ಆಂಧ್ರ-ಒಡಿಶಾ ಗಡಿಯಲ್ಲಿ ಭೀಕರ ಎನ್ ಕೌಂಟರ್; 23 ಮಾವೋವಾದಿಗಳ ಸಾವು, ಇಬ್ಬರು ಪೊಲೀಸರಿಗೆ ಗಾಯ

ಆಂಧ್ರ ಪ್ರದೇಶ ಹಾಗೂ ಒಡಿಶಾ ಗಡಿ ಪ್ರದೇಶದಲ್ಲಿ ಭೀಕರ ಎನ್ ಕೌಂಟರ್ ನಡೆಸಲಾಗಿದ್ದು, ಬರೊಬ್ಬರಿ 23 ಮಾವೋವಾದಿಗಳನ್ನು ಹೊಡೆದುರುಳಿಸಲಾಗಿದೆ ಎಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮಲ್ಕನ್ ಗಿರಿ: ಆಂಧ್ರ ಪ್ರದೇಶ ಹಾಗೂ ಒಡಿಶಾ ಗಡಿ ಪ್ರದೇಶದಲ್ಲಿ ಭೀಕರ ಎನ್ ಕೌಂಟರ್ ನಡೆಸಲಾಗಿದ್ದು, ಬರೊಬ್ಬರಿ 23 ಮಾವೋವಾದಿಗಳನ್ನು ಹೊಡೆದುರುಳಿಸಲಾಗಿದೆ ಎಂದು ತಿಳಿದುಬಂದಿದೆ.

ಮಾವೋವಾದಿಗಳು ಇರುವ ಕುರಿತು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಎನ್ ಕೌಂಟರ್ ನಡೆಸಿ 23 ಮಂದಿ ಮಾವೋವಾದಿಗಳನ್ನು ಕೊಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಈ  ವೇಳೆ ಇಬ್ಬರು ಪೊಲೀಸರಿಗೆ ಗುಂಡೇಟು ತಗುಲಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಮೂಲಗಳ ಪ್ರಕಾರ ಒಡಿಶಾದ ಮಲ್ಕಗಿರಿಯಿಂದ ಕೇವಲ 10 ಕಿ.ಮೀ ದೂರದಲ್ಲಿರುವ ಎವೋಬಿ ಬಳಿ ಮಾವೋವಾದಿ ಮುಖಂಡರು ಸಭೆ ನಡೆಸುತ್ತಿದ್ದರು ಎಂಬ ಖಚಿತ ಮಾಹಿತಿ ಮೇರೆಗೆ  ಕಾರ್ಯಾಚರಣೆ ನಡೆಸಲಾಗಿದ್ದು, ಆಂಧ್ರ ಪ್ರದೇಶದ ಗ್ರೇಹೌಂಡ್ಸ್ ಹಾಗೂ ಒಡಿಶಾದ ಎಸ್ ಒಟಿ ಪೊಲೀಸರ ತಂಡ ದಾಳಿ ನಡೆಸಿದೆ. ಪೊಲೀಸರ ಆಗಮನವಾಗುತ್ತಿದ್ದಂತೆಯೇ ಪೊಲೀಸರತ್ತ  ಮಾವೋವಾದಿಗಳು ಗುಂಡು ಹಾರಿಸಲು ಆರಂಭಿಸಿದ್ದು, ಪ್ರತಿದಾಳಿ ನಡೆಸಿದ ಪೊಲೀಸರು 23 ಮಂದಿ ಮಾವೋವಾದಿಗಳನ್ನು ಕೊಂದು ಹಾಕಿದ್ದಾರೆ.

ಅಂತೆಯೇ ಈ ವೇಳೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಎಕೆ47, ಎಸ್ ಎಲ್ ಆರ್ ಶಸ್ತ್ರಾಸ್ತ್ರಗಳನ್ನು ಜಪ್ತಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಪೊಲೀಸ್ ಮೂಲಗಳ ಪ್ರಕಾರ ಸುಮಾರು 50ರಿಂದ 60 ಮಂದಿ ಮಾವೋವಾದಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. ಇದರ ಖಚಿತ ಆಧಾರದ ಮೇಲೆ ದಾಳಿ ನಡೆಸಲಾಗಿತ್ತು. ಹತ್ತಾರು ಮಂದಿ  ಸಾವಿಗೀಡಾಗುತ್ತಿದ್ದಂತೆಯೇ ಉಳಿದ ಮಾವೋವಾದಿಗಳು ಅಲ್ಲಿಂದ ಕಾಲ್ಕಿತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಸ್ತುತ ಘಟನಾ ಪ್ರದೇಶದಲ್ಲಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದು,  ಉಳಿದ ಮಾವೋವಾದಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com