ನವದೆಹಲಿ: ಕಾವೇರಿ ವಿಚಾರದಲ್ಲಿ ಮತ್ತೆ ರಾಜ್ಯಕ್ಕೆ ಹಿನ್ನೆಡೆಯಾಗಿದ್ದು, ಸುಪ್ರೀಂ ಕೋರ್ಟ್ ನಂತರ ಇದೀಗ ಕಾವೇರಿ ಮೇಲುಸ್ತುವಾರಿ ಸಮಿತಿ(ಸಿಎಂಸಿ) ಸಹ ತಮಿಳುನಾಡಿಗೆ 10 ದಿನಗಳ ಕಾಲ ನಿತ್ಯ ಮೂರು ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಸೋಮವಾರ ಆದೇಶಿಸಿದೆ.
ಇಂದು ದೆಹಲಿಯ ಶ್ರಮಶಕ್ತಿ ಭವನದಲ್ಲಿ ನಡೆದ ಕಾವೇರಿ ಮೇಲುಸ್ತುವಾರಿ ಸಮಿತಿ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸಮಿತಿ ಅಧ್ಯಕ್ಷ ಶಶಿಶೇಖರ್ ಅವರು, ಸಭೆಯಲ್ಲಿ ನೀರಿನ ಒಳ ಹರಿವು, ಹೊರ ಹರಿವು, ಜಲಾಶಯದ ನೀರಿನ ಮಟ್ಟ ಸೇರಿದಂತೆ ಎಲ್ಲದರ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ ಎಂದರು.
ಪ್ರತಿ ವರ್ಷ ಇದೇ ರೀತಿ ಕಾವೇರಿ ನೀರಿ ಸಮಸ್ಯೆಯಾಗುತ್ತದೆ. ಹೀಗಾಗಿ ಎಲ್ಲಾ ಅಂಶಗಳನ್ನು ಗಮನಿಸಿ ಅಂತಿಮವಾಗಿ ಸೆಪ್ಟೆಂಬರ್ 21ರಿಂದ 30ರವರೆಗೆ 10 ದಿನಗಳ ಕಾಲ ಮೂರು ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಕರ್ನಾಟಕಕ್ಕೆ ಸೂಚಿಸಲಾಗಿದೆ ಎಂದರು. ಅಲ್ಲದೆ ಈ ಆದೇಶ ನಿಮಗೆ ಸಮಧಾನ ತರದಿದ್ದರೆ ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸಬಹುದು ಎಂದು ಎರಡೂ ರಾಜ್ಯಗಳಿಗೆ ಸಲಹೆ ನೀಡಿದ್ದಾರೆ.
ತಮಿಳುನಾಡಿಗೆ ಕಾವೇರಿ ನೀರು ಬಿಡಲು ಸಾಧ್ಯವೇ ಇಲ್ಲ ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅರವಿಂದ್ ಜಾದವ್ ಅವರು ವಾದಿಸಿದ್ದರು. ಆದರೆ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ತಮಿಳುನಾಡು, ಕರ್ನಾಟಕ ನಿಗದಿಯಂತೆ ಬಿಡುಗಡೆ ಮಾಡಬೇಕಿರುವ ಕಾವೇರಿ ನೀರನ್ನು ಬಿಡಬೇಕೆಂದು ವಾದ ಮಂಡಿಸಿತು,
ಪ್ರಸ್ತುತ ನೀರು ಬಿಡಲಾಗುತ್ತಿದೆಯಾದರೂ ಸಾಂಬಾ ಬೆಳೆಗೆ ಮತ್ತಷ್ಟು ನೀರಿನ ಅವಶ್ಯಕತೆ ಇದೆ ಎಂಬುದು ತಮಿಳುನಾಡಿನ ವಾದವಾಗಿತ್ತು. ಆದರೆ ಕರ್ನಾಟಕ ಕುಡಿಯುವ ನೀರಿನ ಸಮಸ್ಯೆ ನಡುವೆಯೂ ಸುಪ್ರೀಂ ಕೋರ್ಟ್ ಆದೇಶದಂತೆ ತಮಿಳುನಾಡಿಗೆ ನೀರು ಹರಿಸಲಾಗುತ್ತಿದೆ. ಪ್ರಸ್ತುತ ಕರ್ನಾಟಕದ ಜಲಾಶಯಗಳ ಬರಿದಾಗ ತೊಡಗಿವೆ. ಹೀಗಾಗಿ ರಾಜ್ಯದ ಜನತೆಯ ಕುಡಿಯುವ ನೀರಿಗಾಗಿ ಈಗ ಅಳಿದುಳಿದಿರುವ ನೀರನ್ನೇ ಅವಲಂಭಿಸಬೇಕಿದೆ. ತಮಿಳುನಾಡಿಗೆ ನೀರು ಹರಿಸಲು ಸಾಧ್ಯವಿಲ್ಲ ಎಂಬುದು ಕರ್ನಾಟಕದ ವಾದವಾಗಿತ್ತು.