ಮೋದಿ ಸಾಧನಾ ಕಾರ್ಯಕ್ರಮಕ್ಕೆ ಬಚ್ಚನ್: ಕಾಂಗ್ರೆಸ್ ಟೀಕೆಗೆ ಬಿಗ್ ಬಿ ಗರಂ

ಇಂಡಿಯಾ ಗೇಟ್ ಆವರಣದಲ್ಲಿ ಎನ್​ಡಿಎ ಸರ್ಕಾರದ ದ್ವಿತೀಯ ವಾರ್ಷಿಕ ಸಾಧನಾ ಸಮಾವೇಶ ಕಾರ್ಯಕ್ರಮವನ್ನು ಬಾಲಿವುಡ್...
ಅಮಿತಾಬ್ ಬಚ್ಚನ್
ಅಮಿತಾಬ್ ಬಚ್ಚನ್
ನವದೆಹಲಿ: ಇಂಡಿಯಾ ಗೇಟ್ ಆವರಣದಲ್ಲಿ ಎನ್​ಡಿಎ ಸರ್ಕಾರದ ದ್ವಿತೀಯ ವಾರ್ಷಿಕೋತ್ಸವ ಸಾಧನಾ ಸಮಾವೇಶ ಕಾರ್ಯಕ್ರಮವನ್ನು ಬಾಲಿವುಡ್ ನಟ ಅಮಿತಾಬ್ ಬಚ್ಚನ್ ನಡೆಸಿಕೊಡಲಿದ್ದಾರೆ ಎಂಬ ವರದಿ ಹಿನ್ನಲೆಯಲ್ಲಿ ಕಾಂಗ್ರೆಸ್ ವಾಗ್ದಾಳಿ ನಡೆಸಿದ್ದು, ಇದಕ್ಕೆ ಬಿಗ್ ಬಿ ಕೂಡ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. 
ಪನಾಮಾ ಲೀಕ್ಸ್ ನಲ್ಲಿ ಅಮಿತಾಬ್ ಬಚ್ಚನ್ ಅವರ ಹೆಸರು ಕೇಳಿಬಂದಿದ್ದು, ಕಪ್ಪು ಹಣ ಹೊಂದಿರುವ ಆರೋಪವನ್ನು ಎದುರಿಸುತ್ತಿದ್ದಾರೆ. ಅಂತಹವರು ಎನ್ ಡಿಎ ಸರ್ಕಾರದ ಸಾಧನಾ ಕಾರ್ಯಕ್ರಮದ ನಿರೂಪಣೆಯನ್ನು ಏಕೆ ಮಾಡಬೇಕು? ಇದು ಅಧಿಕಾರಿಗಳಿಗೆ, ತನಿಖಾ ಸಂಸ್ಥೆಗಳಿಗೆ ತಪ್ಪು ಸಂದೇಶ ರವಾನಿಸಿದಂತಾಗುತ್ತದೆ ಎಂದು ಕಾಂಗ್ರೆಸ್ ವಾಗ್ಧಾಳಿ ನಡೆಸಿತ್ತು. 
ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲಾ ಅವರು ''ಅಮಿತಾಬ್ ಬಚ್ಚನ್ ಜೊತೆ ಪ್ರಧಾನಿ ನರೇಂದ್ರ ಮೋದಿ ಅವರು ಯಾವುದೇ ಕಾರ್ಯಕ್ರಮದಲ್ಲಾದರೂ ಭಾಗವಹಿಸಲಿ. ಇದಕ್ಕೆ ನಮ್ಮ ಆಕ್ಷೇಪವಿಲ್ಲ. ಆದರೆ ಪ್ರಸ್ತುತ ಕಪ್ಪು ಹಣ ಹೊಂದಿರುವ ಆರೋಪ ಎದುರಿಸುತ್ತಿರುವ ಅಮಿತಾಬ್ ಅವರನ್ನು ಕಾರ್ಯಕ್ರಮ ನಿರೂಪಣೆಗೆ ಆಹ್ವಾನಿಸಿರುವುದು ಎಷ್ಟು ಸರಿ? ಇದರಿಂದ ಅಧಿಕಾರಿಗಳಿಗೆ ಮತ್ತು ತನಿಖಾ ಸಂಸ್ಥೆಗಳಿಗೆ ರವಾನಿಸುವ ಸಂದೇಶ ಏನು?'' ಎಂದು ಪ್ರಶ್ನಿಸಿದ್ದಾರೆ.  
ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯಿಸಿರುವ ಬಿಗ್ ಬಿ, ಎನ್ ಡಿಎ ಸರ್ಕಾರದ ಎರಡು ವರ್ಷದ ಸಾಧನಾ ಸಮಾವೇಶ ಕಾರ್ಯಕ್ರಮವನ್ನು ನಾನು ನಿರೂಪಣೆ ಮಾಡುತ್ತಿಲ್ಲ. ನಟ ಆರ್ ಮಾಧವನ್ ನಿರೂಪಣೆ ಮಾಡುತ್ತಿದ್ದಾರೆ. ನಾನು ಕೇಂದ್ರ ಸರ್ಕಾರದ ''ಬೇಟಿ ಬಚಾವೋ ಬೇಟಿ ಪಡಾವೋ'' ಯೋಜನೆಯ ರಾಯಭಾರಿಯಾಗಿದ್ದು, ಕಾರ್ಯಕ್ರಮದಲ್ಲಿ ಅದರ ಒಂದು ತುಣಕನ್ನು ನಿರೂಪಣೆ ಮಾಡಲಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ. 
ಐತಿಹಾಸಿಕ ಇಂಡಿಯಾ ಗೇಟ್ ಬಳಿ ಮೇ.28ರಂದು ಎನ್​ಡಿಎ ಸರ್ಕಾರದ ದ್ವಿತೀಯ ವಾರ್ಷಿಕ ಸಾಧನಾ ಸಮಾವೇಶ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ನರೇಂದ್ರ ಮೋದಿ, ಕೇಂದ್ರ ಸಚಿವರು, ಬಾಲಿವುಡ್ ನಟ ನಟಿಯರು ಪಾಲ್ಗೊಳ್ಳಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com