ಕೇಂದ್ರದ ನೂತನ ಕಾಯ್ದೆಯಿಂದ ಕಾವೇರಿ ನದಿ ವಿವಾದ ಇತ್ಯರ್ಥ!

ಅಂತರ ರಾಜ್ಯ ನದಿ ನೀರು ಹಂಚಿಕೆ ವಿಚಾರಕ್ಕೆ ಸಂಬಂಧಿಸದಂತೆ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆಯನ್ನಿರಿಸಿದ್ದು, ನದಿ ನೀರಿ ಹಂಚಿಕೆ ಮೇಲೆ ಪರಿಣಾಮ ಬೀರಬಲ್ಲ ಮಹತ್ವದ ಕಾಯ್ದೆಯೊಂದನ್ನು ಜಾರಿಗೆ ತರಲು ಮುಂದಾಗಿದೆ.
ಕಾವೇರಿ ವಿವಾದ (ಸಾಂದರ್ಭಿಕ ಚಿತ್ರ)
ಕಾವೇರಿ ವಿವಾದ (ಸಾಂದರ್ಭಿಕ ಚಿತ್ರ)

ನವದೆಹಲಿ: ಅಂತಾರಾಜ್ಯ ನದಿ ನೀರು ಹಂಚಿಕೆ ವಿಚಾರಕ್ಕೆ ಸಂಬಂಧಿಸದಂತೆ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆಯನ್ನಿರಿಸಿದ್ದು, ನದಿ ನೀರಿ ಹಂಚಿಕೆ ಮೇಲೆ ಪರಿಣಾಮ ಬೀರಬಲ್ಲ ಮಹತ್ವದ  ಕಾಯ್ದೆಯೊಂದನ್ನು ಜಾರಿಗೆ ತರಲು ಮುಂದಾಗಿದೆ.

ನಿತ್ಯದ ಜೀವನಕ್ಕಾಗಿ ಅಗತ್ಯ ಪ್ರಮಾಣದ ನೀರು ಪಡೆಯುವುದು ಜನರ ಹಕ್ಕು ಎಂದು ಪರಿಗಣಿಸುವ ರಾಷ್ಟ್ರೀಯ ಜಲ ಮಸೂದೆಯ ಅಂತಿಮ ಕರಡನ್ನು ಕೇಂದ್ರ ಸರ್ಕಾರ ಬಿಡುಗಡೆಗೊಳಿಸಿದೆ.
ಮೂಲಗಳ ಪ್ರಕಾರ ವಿವಿಧ ರಾಜ್ಯಗಳಲ್ಲಿನ ಜಲಾನಯನ ಪ್ರದೇಶಗಳಲ್ಲಿ ನೀರು ನಿರ್ವಹಣೆ, ರಾಜ್ಯಗಳಿಗೆ ಸೇರಬೇಕಾದ ನೀರಿನ ಪ್ರಮಾಣ ನಿಗದಿ, ನದಿ ನೀರು ಕುರಿತ ಅಂತಾರಾಜ್ಯ ವಿವಾದ  ಇತ್ಯರ್ಥಕ್ಕೆ ಈ ಮಸೂದೆ ಸಹಕಾರಿಯಾಗಲಿದೆ ಎಂದು ಹೇಳಲಾಗುತ್ತಿದೆ. ಇನ್ನು ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ನಡುವಿನ ದಶಕಗಳ ಹಿಂದಿನ ಕಾವೇರಿ ನದಿ ನೀರು ಹಂಚಿಕೆ  ವಿವಾದಕ್ಕೂ ಈ ಕಾಯ್ದೆ ತಾರ್ಕಿಕ ಅಂತ್ಯ ಹಾಡುವ ನಿರೀಕ್ಷೆಗಳು ಗರಿಗೆದರಿದೆ.

ಮಸೂದೆಯಲ್ಲೇನಿದೆ?
ಕೇಂದ್ರ ಸರ್ಕಾರ ಮಂಡಿಸಲು ಉದ್ದೇಶಿಸಿರುವ ನೂತನ ಮಹತ್ವದ ಮಸೂದೆಯ ಅನ್ವಯ ನೀರು ಪ್ರತಿಯೊಬ್ಬನ ನಾಗರಿಕನ ಹಕ್ಕಾಗಿದ್ದು, ಬೇಕಾದಷ್ಟು ನೀರು ಪಡೆಯುವುದು ಆತನ  ಮೂಲಭೂತ ಹಕ್ಕಾಗಿದೆ ಎಂಬ ವಾದವನ್ನು ನೂತನ ಮಸೂದೆ ಪ್ರತಿಪಾದಿಸಲಿದೆ. ಪ್ರಮುಖವಾಗಿ ಅಂತಾರಾಜ್ಯ ಜಲಾನಯನ ಪ್ರದೇಶಗಳಲ್ಲಿ ನದಿಗಳ ಸಂರಕ್ಷಣೆ ಹಾಗೂ ಅಭಿವೃದ್ಧಿಗಾಗಿ  ಪ್ರತ್ಯೇಕ ಪ್ರಾಧಿಕಾರ ರಚಿಸುವ ಕುರಿತು ಈ ಮಸೂದೆಯಲ್ಲಿ ಉಲ್ಲೇಖಿಸಲಾಗಿದೆ.

"ನದಿಗಳು ಯಾವುದೇ ರಾಜ್ಯವೊಂದರ ಆಸ್ತಿಯಲ್ಲ. ಅದು ದೇಶದ ಆಸ್ತಿಯಾಗಿದೆ ಎಂಬುದನ್ನು ಎಲ್ಲ ರಾಜ್ಯಗಳೂ ಅರಿಯಬೇಕು. ನದಿಗಳು ಯಾವ ರಾಜ್ಯಗಳ ಮೂಲಕ ಹರಿಯುತ್ತವೆಯೊ ಆ  ರಾಜ್ಯಗಳಿಗೆ ನೀರು ಬಳಕೆಯ ಹಕ್ಕಿದೆ. ನಿತ್ಯದ ಜೀವನ ನಡೆಸಲು ಅಗತ್ಯವಾದ ನೀರು ಪಡೆಯುವ ಹಕ್ಕು ಪ್ರತಿ ನಾಗರಿಕನಿಗೂ ಇದೆ. ಯಾವುದೇ ರಾಜ್ಯದ ನದಿಪಾತ್ರದ ವ್ಯಕ್ತಿಯು ಈ ಹಕ್ಕಿನಿಂದ  ವಂಚಿತನಾಗಬಾರದು" ಎಂದು ಕರಡಿನಲ್ಲಿ ಉಲ್ಲೇಖಿಸಲಾಗಿದೆ. ಅಂತೆಯೇ "ಜಾತಿ, ಲಿಂಗ, ವಯಸ್ಸು, ಆರ್ಥಿಕ ಸಾಮರ್ಥ್ಯ, ಸಮುದಾಯದ ಆಧಾರದಲ್ಲಿ ನೀರು ಹಂಚಿಕೆ ಕುರಿತು ತಾರತಮ್ಯ  ಮಾಡುವಂತಿಲ್ಲ. ಅಂತರ್ಜಲ ಹೆಚ್ಚಳ ಸೇರಿದಂತೆ ನೀರಿನ ಮೂಲಗಳ ಸಂರಕ್ಷಣೆಯನ್ನು ರಾಜ್ಯಗಳು ಸಮರ್ಪಕವಾಗಿ ಮಾಡಬೇಕು ಎಂದೂ ಹೇಳಲಾಗಿದೆ.

ಅಂತಾರಾಜ್ಯ ನದಿ ನೀರಿನ ವಿಚಾರಕ್ಕೆ ಸಂಬಂಧಿಸಿದಂತೆ ಎಲ್ಲ ಮಾಹಿತಿಗಳನ್ನು ರಾಜ್ಯಗಳು ಪರಸ್ಪರ ಹಂಚಿಕೊಳ್ಳಬಹುದು. ಗೌಪ್ಯತೆಗೆ ಆದ್ಯತೆ ನೀಡದೇ ನದಿ ನೀರಿನ ಕುರಿತಾದ  ಮಾಹಿತಿಯನ್ನು ಸಾರ್ವಜನಿಕಗೊಳಿಸಬಹುದು. ಅಂತಾರಾಜ್ಯ ನದಿ ನೀರಿನ ಒಪ್ಪಂದಗಳು 25-30 ವರ್ಷಕ್ಕೊಮ್ಮೆ ಪರಿಶೀಲನೆಯಾಗಬೇಕು. ಪರಿಸ್ಥಿತಿ ಆಧರಿಸಿ ಒಪ್ಪಂದಕ್ಕೆ ತಿದ್ದುಪಡಿ  ತರಬಹುದು ಎಂದು ಕರಡಿನಲ್ಲಿ ಹೇಳಲಾಗಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಕೇಂದ್ರ ಜಲಸಂಪನ್ಮೂಲ ಕಾರ್ಯದರ್ಶಿ ಶಶಿ ಶೇಖರ್ ಅವರು, ತಮ್ಮಲ್ಲಿ ಹರಿಯುವ ನದಿಗಳ ಮೇಲೆ ಎಲ್ಲ ರಾಜ್ಯಗಳಿಗೂ ಸಮಾನ ಹಕ್ಕು ಇರಲಿದೆಯಾದರೂ, ನದಿ  ನೀರನ್ನು ಸಮಾನತೆ ಬದಲು ನ್ಯಾಯ ಸಮ್ಮತವಾಗಿ ಹಂಚಿಕೆ ಮಾಡಬೇಕು ಎಂದು ಮಸೂದೆಯ ಕರಡಿನಲ್ಲಿ ಪ್ರಸ್ತಾಪಿಸಲಾಗಿದೆ. ಅಂತಾರಾಜ್ಯ ನದಿಗಳಲ್ಲಿ ನದಿ ತೀರದ ಮೇಲಿನ ರಾಜ್ಯ  ಎಚ್ಚರಿಕೆಯ ನಡೆ ಅನುಸರಿಸಬೇಕು. ನದಿ ಹರಿಯುವ ಮುಂದಿನ ರಾಜ್ಯಗಳಿಗೆ ನೀರಿನ ಪ್ರಮಾಣ, ಬಿಡುಗಡೆ ಮತ್ತಿತರ ವಿಚಾರ ಕುರಿತು ಮೊದಲೇ ಮಾಹಿತಿ ನೀಡಬೇಕು. ಆ ರಾಜ್ಯಗಳೊಂದಿಗೆ  ಚರ್ಚಿಸಿ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಬೇಕು. ನದಿ ನೀರಿನ ಸಂಗ್ರಹ ಪ್ರದೇಶ, ಯಾವ ರಾಜ್ಯಕ್ಕೆ ಎಷ್ಟು ನೀರು ಅಗತ್ಯ ಎಂಬುದನ್ನು ವೈಜ್ಞಾನಿಕ ಕ್ರಮದಿಂದ ನಿರ್ಧರಿಸಲಾಗುವುದು ಎಂದು   ಮಾಹಿತಿ ನೀಡಿದ್ದಾರೆ.

ಇದೇ ತಿಂಗಳಾಂತ್ಯದಲ್ಲಿ ಈ ಮಹತ್ವದ ಕುರಿತು ಕೇಂದ್ರ ಸಂಪುಟದಲ್ಲಿ ಚರ್ಚೆ ನಡೆಯಲಿದ್ದು, ಮುಂದಿನ ಸಂಸತ್ ಅಧಿವೇಶನದಲ್ಲಿ ಮಂಡನೆಯಾಗುವ ನಿರೀಕ್ಷೆಯಿದೆ. ನೀರಿನ ವಿಚಾರ ರಾಜ್ಯಗಳ  ವ್ಯಾಪ್ತಿಗೆ ಬರಲಿದ್ದು, ಕೇಂದ್ರ ಸರ್ಕಾರ ಹೊಸ ಮಸೂದೆಯನ್ನು ಸಂಸತ್​ನಲ್ಲಿ ಮಂಡಿಸಿ ಅನುಮೋದನೆ ಪಡೆದುಕೊಂಡರೂ ಕೂಡ ರಾಜ್ಯಗಳು ಒಪ್ಪಿದಲ್ಲಿ ಮಾತ್ರ ಇದು ಕಾಯ್ದೆಯಾಗಿ ಜಾರಿಗೆ ಬರಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com