
ನವದೆಹಲಿ: ನಭಾ ಜೈಲಿನಿಂದ ಭಾನುವಾರ ಪರಾರಿಯಾಗಿದ್ದ ಖಲಿಸ್ತಾನ ಲಿಬರೇಷನ್ ಫ್ರೆಂಟ್ ಉಗ್ರ ಸಂಘಟನೆಯ ಮುಖ್ಯಸ್ಥ ಹರ್ಮಿಂದರ್ ಸಿಂಗ್ ಮಿಂಟೂನನ್ನು ಬಂಧಿಸುವಲ್ಲಿ ಪಂಜಾಬ್ ಮತ್ತು ದೆಹಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಇಡೀ ದೇಶವನ್ನು ಬೆಚ್ಚಿ ಬೀಳಿಸಿದ್ದ ಪಂಜಾಬ್ ನಭಾ ಜೈಲಿನ ಮೇಲಿನ ಉಗ್ರ ದಾಳಿ ಹಾಗೂ ಉಗ್ರರ ಪರಾರಿ ಪ್ರಕರಣ ಸಂಬಂಧ ತುರ್ತು ಕಾರ್ಯಾಚರಣೆ ಕೈಗೊಂಡಿದ್ದ ಪಂಜಾಬ್ ಪೊಲೀಸರು ಕೇವಲ 24 ಗಂಟೆಗಳೊಳಗೆ ದೆಹಲಿ ಪೊಲೀಸರ ನೆರವಿನೊಂದಿಗೆ ಉಗ್ರ ಹರ್ಮಿಂದರ್ ಸಿಂಗ್ ಮಿಂಟೂನನ್ನು ಬಂಧಿಸಿದ್ದಾರೆ. ಕಳೆದ ರಾತ್ರಿ ರಾಜಧಾನಿ ದೆಹಲಿಯಲ್ಲಿ ಕ್ಷಿಪ್ರಕಾರ್ಯಾಚರಣೆ ನಡೆಸಿದ ಪಂಜಾಬ್ ಮತ್ತು ದೆಹಲಿ ಪೊಲೀಸರು ಹರ್ಮಿಂದರ್ ಸಿಂಗ್ ಮಿಂಟೂನನ್ನು ಬಂಧಿಸಿದ್ದಾರೆ. ಇನ್ನುಳಿದ ಐದು ಮಂದಿ ಉಗ್ರರು ನಾಪತ್ತೆಯಾಗಿದ್ದು ಅವರ ಬಂಧನಕ್ಕೂ ವ್ಯಾಪಕ ಶೋಧ ನಡೆಸುತ್ತಿದ್ದಾರೆ.
49 ವರ್ಷ ವಯಸ್ಸಿನ ಹರ್ಮಿಂದರ್ ಸಿಂಗ್ ಮಿಂಟೂ ವಿರುದ್ಧ 10ಕ್ಕೂ ಹೆಚ್ಚು ದುಷ್ಕೃತ್ಯಗಳಲ್ಲಿ ಭಾಗಿಯಾದ ಆರೋಪವಿದ್ದು, 2014ರಲ್ಲಿ ದೆಹಲಿ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈತನನ್ನು ಬಂಧಿಸಲಾಗಿತ್ತು. ಖಲಿಸ್ತಾನ ಲಿಬರೇಷನ್ ಫ್ರಂಟ್ ಸಂಘಟನೆಯ ಹೆಸರಲ್ಲಿ ಈತ ಹಲವು ದುಷ್ಕೃತ್ಯಗಳಲ್ಲಿ ಪಾಲ್ಗೊಂಡಿದ್ದ. ಅಲ್ಲದೆ ಈತ ಪಾಕಿಸ್ತಾನದ ಐಎಸ್ ಐನೊಂದಿಗೂ ನಿಕಟ ಸಂಪರ್ಕ ಹೊಂದಿದ್ದ ಎಂದು ಹೇಳಲಾಗುತ್ತಿದೆ.
ಒಟ್ಟಾರೆ ಇಡೀ ದೇಶದ ಆತಂಕಕ್ಕೆ ಕಾರಣವಾಗಿದ್ದ ನಭಾ ಜೈಲಿನಿಂದ ಉಗ್ರರು ಪರಾರಿಯಾದ ಪ್ರಕರಣ ಸಂಬಂಧ ಪೊಲೀಸರು ಕಾರ್ಯಾಚರಣೆ ಪ್ರಮುಖ ಉಗ್ರನನ್ನು ಬಂಧಿಸಿದ್ದು, ಉಳಿದ ಉಗ್ರರ ಬಂಧನಕ್ಕೆ ವ್ಯಾಪಕ ಬಲೆ ಬೀಸಿದ್ದಾರೆ.
Advertisement