
ನವದೆಹಲಿ: 500 ಮತ್ತು 1000 ರು.ನೋಟುಗಳ ನಿಷೇಧ ಬೆನ್ನಲ್ಲೇ ಎಟಿಎಂಗಳಿಗೆ 100ರು.ಗಳನ್ನು ಭರ್ತಿ ಮಾಡುವಂತೆ ಸೂಚನೆ ನೀಡಿದ್ದರೂ ಸಾಕಷ್ಟು ಎಟಿಎಂಗಳು ಖಾಲಿಯಾಗಿದ್ದರ ಕುರಿತಂತೆ ಕೇಂದ್ರ ಸರ್ಕಾರ ಬ್ಯಾಂಕುಗಳನ್ನು ತರಾಟೆಗೆ ತೆಗೆದುಕೊಂಡಿದೆ.
ನೋಟು ನಿಷೇಧದ ಬೆನ್ನಲ್ಲೇ ಕೇಂದ್ರ ಸರ್ಕಾರ ಎಟಿಎಂಗಳನ್ನು 100 ರು. ನೋಟುಗಳಿಂದ ಭರ್ತಿ ಮಾಡುವಂತೆ ಸೂಚನೆ ನೀಡಿತ್ತಾದರೂ, ಬಹುತೇಕ ಎಟಿಎಂಗಳಲ್ಲಿ ಹಣ ಭರ್ತಿಯಾಗಿರಲಿಲ್ಲ. ಈ ಬಗ್ಗೆ ಸಾಕಷ್ಟು ಅಸಮಾಧಾನಗಳು ಆಕ್ರೋಶಗಳು ವ್ಯಕ್ತವಾಗಿದ್ದವು. ಹೊಸ ನೋಟುಗಳು ಇಂದಿನಿಂದ ಎಟಿಎಂಗಳಲ್ಲಿ ಲಭ್ಯವಾಗುವ ನಿರೀಕ್ಷೆ ಇದ್ದು, ಗರಿಷ್ಟ ಪ್ರಮಾಣದ ನೋಟುಗಳಿಗೆ ಚಿಲ್ಲರೆ ಹಂಚಿಕೆ ಮಾಡುವುದು ಮಧ್ಯಮ ಗಾತ್ರದ ವ್ಯಾಪರಸ್ಥರಿಗೆ ತಲೆನೋವಾಗಿ ಪರಿಣಮಿಸಿದೆ. ಕೇಂದ್ರ ಸರ್ಕಾರದ ನಿರ್ಧಾರದಿಂದ ಜನರ ಭವಣೆ ಮುಂದುವರೆದಿರುವಂತೆಯೇ ಮತ್ತು ನೋಟುಗಳ ನಿಷೇಧದ ಬಳಿಕ ದೇಶಾದ್ಯಂತ ಉಲ್ಬಣಗೊಂಡಿರುವ ಆರ್ಥಿಕ ಬಿಕ್ಕಟ್ಟಿನ ಹಿನ್ನಲೆಯಲ್ಲಿ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದು, ಈ ವೇಳೆ ಎಟಿಎಂಗಳ ಪರಿಸ್ಥಿತಿ ಕುರಿತು ಮಾಹಿತಿ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು ಈ ಬಗ್ಗೆ ಮಾಹಿತಿ ನೀಡಿರುವ ಎಸ್ ಬಿಐ ಮುಖ್ಯಸ್ಥೆ ಅರುಂಧತಿ ಭಟ್ಟಾಚಾರ್ಯ ಅವರು, ಜಿಲ್ಲೆಗೊಂದು ಎಟಿಎಂನಲ್ಲಿ 100 ರು. ನೋಟುಗಳನ್ನು ಭರ್ತಿ ಮಾಡುವಂತೆ ಸೂಚನೆ ನೀಡಲಾಗಿತ್ತು. ಆ ಕಾರ್ಯವನ್ನು ಮಾಡಲಾಗಿದೆ.
ನೋಟು ನಿಷೇಧದ ಬಳಿಕ ಚಿಲ್ಲರೆಗೆ ವ್ಯಾಪಕ ಬೇಡಿಕೆ ಕಂಡುಬಂದ ಹಿನ್ನಲೆಯಲ್ಲಿ ಸಮಸ್ಯೆ ಉಲ್ಬಣವಾಗಿದೆ ಎಂದು ಹೇಳಿದರು.
ಇನ್ನು ಹೊಸ ನೋಟುಗಳು ಇಂದಿನಿಂದಲೇ ಎಟಿಎಂಗಳಲ್ಲಿ ಲಭ್ಯವಾಗುವ ಸಾಧ್ಯತೆಗಳಿವೆಯಾದರೂ ಬಹುತೇಕ ಎಟಿಎಂಗಳಲ್ಲಿ ಹೊಸ ನೋಟು ವಿತರಣೆಗೆ ಬೇಕಾದ ತಾಂತ್ರಿಕ ಲೋಪದೋಷಗಳನ್ನು ಇನ್ನೂ ಸರಿಪಡಿಸಿಲ್ಲ. ಹೀಗಾಗಿ ಎಟಿಎಂಗಳಲ್ಲಿ ಹೋಸ ನೋಟುಗಳ ಕೊರತೆ ಮತ್ತೊಂದಿಷ್ಟು ದಿನ ಮುಂದುವರೆಯುವ ಸಾಧ್ಯತೆ ಇದ್ದು, ಹಳೆಯ 100 ರು.ಮುಖಬೆಲೆಯ ನೋಟುಗಳೇ ದೊರೆಯುವ ಸಾಧ್ಯತೆ ಇದೆ.
ಒಟ್ಟಾರೆ ನೋಟು ನಿಷೇಧವಾಗಿ ಒಂದು ವಾರವೇ ಕಳೆದರೂ ಜನರ ಪರದಾಟ ಮಾತ್ರ ಇನ್ನೂ ಕಡಿಮೆಯಾಗಿಲ್ಲ. ಹೊಸ ನೋಟು ಪಡೆಯಲು ಹಾಗೂ ಹಳೆಯ ನೋಟುಗಳ ಬದಲಾವಣೆ ಮತ್ತು ಠೇವಣಿಗಾಗಿ ಬ್ಯಾಂಕುಗಳ ಮುಂದೆ ಜನರ ಸರತಿ ಸಾಲು ಮುಂದುವರೆದಿದೆ.
Advertisement