
ನವದೆಹಲಿ: ಷೇರುದಾರರಿಗೆ ಹಣ ವಾಪಸ್ ಮಾಡದ ಪ್ರಕರಣದಡಿಯಲ್ಲಿ ನ್ಯಾಯಾಲಯದ ವಿಚಾರಣೆ ಎದುರಿಸುತ್ತಿರುವ ಸಹಾರ ಸಂಸ್ಥೆ ಮುಖ್ಯಸ್ಥ ಸುಬ್ರತೋ ರಾಯ್ ಮತ್ತೆ ಜೈಲು ಹಕ್ಕಿಯಾಗುವ ಎಲ್ಲ ಲಕ್ಷಣಗಳೂ ಗೋಚರಿಸುತ್ತಿವೆ.
ಕಳೆದ ಮೇ ತಿಂಗಳಿನಿಂದ ಪೆರೋಲ್ ಮೇಲೆ ಹೊರಗಿರುವ ಸುಬ್ರತೋ ರಾಯ್ ಮತ್ತೆ ಜೈಲು ಬಂಧಿಯಾಗುವ ಸಾಧ್ಯತೆಗಳಿವೆ. ಈ ಹಿಂದೆ ಪೆರೋಲ್ ಮೇಲೆ ಹೊರಗೆ ಬಂದಿದ್ದ ಸುಬ್ರತೋ ರಾಯ್ ಅವರ ಪೆರೋಲ್ ಅವಧಿಯನ್ನು ವಿಸ್ತರಿಸಲು ಸರ್ವೋಚ್ಛ ನ್ಯಾಯಾಲಯ ಹಿಂದೇಟು ಹಾಕಿದ್ದು, ಈ ಕುರಿತು ಇಂದು ನಡೆದ ವಿಚಾರಣೆಯಲ್ಲಿ ಪೆರೋಲ್ ವಿಸ್ತರಿಸಲು ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿದೆ. ಅಂತೆಯೇ ಸುಬ್ರತೋರಾಯ್ ಅವರೊಂದಿಗೆ ಸಂಸ್ಥೆಯ ಇತರೆ ಇಬ್ಬರು ನಿರ್ದೇಶಕರನ್ನೂ ಕೂಡ ಸುಪ್ರೀಂಕೋರ್ಟ್ ಜೈಲಿಗಟ್ಟಿದೆ.
ಈ ಮೊದಲು ಪೆರೋಲ್ ವಿಸ್ತರಿಸಲು 300 ಕೋಟಿ ಹೆಚ್ಚುವರಿ ಹಣವನ್ನು ಜಮಾ ಮಾಡುವಂತೆ ಸುಪ್ರೀಂ ಕೋರ್ಟ್ ಹೇಳಿತ್ತಾದರೂ ಇದಕ್ಕೆ ಸುಬ್ರತೋರಾಯ್ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದ್ದರು. ಸುಬ್ರತೋ ರಾಯ್ ಪರ ವಾದ ಮಂಡಿಸಿದ ವಕೀಲ ರಾಜೀವ್ ಧವನ್ ಅವರು, ನ್ಯಾಯಾಲಯದ ಹೇಳಿಕೆ ನಿಜಕ್ಕೂ ನ್ಯಾಯಯುತವಾದದಲ್ಲ. ಸುಬ್ರತೋ ರಾಯ್ ಅವರು ಆಸ್ತಿ ಮಾರಾಟ ಮಾಡಿ ಷೇರುದಾರರಿಗೆ ಹಣ ನೀಡಲು ಸೆಬಿಯ ನೀತಿಗಳು ಅಡ್ಡಿಯಾಗಿವೆ. ಷೇರುದಾರರಿಗೆ ಹಣ ನೀಡುವ ಪ್ರಕ್ರಿಯೆಗಾಗಿ ಅವರ ಉಪಸ್ಥಿತಿ ಅನಿವಾರ್ಯವಾಗಿದೆ. ಹೀಗಾಗಿ ಅವರ ಪೆರೋಲ್ ಅವಧಿಯನ್ನು ವಿಸ್ತರಿಸಬೇಕು ಎಂದು ವಾದ ಮಂಡಿಸಿದರು.
ಆದರೆ ವಕೀಲ ರಾಜೀವ್ ಧವನ್ ಅವರ ವಾದವನ್ನು ನಿರಾಕರಿಸಿದ ನ್ಯಾಯಾಲಯ ಸುಬ್ರತೋ ರಾಯ್ ಅವರ ಪೆರೋಲ್ ವಿಸ್ತರಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. "ನ್ಯಾಯಾಲಯಕ್ಕೆ ಏನು ಮಾಡಬೇಕು ಎಂದು ಹೇಳಬೇಡಿ. ಮದ್ಯಂತರ ವ್ಯವಸ್ಥೆಯನ್ನು ರದ್ದುಗೊಳಿಸಲಾಗಿದ್ದು, ಸುಬ್ರತೋರಾಯ್ ಮತ್ತು ಅವರ ಸಂಗಡಿಗರನ್ನು ವಶಕ್ಕೆ ನೀಡಿ ಎಂದು ವಕೀಲರಿಗೆ ನ್ಯಾಯಾಲಯ ಸೂಚಿಸಿದೆ.
ಇದೇ ಪ್ರಕರಣ ಸಂಬಂಧ ವಿಚಾರಣೆ ನಡೆಸಿದ್ದ ನ್ಯಾಯಾಲಯ ಹೂಡಿಕೆದಾರರಿಗೆ 25 ಸಾವಿರ ಕೋಟಿರುಗಳನ್ನು ನಗದಾಗಿ ಪಾವತಿಸುವಂತೆ ಸೂಚನೆ ನೀಡಿತ್ತು. ಆದರೆ ಇದಕ್ಕೆ ಪ್ರತಿಕ್ರಿಯಿಸಿದ್ದ ಸಹಾರಾ ಸಂಸ್ಥೆ ಅಷ್ಟು ದೊಡ್ಡ ಮೊತ್ತವನ್ನು ನಗದಾಗಿ ಪಾವತಿ ಮಾಡಲು ಸಾಧ್ಯವಿಲ್ಲ ಎಂದು ಹೇಳಿತ್ತು.
Advertisement