ಕಪ್ಪು ಹಣದ ಮೇಲೆ ಕೇಂದ್ರದ ಸರ್ಜಿಕಲ್ ಸ್ಟ್ರೈಕ್!

500ರು ಹಾಗೂ 1000 ಮುಖ ಬೆಲೆಯ ನೋಟುಗಳ ಮೇಲೆ ನಿಷೇಧ ಹೇರುವ ಮೂಲಕ ಪ್ರಧಾನಿ ಮೋದಿ ನಿಜಕ್ಕೂ ಗದಾ ಪ್ರಹಾರ ಮಾಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ನವದೆಹಲಿ: 500ರು ಹಾಗೂ 1000 ಮುಖ ಬೆಲೆಯ ನೋಟುಗಳ ಮೇಲೆ ಮಧ್ಯರಾತ್ರಿಯಿಂದಲೇ ನಿಷೇಧ ಹೇರುವ ಮೂಲಕ ಪ್ರಧಾನಿ ನರೇಂದ್ರ ಮೋದಿ ನಿಜಕ್ಕೂ ಕಪ್ಪು ಹಣ ಹಾಗೂ ಭಯೋತ್ಪಾದನೆಗೆ ಕುಮ್ಮಕ್ಕು ನೀಡುವ ನಕಲಿ  ನೋಟುಗಳ ಹಾವಳಿ ಮೇಲೆ ನಿಜಕ್ಕೂ ಗದಾ ಪ್ರಹಾರ ಮಾಡಿದ್ದಾರೆ.

ಭ್ರಷ್ಟಾಚಾರ, ಭಯೋತ್ಪಾದನೆ, ನಕಲಿ ನೋಟುಗಳ ಹಾವಳಿ ವಿರುದ್ಧ ನೇರ ಸಮರಕ್ಕೆ ನಿಂತಿರುವ ಕೇಂದ್ರ ಸರ್ಕಾರ ತನ್ನ ಅಂತಿಮ ಪ್ರಯತ್ನವಾಗಿ ತಕ್ಷಣದಿಂದಲೇ ಜಾರಿಗೆ ಬರುವಂತೆ 500 ಹಾಗೂ 1000 ರು ಮುಖಬೆಲೆಯ  ನೋಟುಗಳನ್ನು ನಿಷೇಧಿಸಿ ಆದೇಶ ಹೊರಡಿಸಿದೆ. ನಿನ್ನೆ ರಾತ್ರಿ ದಿಢೀರ್ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, 500 ಮತ್ತು 1000 ರು ಮುಖಬೆಲೆಯ ನೋಟುಗಳನ್ನು ನಿಷೇಧಿಸುವ ಘೋಷಣೆ ಮಾಡಿದರು.

ನಾಳೆಯಿಂದಲೇ ಹೊಸ ಮಾದರಿಯ 500 ರು. ಹಾಗೂ 2000 ರು. ಮುಖಬೆಲೆಯ ನೋಟುಗಳ ಚಲಾವಣೆ
ಇನ್ನು ಕೇಂದ್ರ ಸರ್ಕಾರ ನಾಳೆಯಿಂದಲೇ ಹೊಸ ಮಾದರಿಯ 500 ರು. ಹಾಗೂ 2000 ರು. ಮುಖಬೆಲೆಯ ನೋಟುಗಳ ಚಲಾವಣೆಗೆ ಮುಂದಾಗಿದ್ದು, ಇದೇ ಕಾರಣಕ್ಕೆ ಇಂದು ಮತ್ತು ನಾಳೆ ಬ್ಯಾಂಕ್ ಗಳು ಕಾರ್ಯ ಸ್ಥಗಿತಗೊಳಿಸಲಿವೆ.  ಈ ಅವಧಿಯಲ್ಲಿ ಹೊಸ ನೋಟುಗಳನ್ನು ವ್ಯವಸ್ಥಿತವಾಗೆ ದೇಶಾದ್ಯಂತ ಹಂಚಿಕೆ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ಆರ್ ಬಿಐ ಕೂಡ ಸರ್ಕಾರದ ನಿರ್ಧಾರವನ್ನು ಸ್ವಾಗತಿಸುವುದು, ನೂತನ ನೋಟುಗಳ ಚಲಾವಣೆ  ಕ್ರಮಕೈಗೊಳ್ಳುವುದಾಗಿ ಹೇಳಿದೆ.

ನಿನ್ನೆ ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಪ್ರಮುಖ ಅಂಶಗಳು ಮತ್ತು ಕ್ರಮಗಳು ಇಲ್ಲಿವೆ.
1.ಈಗಿನಿಂದಲೇ 500ರು. 1000ರು ನೋಟಗಳು ಚಾಲ್ತಿಯಲ್ಲಿರುವುದಿಲ್ಲ. ಜನರು ತಮ್ಮಲ್ಲಿರುವ ಈ ನೋಟಗಳನ್ನು ಬದಲಾಯಿಸುವುದಕ್ಕೆ 50 ದಿನಗಳ ಕಾಲಾವಕಾಶವಿದ್ದು, ಬ್ಯಾಂಕ್ ಹಾಗೂ ಅಂಚೆ ಕಚೇರಿಗಳಲ್ಲಿ ಅವುಗಳನ್ನು  ಹಿಂತಿರುಗಿಸಬಹುದು.

2.ಜನರಿಗೆ ತೊಂದರೆ ಆಗಬಾರದು ಎನ್ನುವ ಉದ್ದೇಶದಿಂದ ನಿಷೇಧ ಆರಂಭವಾದ 72 ಗಂಟೆಗಳ ಅವಧಿಯವರೆಗೂ ಅಂದರೆ ನವೆಂಬರ್ 11ರ ಮಧ್ಯರಾತ್ರಿ ವರೆಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಹಳೆಯ 1000 ಹಾಗೂ 500 ರು  ನೋಟುಗಳ ಚಲಾವಣೆಗೆ ಅವಕಾಶ ನೀಡಲಾಗಿದೆ. ಅಂತೆಯೇ ಪೆಟ್ರೋಲ್ ಬಂಕ್, ರಿಟೇಲ್ ಔಟ್ ಲೆಟ್, ಶವಾಗಾರಗಳು, ಶವಸಂಸ್ಕ್ರಾ ಕೇಂದ್ರಗಳಲ್ಲೂ ನವೆಂಬರ್ 11ರತನಕ  500 ಹಾಗೂ 100 ರು ನೋಟುಗಳನ್ನು ಸ್ವೀಕರಿಸಲು  ಅನುವು ಮಾಡಿಕೊಡಲಾಗಿದೆ.

3.ಉಳಿದಂತೆ  ನಗದು ರಹಿತ ವಹಿವಾಟುಗಳಾದ ಚೆಕ್, ಡಿಡಿ, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಗಳ ವಹಿವಾಟಿನಲ್ಲಿ ಯಾವುದೇ ರೀತಿಯ ಬದಲಾವಣೆಗಳಿರುವುದಿಲ್ಲ, ಅಂತೆಯೇ 1 ರು. 2ರು, 5ರು, 10 ಕು, 20ರು, 50ರು, 100ರು,  ನೋಟುಗಳ ವಹಿವಾಟಿನ ಮೇಲೆ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ.

4 ಜನರು ತಮ್ಮ ಬಳಿಯಿರುವ ರೂ. 500 ಹಾಗೂ 1000ದ ನೋಟುಗಳನ್ನು ನವಂಬರ್‌ 10ರಿಂದ ಡಿಸೆಂಬರ್‌ 30ರವರೆಗೆ 50 ದಿನಗಳ ಕಾಲಾವಕಾಶದಲ್ಲಿ ಎಲ್ಲಾ ಬ್ಯಾಂಕ್‌ ಗಳಲ್ಲಿ ಹಾಗೂ ಅಂಚೆ ಕಛೇರಿಗಳಲ್ಲಿ (ಪೋಸ್ಟ್‌ ಆಫೀಸುಗಳಲ್ಲಿ) ಜಮೆ ಮಾಡಬಹುದಾಗಿರುತ್ತದೆ. ಈ ರೀತಿಯಾಗಿ ನೋಟುಗಳನ್ನು ಜಮೆ ಮಾಡುವ ಸಂದರ್ಭದಲ್ಲಿ ಗುರುತು ಪತ್ರ ದಾಖಲೆಯಾಗಿ (ಐಡಿ ಪ್ರೂಫ್) ಆಧಾರ್‌ ಕಾರ್ಡ್‌, ಪಾಸ್‌ ಪೋರ್ಟ್‌, ಬ್ಯಾಂಕ್‌ ಪಾಸ್‌ ಪುಸ್ತಕಗಳನ್ನು ಸಲ್ಲಿಸಬಹುದಾಗಿರುತ್ತದೆ. ಡಿಸೆಂಬರ್ 30ರೊಳಗೆ 500 ಹಾಗೂ 1000 ರುನೋಟುಗಳನ್ನು ಬ್ಯಾಂಕ್ ಹಾಗೂ ಅಂಚೆ ಕಚೇರಿಗಳಲ್ಲಿ ಹಿಂತಿರಿಗಿಸುವುಕ್ಕೆ ಯಾರಿಗಾದರೂ ಸಾಧ್ಯವಾಗದೇ ಹೋದರೆ ಅಂಥವರು ಗುರುತಿನ ಚೀಟಿಯೊಂದಿಗೆ ಕಾರಣವನ್ನು ನೀಡಿ ಅಫಿಡವಿಟ್ ಸಲ್ಲಿಸಿ 2017ರ ಮಾರ್ಚ್ 31ರೊಳಗೆ ಹಿಂತಿರುಗಿಸಬಹುದು. ಈ ರೀತಿಯಾಗಿ ಜಮೆ ಮಾಡಿದ 500, 1000 ರೂಪಾಯಿ ನೋಟುಗಳು ನಿಮ್ಮ ಅಕೌಂಟ್‌ನಲ್ಲಿ ಜಮೆಯಾಗುತ್ತವೆ.

5.ನವೆಂಬರ್ 25ರ ತನಕ ನೋಟುಗಳ ಬದಲಾವಣೆಗೆ ಆರಂಭದಲ್ಲಿ ವಾರಕ್ಕೆ 20 ಸಾವಿರ ರು, ಮಿತಿ ಹೇರಲಾಗಿದ್ದು, ನವೆಂಬರ್ 25ರ ನಂತರ ಡಿಸೆಂಬರ್ 31ರ ನಡುವಿನ ಅವಧಿಗೆ ಮತ್ತೊಮ್ಮೆ ಈ ಮೊತ್ತದಲ್ಲಿ ಪರಿಷ್ಕರಣೆ  ಮಾಡಲಾಗುವುದು. ದಿನವೊಂದಕ್ಕೆ ಎಟಿಎಂನಿಂದ ಪಡೆಯಬಹುದಾದ ಗರಿಷ್ಠ ಮೊತ್ತವನ್ನು ರು. 2,000ಕ್ಕೆ ನಿಗದಿಪಡಿಸಲಾಗಿದೆ. ನವಂಬರ್‌ 11ರ ಬಳಿಕ ಅದನ್ನು 4000 ರೂಪಾಯಿಗಳಿಗೆ ಹೆಚ್ಚಿಸಲಾಗುವುದು. ಬ್ಯಾಂಕ್‌ ಖಾತೆಯಿಂದ ದಿನಕ್ಕೆ ರು.10 ಸಾವಿರ ಪಡೆಯಲು ಮಾತ್ರ ಅವಕಾಶ ಇದೆ. ಒಂದು ವಾರದ ಅವಧಿಯಲ್ಲಿ ಬ್ಯಾಂಕ್‌ನಿಂದ ಪಡೆಯಬಹುದಾದ ಮೊತ್ತ ರು.20 ಸಾವಿರ ಮಾತ್ರ. ಈ ಮಿತಿಯನ್ನು ಮುಂದಿನ ದಿನಗಳಲ್ಲಿ ಏರಿಕೆ ಮಾಡಲಾಗುವುದು ಎಂದು ಪ್ರಧಾನಿ ಭರವಸೆ ನೀಡಿದ್ದಾರೆ.

6.ಬುಧವಾರ ಬ್ಯಾಂಕ್ ಗಳು ವಹಿವಾಟು ನಡೆಸುವುದಿಲ್ಲ. ಬುಧವಾರ ಮತ್ತು ಗುರುವಾರ ಎಟಿಎಂಗಳು ಕಾರ್ಯನಿರ್ವಹಿಸುವುದಿಲ್ಲ ಎಂದು ತಿಳಿಸಿದ್ದಾರೆ. ಲಭ್ಯವಿರುವ ಕಡಿಮೆ ಅವಧಿಯಲ್ಲಿಯೇ ಹೊಸ ಕ್ರಮಗಳನ್ನು ಅನುಷ್ಠಾನಕ್ಕೆ  ತರಲು ಬ್ಯಾಂಕ್‌ ಮತ್ತು ಅಂಚೆ ಕಚೇರಿ ಸಿಬ್ಬಂದಿ ಶಕ್ತಿ ಮೀರಿ ಶ್ರಮಿಸಲಿದ್ದಾರೆ ಎಂಬ ವಿಶ್ವಾಸವನ್ನು ಪ್ರಧಾನಿ ವ್ಯಕ್ತಪಡಿಸಿದ್ದಾರೆ. ಸರ್ಕಾರದ ಈ ಮಹತ್ವದ ನಿರ್ಧಾರ ಯಶಸ್ವಿಯಾಗಲು ರಾಜಕೀಯ ಪಕ್ಷಗಳು, ಕಾರ್ಯಕರ್ತರು,  ಸಾಮಾಜಿಕ ಸಂಘಟನೆಗಳು ಮತ್ತು ಮಾಧ್ಯಮ ನೆರವಾಗಲಿವೆ ಎಂಬ ವಿಶ್ವಾಸವನ್ನೂ ಅವರು ವ್ಯಕ್ತಪಡಿಸಿದ್ದಾರೆ.

7.ನವೆಂಬರ್ 11 ಹಾಗೂ 12 ರ ಮಧ್ಯರಾತ್ರಿ ವರೆಗೂ ಪ್ರಸ್ತುತ ನಿಷೇಧ ಹೇರಿರುವ 500 ಮತ್ತು 1000 ರು.ನೋಟುಗಳನ್ನು ಸರ್ಕಾರಿ ಆಸ್ಪತ್ರೆ, ರೈಲ್ವೇ ಟಿಕೆಟ್ ಬುಕ್ಕಿಂಗ್ ಹಾಗೂ ವಿಮಾನ ಟಿಕೆಟ್ ಬುಕಿಂಗ್ ನಲ್ಲಿ ಬಳಕೆ ಮಾಡಲು ಅವಕಾಶ ನೀಡಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com