ಪಾಕಿಸ್ತಾನ ಸಾರ್ಕ್ ಶೃಂಗಸಭೆಗೆ ಬಾಂಗ್ಲಾ, ಭೂತಾನ್ ಬಹಿಷ್ಕಾರ!

ಭಾರತದ ಬಳಿಕ ಸಾರ್ಕ್ ಶೃಂಗಸಭೆಗೆ ಬಾಂಗ್ಲಾದೇಶ, ಆಫ್ಘಾನಿಸ್ತಾನ ಹಾಗೂ ಭೂತಾನ್ ಸರ್ಕಾರಗಳು ಸಾರ್ಕ್ ಸಭೆಯನ್ನು ಬಹಿಷ್ಕರಿಸಿ ಪತ್ರ ಬರೆದಿವೆ.
ಪ್ರಧಾನಿ ನರೇಂದ್ರ ಮೋದಿ ಹಾಗೂ ಸಾರ್ಕ್ ಶೃಂಗಸಭೆ (ಸಂಗ್ರಹ ಚಿತ್ರ)
ಪ್ರಧಾನಿ ನರೇಂದ್ರ ಮೋದಿ ಹಾಗೂ ಸಾರ್ಕ್ ಶೃಂಗಸಭೆ (ಸಂಗ್ರಹ ಚಿತ್ರ)

ನವದೆಹಲಿ: ಉರಿ ಉಗ್ರ ದಾಳಿ ಕುರಿತಂತೆ ಪಾಕಿಸ್ತಾನದ ವಿರುದ್ಧ  ಭಾರತ ತನ್ನ ವಿರೋಧ ಮುಂದುವರೆಸಿದ್ದು, ಪಾಕಿಸ್ತಾನದಲ್ಲಿ ನಡೆಯುವ ಸಾರ್ಕ್ ಶೃಂಗಸಭೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು  ಹೇಳಿ ಸಭೆಯನ್ನು ಬಹಿಷ್ಕರಿಸಿತ್ತು. ಇದರ ಬೆನ್ನಲ್ಲೇ ಇತರೆ ಸಾರ್ಕ್ ರಾಷ್ಟ್ರಗಳೂ ಕೂಡ ಸಭೆಯನ್ನು ಬಹಿಷ್ಕರಿಸಿದ್ದು, ಬಾಂಗ್ಲಾದೇಶ, ಆಫ್ಘಾನಿಸ್ತಾನ ಹಾಗೂ ಭೂತಾನ್ ಸರ್ಕಾರಗಳು ಸಾರ್ಕ್  ಸಭೆಯನ್ನು ಬಹಿಷ್ಕರಿಸಿ ಪತ್ರ ಬರೆದಿವೆ.

ಇದೇ ನವೆಂಬರ್ 9 ಮತ್ತು 10ರಂದು ಪಾಕಿಸ್ತಾನ ರಾಜಧಾನಿ ಇಸ್ಲಾಮಾಬಾದಿನಲ್ಲಿ ಸಾರ್ಕ್ ಶೃಂಗಸಭೆ ನಡೆಯಲಿದ್ದು, ಈಗಾಗಲೇ ಭಾರತ ಸರ್ಕಾರ ತಾನು ಸಭೆಯಲ್ಲಿ ಪಾಲ್ಗೊಳ್ಳುವುದಿಲ್ಲ  ಎಂದು ಘೋಷಣೆ ಮಾಡಿದೆ. ಗಡಿಯಲ್ಲಿನ ಭಯೋತ್ಪಾದನೆಗೆ ಪಾಕಿಸ್ತಾನ ಕುಮ್ಮಕ್ಕು ನೀಡುತ್ತಿದ್ದು, ಇಂತಹ ಪರಿಸ್ಥಿತಿಯಲ್ಲಿ ಸಭೆಯಲ್ಲಿ ಪಾಲ್ಗೊಳ್ಳಲು ತಾನು ಸಿದ್ಧವಿಲ್ಲ ಎಂದು ಹೇಳಿ ಭಾರತ  ಸಭೆಯಿಂದ ಹಿಂದೆ ಸರಿದಿತ್ತು.  ಇದೀಗ ಭಾರತದ ಬೆನ್ನಿಗೆ ನಿಂತಿರುವ ಬಾಂಗ್ಲಾದೇಶ, ಆಫ್ಘಾನಿಸ್ತಾನ ಹಾಗೂ ಭೂತಾನ್ ಸರ್ಕಾರಗಳು ತಾವೂ ಕೂಡ ಶೃಂಗಸಭೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು  ಪತ್ರಬರೆದಿವೆ.

ಇನ್ನು ತನ್ನ ನಿಲುವಿನ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಬಾಂಗ್ಲಾದೇಶ ಸರ್ಕಾರ, ತನ್ನ ದೇಶದ ಆಂತರಿಕ ವಿಚಾರಗಳಲ್ಲಿ ತಲೆ ಹಾಕುತ್ತಿರುವ ದೇಶದಲ್ಲಿ ಸಾರ್ಕ್ ಶೃಂಗಸಭೆ  ನಡೆಯುತ್ತಿರುವುದು ಸರಿಯಲ್ಲ. ಹೀಗಾಗಿ ತಾನು ಸಭೆಯನ್ನು ಬಹಿಷ್ಕರಿಸಿರುವುದಾಗಿ ಹೇಳಿದೆ. ಇಂತಹುದೇ ಕಾರಣ ಒಡ್ಡಿ ಆಫ್ಘಾನಿಸ್ತಾನ ಕೂಡ ಶೃಂಗಸಭೆಯಿಂದ ಹಿಂದೆ ಸರಿದಿದೆ.
 ಸಾರ್ಕ್ ಶೃಂಗಸಭೆ ನಡಾವಳಿಗಳ ಪ್ರಕಾರ ಒಕ್ಕೂಟದ ಯಾವುದೇ ಒಂದು ರಾಷ್ಟ್ರ ಸಭೆಯನ್ನು ಬಹಿಷ್ಕರಿಸಿದರೆ ಶೃಂಗಸಭೆ ರದ್ದಾಗುತ್ತದೆ. ಹೀಗಾಗಿ ಪಾಕಿಸ್ತಾನದಲ್ಲಿ ಯೋಜನೆಯಾಗಿದ್ದ 2016ರ  ಶೃಂಗಸಭೆ ರದ್ದಾಗುವುದು ಬಹುತೇಕ ಖಚಿತವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com