಮಾಡಿದರು. ಆದರೆ ಮುಖ್ಯಮಂತ್ರಿಗಳ ಮಾತಿಗೆ ಸ್ಪಂದಿಸದ ಉಪನ್ಯಾಸಕರ ಸಂಘದ ಪದಾಧಿಕಾರಿಗಳು, ವೇತನ ತಾರತಮ್ಯ ನಿವಾರಿಸಬೇಕು. ಕುಮಾರನಾಯ್ಕ್ ವರದಿಯನ್ನು ಜಾರಿಗೊಳಿಸುವಂತೆ ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಸಭೆ ವಿಫಲವಾಗಿದೆ.
ಉಪನ್ಯಾಸಕರ ಬೇಡಿಕೆಗಳನ್ನು ತಕ್ಷಣವೇ ಈಡೇರಿಸಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಹೇಳಿ, ಮುಂದೆ ಇವೆಲ್ಲವನ್ನು ಪರಿಶೀಲಿಸುತ್ತೇನೆ ಎಂಬ ಭರವಸೆ ನೀಡಿದರೂ ಇದಕ್ಕೆ ಉಪನ್ಯಾಸಕರ ಸಂಘದ ಪದಾಧಿಕಾರಿಗಳು ಪೂರಕವಾಗಿ ಸ್ಪಂದಿಸಲಿಲ್ಲ ಎನ್ನಲಾಗಿದೆ.
ಈ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪಿಯು ಉಪನ್ಯಾಸಕರ ಸಂಘದ ಅಧ್ಯಕ್ಷ ತಿಮ್ಮಯ್ಯ ಪುರಳೆ, ಪಿಯುಸಿ ಉತ್ತರ ಪತ್ರಿಕೆಗಳ ಮೌಲ್ಯ ಮಾಪನ ಬಹಿಷ್ಕಾರ ನಿರ್ಧಾರದಲ್ಲಿ ಬದಲಿಲ್ಲ. ಬಹಿಷ್ಕಾರವನ್ನು ಕೈ ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ನಮ್ಮ ಬೇಡಿಕೆಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇವೆ. ಮತ್ತೆ 3ನೇ ತಾರೀಖು ಸಭೆ ಸೇರಿ ಚರ್ಚಿಸೋಣ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ ಎಂದರು.
ನಮ್ಮ ಬೇಡಿಕೆಗಳ ಬಗ್ಗೆ ಸಿಎಂ ಯಾವುದೇ ಖಚಿತ ಭರವಸೆ ನೀಡದ ಕಾರಣ ಸಭೆ ವಿಫಲವಾಗಿದೆ. ನಾವು ದಿಢೀರ್ ಮೌಲ್ಯ ಮಾಪನ ಬಹಿಷ್ಕಾರ ಮಾಡುತ್ತಿಲ್ಲ. ನವೆಂಬರ್‌ನಿಂದ ಪ್ರತಿಭಟನೆ ಮಾಡಿಕೊಂಡು ಬಂದಿದ್ದೇವೆ. ಈ ವಿಚಾರದಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರ ಕ್ಷಮೆ ಕೇಳುತ್ತೇವೆ. ಹೋರಾಟ ಅನಿವಾರ್ಯ ಎಂದು ಮೌಲ್ಯಮಾಪನ ಬಹಿಷ್ಕಾರ ನಿರ್ಧಾರವನ್ನು ತಿಮ್ಮಯ್ಯ ಪುರಳೆ ಸಮರ್ಥಿಸಿಕೊಂಡರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com