ಮೊದಲನೇ ಹಂತದಲ್ಲಿ ನೀಟ್ ಪರೀಕ್ಷೆ ಬರೆದವರಿಗೆ ಎರಡನೇ ಹಂತದಲ್ಲಿ ಪರೀಕ್ಷೆ ಬರೆಯಲು ಅವಕಾಶ

ರಾಷ್ಟ್ರೀಯ ಅರ್ಹತಾ ಪರೀಕ್ಷೆ (ನೀಟ್) ಮೊದಲನೆ ಹಂತ ಪರೀಕ್ಷೆ ಬರೆದವರಿಗೂ ಜುಲೈ 24ರಂದು ನಡೆಯಲಿರುವ ಎರಡನೇ ಹಂತದ ಪರೀಕ್ಷೆ ಬರೆಯಲು ಅನುಮತಿ...
ಸುಪ್ರೀಂಕೋರ್ಟ್
ಸುಪ್ರೀಂಕೋರ್ಟ್
ನವದೆಹಲಿ: ರಾಷ್ಟ್ರೀಯ ಅರ್ಹತಾ ಪರೀಕ್ಷೆ (ನೀಟ್) ಮೊದಲನೆ ಹಂತ ಪರೀಕ್ಷೆ ಬರೆದವರಿಗೂ ಜುಲೈ 24ರಂದು ನಡೆಯಲಿರುವ ಎರಡನೇ ಹಂತದ ಪರೀಕ್ಷೆ ಬರೆಯಲು ಅನುಮತಿ ನೀಡಬಹುದು ಎಂದು ಸುಪ್ರೀಂಕೋರ್ಟ್ ಹೇಳಿದೆ. ತಮಿಳು ಸೇರಿದಂತೆ ಏಳು ಪ್ರಾದೇಶಿಕ ಭಾಷೆಗಳಲ್ಲಿ ಪ್ರಶ್ನೆ ಪತ್ರಿಕೆ ಲಭ್ಯವಾಗಿಸುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ನ್ಯಾಯಾಲಯ ಸೋಮವಾರ ಹೇಳಿದೆ. 
ನೀಟ್ ನಿರ್ಧಾರದಲ್ಲಿ ಬದಲಾವಣೆ ಮಾಡಬೇಕೆಂದು ಸಲ್ಲಿಸಿದ ಅರ್ಜಿಗಳ ಬಗ್ಗೆ ಸೋಮವಾರ ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆ ಪೂರ್ಣವಾಗಿದೆ.
ಮೇ 1ರಂದು ನಡೆದ ನೀಟ್ ಒಂದನೇ ಹಂತದಲ್ಲಿ ಪರೀಕ್ಷೆ ಬರೆದವರಿಗೂ ಎರಡನೇ ಹಂತದಲ್ಲಿ ಜುಲೈ 24ರಂದು ನಡೆಯುವ ಪರೀಕ್ಷೆ ಬರೆಯಲು ಅನುಮತಿ ನೀಡಬೇಕೆಂದು ಕೇಂದ್ರ ಸರ್ಕಾರ ಬಿನ್ನವಿಸಿತ್ತು. ವಿದ್ಯಾರ್ಥಿಗಳ ಆಸಕ್ತಿಯನ್ನು ಪರಿಗಣಿಸಿ 7 ಪ್ರಾದೇಶಿಕ ಭಾಷೆಗಳಲ್ಲಿಯೂ ಪ್ರಶ್ನೆ ಪತ್ರಿಕೆ ನೀಡಬೇಕೆಂದು ಸರ್ಕಾರ ಒತ್ತಾಯಿಸಿತ್ತು.
ಆದಾಗ್ಯೂ, ಈ ವಿಷಯದ ಬಗ್ಗೆ ಯಾವ ತೀರ್ಮಾನ ಕೈಗೊಳ್ಳಬೇಕೆಂದು ನ್ಯಾಯಾಲಯ ಸಿಬಿಎಸ್‌ಇ ಮತ್ತು ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾದ ಅಭಿಪ್ರಾಯವನ್ನು ಕೇಳಿತ್ತು. ಒಂದನೇ ಹಂತದಲ್ಲಿ ಪರೀಕ್ಷೆ ಬರೆದವರಿಗೆ ಎರಡನೇ ಹಂತದಲ್ಲಿ ಅವಕಾಶ ನೀಡುವ ನಿರ್ಧಾರಕ್ಕೆ ಮೆಡಿಕಲ್ ಕೌನ್ಸಿಲ್ ಜೈ ಎಂದರೂ ಪ್ರಾದೇಶಿಕ ಭಾಷೆಗಳಲ್ಲಿ ಪ್ರಶ್ನೆ ಪತ್ರಿಕೆ ನೀಡುವ ತೀರ್ಮಾನವನ್ನು ವಿರೋಧಿಸಿದೆ. ಪ್ರಾಯೋಗಿಕ ಸಮಸ್ಯೆಗಳ ಹೆಸರಲ್ಲಿ ಮೊದಲು ಸಿಬಿಎಸ್‌ಇ ಈ ನಿರ್ಧಾರವನ್ನು ವಿರೋಧಿಸಿದರೂ ನಂತರ ಸರ್ಕಾರ ತೀರ್ಮಾನವನ್ನು ಒಪ್ಪಿಕೊಂಡಿತು. ಇದಾದ ನಂತರ ಕೇಂದ್ರ ಸರ್ಕಾರದ ಪರಿಷ್ಕರಣೆಗಳನ್ನು ಸೇರಿಸಿ ಮೊದಲನೇ ತೀರ್ಪಿನಲ್ಲಿ ಬದಲಾವಣೆ ತರುವುದಾಗಿ ನ್ಯಾಯಾಲಯ ಹೇಳಿತ್ತು.
ತಮಿಳು, ತೆಲುಗು, ಮರಾಠಿ, ಗುಜರಾತಿ, ಅಸ್ಸಾಮಿ, ಉರ್ದು, ಬಂಗಾಳಿ ಮೊದಲಾದ ಏಳು ಪ್ರಾದೇಶಿಕ ಭಾಷೆಗಳಲ್ಲಿ ಪ್ರಶ್ನೆ ಪತ್ರಿಕೆ ನೀಡುವ ತೀರ್ಮಾನದ ಬಗ್ಗೆ  ನ್ಯಾಯಾಲಯ ಚಿಂತನೆ ನಡೆಸುತ್ತಿದೆ. ಒಂದನೇ ಹಂತದಲ್ಲಿ ಪರೀಕ್ಷೆ ಬರೆದವರು ಎರಡನೇ ಹಂತದಲ್ಲಿ ಪರೀಕ್ಷೆ ಬರೆಯುವುದಾದರೆ ಎರಡನೇ ಹಂತದ ಪರೀಕ್ಷೆಯಲ್ಲಿ ಲಭಿಸಿದ ಅಂಕಗಳನ್ನು ಪ್ರವೇಶ ಪರೀಕ್ಷೆಯಲ್ಲಿ ಪರಿಗಣಿಸಲಾಗುವುದು.
ಈ ಪರೀಕ್ಷೆಗಳ ಫಲಿತಾಂಶ ಆಗಸ್ಟ್ 17 ರಂದು ಪ್ರಕಟವಾಗಲಿದೆ. ಸೆಪ್ಟೆಂಬರ್  30ರೊಳಗೆ ಪ್ರವೇಶ ಕಾರ್ಯಗಳು ಪೂರ್ಣಗೊಳ್ಳಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com