ಉರಿ ಉಗ್ರ ದಾಳಿ; ಜೈಷ್ ಇ ಮೊಹಮದ್ ಸಂಘಟನೆಯಿಂದ ಕುಕೃತ್ಯ ಎಂದ ಭಾರತೀಯ ಸೇನೆ

ಕಾಶ್ಮೀರದ ಉರಿ ಸೆಕ್ಟರ್ ನಲ್ಲಿ ನಡೆದ ಭೀಕರ ಉಗ್ರ ದಾಳಿಯನ್ನು ಕುಖ್ಯಾತ ಉಗ್ರಗಾಮಿ ಸಂಘಟನೆ ಜೈಶ್ ಇ ಮೊಹಮದ್ ಉಗ್ರಗಾಮಿಗಳು ಮಾಡಿದ್ದಾರೆ ಎಂದು ಭಾರತೀಯ ಸೇನಾ ಮುಖ್ಯಸ್ಥರು ತಿಳಿಸಿದ್ದಾರೆ.
ಉರಿ ಸೆಕ್ಟರ್ ನಲ್ಲಿ ಉಗ್ರ ದಾಳಿ (ಸಂಗ್ರಹ ಚಿತ್ರ)
ಉರಿ ಸೆಕ್ಟರ್ ನಲ್ಲಿ ಉಗ್ರ ದಾಳಿ (ಸಂಗ್ರಹ ಚಿತ್ರ)

ಶ್ರೀನಗರ: ಕಾಶ್ಮೀರದ ಉರಿ ಸೆಕ್ಟರ್ ನಲ್ಲಿ ನಡೆದ ಭೀಕರ ಉಗ್ರ ದಾಳಿಯನ್ನು ಕುಖ್ಯಾತ ಉಗ್ರಗಾಮಿ ಸಂಘಟನೆ ಜೈಶ್ ಇ ಮೊಹಮದ್ ಉಗ್ರಗಾಮಿಗಳು ಮಾಡಿದ್ದಾರೆ ಎಂದು ಭಾರತೀಯ ಸೇನಾ  ಮುಖ್ಯಸ್ಥರು ತಿಳಿಸಿದ್ದಾರೆ.

ಉರಿ ಸೆಕ್ಟರ್ ನಲ್ಲಿ ನಡೆದ ಉಗ್ರ ದಾಳಿ ಸಂಬಂಧ ಇಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಲೆಫ್ಟಿನೆಂಟ್ ಜನರಲ್ ರಣಬೀರ್ ಸಿಂಗ್ ಅವರು, ಮಾಸ್ಟರ್ ಮೈಂಡ್ ಅಜರ್ ಮಸೂದ್  ನೇತೃತ್ವದ ಜೈಶ್ ಇ ಮೊಹಮದ್ ಸಂಘಟನೆಯ ಉಗ್ರರು ಈ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ 17 ಯೋಧರು ಹುತಾತ್ಮರಾಗಿದ್ದು, 4 ಮಂದಿ ಉಗ್ರರು ಹತರಾಗಿದ್ದಾರೆ. ಉರಿ ಸೆಕ್ಟರ್ ನಲ್ಲಿ  ಸೈನಿಕರ ಸ್ಥಳಾಂತರ ಪ್ರಕ್ರಿಯೆ ನಡೆಯುತ್ತಿದ್ದ ವೇಳೆಯಲ್ಲಿ ಬೆಳಗ್ಗೆ ಸುಮಾರು 5.30ರ ಸುಮಾರಿನಲ್ಲಿ ಉಗ್ರರು ಏಕಾಏಕಿ ದಾಳಿ ನಡೆಸಿದ್ದಾರೆ. ಕ್ಯಾಂಪ್ ಟೆಂಟ್ ಗೆ ಬೆಂಕಿ ಹೊತ್ತಿದ್ದರಿಂದ ಬಹುತೇಕ  ಯೋಧರು ಬೆಂಕಿಗಾಹುತಿಯಾಗಿ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದರು.

ಇದೇ ವೇಳೆ ಕಾರ್ಯಾಚರಣೆ ನಡೆಸಿದ ಭಾರತೀಯ ಸೇನೆಯ ಯೋಧರು ಮೃತ ಉಗ್ರರಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದು, ಈ ಪೈಕಿ 4 ಎಕೆ47 ಬಂದೂಕು,  ಗ್ರೆನೇಡ್ ಲಾಂಚರ್ ಗಳು, ಸಾಕಷ್ಟು ಜೀವಂತ ಗ್ರೆನೇಡ್ ಗಳು ಪತ್ತೆಯಾಗಿವೆ ಎಂದು ರಣ್ ಬೀರ್ ಸಿಂಗ್ ತಿಳಿಸಿದರು.

ಶ್ರೀನಗರ ಹೈವೇಯಲ್ಲಿ ಸ್ಫೋಟಕ್ಕೆ ಉಗ್ರರ ಯತ್ನ; ಮುಂದುವರೆದ ಶೋಧಕಾರ್ಯ

ಇನ್ನು ಶ್ರೀನಗರ ಹೆದ್ದಾರಿಯಲ್ಲಿ ಅವಿತಿದ್ದಾರೆ ಎಂದು ಹೇಳಲಾಗುತ್ತಿರುವ ಉಗ್ರರಿಗಾಗಿ ನಡೆಯುತ್ತಿರುವ ಶೋಧ ಕಾರ್ಯ ಮುಂದುವರೆದಿದ್ದು, ಹೆದ್ದಾರಿಯಾದ್ಯಂತ ಸೈನಿಕರು ಕಟ್ಟೆಚ್ಚರ  ವಹಿಸಿದ್ದಾರೆ. ಹೆದ್ದಾರಿಯುದ್ದಕ್ಕೂ ನಾಕಾಬಂದಿ ಹಾಕಲಾಗಿದ್ದು, ತೀವ್ರ ತಪಾಸಣೆ ನಡೆಸಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com