
ರೋಮ್: ಇಟಲಿಯಲ್ಲಿ ತಡರಾತ್ರಿ ಪ್ರಬಲ ಅವಳಿ ಭೂಕಂಪನ ಸಂಭವಿಸಿದ್ದು, ಭೂಕಂಪನದ ತೀವ್ರತೆಗೆ ನೂರಾರು ಕಟ್ಟಡಗಳು ಧರೆಗುರುಳಿವೆ ಎಂದು ಹೇಳಲಾಗುತ್ತಿದೆ.
ಪ್ರಬಲ ಅವಳಿ ಭೂಕಂಪನಕ್ಕೆ ಇಟಲಿ ತತ್ತರಿಸಿಹೋಗಿದ್ದು, ರೋಮ್ ನಗರದ ಹಲವು ಕಟ್ಟಡಡಗಳು ನೆಲಕ್ಕುರುಳಿವೆ. 5.5 ತೀವ್ರತೆಯ ಪ್ರಬಲ ಭೂಕಂಪನ ಸಂಭವಿಸಿದ ಬೆನ್ನಲ್ಲೇ ಅದಕ್ಕಿಂತಲೂ ಹೆಚ್ಚಿನ ತೀವ್ರತೆ ಕಂಪನ ಸಂಭವಿಸಿದ್ದು, ಹಲವು ಕಟ್ಟಡಗಳು ನೆಲಸಮಗೊಂಡಿವೆ. ಘಟನೆಯಲ್ಲಿ ಹಲವು ಸಾವಿಗೀಡಾಗಿರುವ ಶಂಕೆ ವ್ಯಕ್ತವಾಗುತ್ತಿದ್ದು, ಸಾವಿನ ಕುರಿತು ಈ ವರೆಗೂ ಯಾವುದೇ ವರದಿಯಾಗಿಲ್ಲ.
ಆದರೆ ಮಧ್ಯ ಇಟಲಿಯ ಪ್ರಮುಖ ನಗರಗಳಲ್ಲಿ ಬೃಹತ್ ಕಟ್ಟಡಗಳಿಗೆ ಭಾರಿ ಹಾನಿಯಾಗಿವೆ ಎಂದು ತಿಳಿದುಬಂದಿದೆ. ಭೂಕಂಪನದ ಕೇಂದ್ರ ಬಿಂದು ಮಸೆರೆಟಾ ಪಟ್ಟಣ ಎಂದು ತಿಳಿದುಬಂದಿದ್ದು, ಈ ಪಟ್ಟಣದ ಸುತ್ತಮುತ್ತಲಿರುವ ಕ್ಯಾಸ್ಟಲ್ ಸ್ಯಾಂಟಗೆಲೋ ಸುಲ್ ನೆರಾ, ವಿಸ್ಸೋ ಮತ್ತು ಉಸ್ಸಿಟಾ ನಗರಗಳಿಗೂ ಹಾನಿಯಾಗಿದೆ ಎಂದು ತಿಳಿದುಬಂದಿದೆ. ಇನ್ನು ರೋಮ್ ನಗರದಲ್ಲಿ ವಿದೇಶಿ ಪ್ರತಿನಿಧಿಗಳು ತಂಗಿದ್ದ ಹೊಟೆಲ್ ಗೆ ಭೂಕಂಪನದಿಂದ ಹಾನಿಯಾಗಿದ್ದು, ಕೂಡಲೇ ಅಧಿಕಾರಿಗಳನ್ನು ರಕ್ಷಣೆ ಮಾಡಲಾಗಿದೆ. ಅಲ್ಲದೆ ಅವರನ್ನು ಸುರಕ್ಷಿತ ಪ್ರದೇಶಕ್ಕೆ ರವಾನಿಸಲಾಗಿದೆ.
ಆದರೆ ಇಟಲಿ ಹವಾಮಾನ ಅಧಿಕಾರಿಗಳು ತಿಳಿಸಿರುವಂತೆ ಇದು ಪ್ರಬಲ ಭೂಕಂಪನವೇ ಆದರೂ ಪರಿಸ್ಥಿತಿಯನ್ನು ದುರಂತ ಎಂದು ಘೋಷಣೆ ಮಾಡುವಷ್ಟು ಪ್ರಬಲವಾಗಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಸ್ಥಳಕ್ಕೆ ಸ್ಥಳೀಯ ಅಗ್ನಿ ಶಾಮಕ ದಳದ ಸಿಬ್ಬಂದಿ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳಗಳ ಸಿಬ್ಬಂದಿ ದೌಡಾಯಿಸಿ ಕಾರ್ಯಾಚರಣೆ ನಡೆಸಿದ್ದಾರೆ.
Advertisement