ಕಾವೇರಿ ಕಿಚ್ಚು: ರಾಜ್ಯದ ಜನತೆಯ ಕ್ಷಮೆಯಾಚಿಸಿದ ಅಂಬರೀಶ್

ಕಾವೇರಿ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸದಿರುವುದಕ್ಕೆ ಬೇಸರ ಇದೆ. ಈ ಸಂಬಂಧ ನಾನು ರಾಜ್ಯದ ಜನತೆಯ ಕ್ಷಮೆಯಾಚಿಸುತ್ತೇನೆ...
ಅಂಬರೀಶ್
ಅಂಬರೀಶ್
Updated on
ಬೆಂಗಳೂರು: ಕಾವೇರಿ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸದಿರುವುದಕ್ಕೆ ಬೇಸರ ಇದೆ. ಈ ಸಂಬಂಧ ನಾನು ರಾಜ್ಯದ ಜನತೆಯ ಕ್ಷಮೆಯಾಚಿಸುತ್ತೇನೆ ಎಂದು ಮಾಜಿ ಸಚಿವ ಹಾಗೂ ಮಂಡ್ಯದ ಕಾಂಗ್ರೆಸ್ ಶಾಸಕ ಅಂಬರೀಶ್ ಅವರು ಬುಧವಾರ ಹೇಳಿದ್ದಾರೆ.
ರಾಜ್ಯದಲ್ಲಿ ಕಾವೇರಿ ಹೋರಾಟ ತೀವ್ರಗೊಂಡ ಸಂದರ್ಭದಲ್ಲಿ ವಿದೇಶ ಪ್ರವಾಸದಲ್ಲಿ ಅಂಬರೀಶ್ ಬಗ್ಗೆ ವ್ಯಾಪಕವಾಗಿ ಟೀಕೆ, ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಇಂದು ದಿಢೀರ್ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಮಂಡ್ಯದ ಗಂಡು, ನಾನೇನು ಮೋಜು ಮಾಡಲು, ಐಷಾರಾಮಿ ಜೀವನ ನಡೆಸಲು ಅಮೆರಿಕಕ್ಕೆ ಹೋಗಿರಲಿಲ್ಲ. ಅಕ್ಕ ಸಮ್ಮೇಳನದಲ್ಲಿ ಭಾಗವಹಿಸಲು ಹೋಗಿದ್ದೆ. ಅಲ್ಲಿ ಕನ್ನಡ ಭಾಷೆ, ಸಂಸ್ಕೃತಿ ಬಗ್ಗೆ ಮಾತನಾಡಿದ್ದೇನೆ ಎಂದರು.
ಕನ್ನಡಿಗರ ಆಸೆಗಾಗಿ ಅಮೆರಿಕಕ್ಕೆ ತೆರಳಿದ್ದೆ. ನಾನು ಯಾವುದೇ ಮೋಜು, ಮಸ್ತಿ ಮಾಡಲಿಕ್ಕೆ ಹೋಗಿಲ್ಲ. ಮೋಜು, ಮಸ್ತಿ ಮಾಡುವ ವಯಸ್ಸು ಕಳೆದುಹೋಗಿದೆ. ಆದರೆ ಕಾವೇರಿ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿರಲಿಲ್ಲ ಎಂಬ ಬಗ್ಗೆ ಮನಸ್ಸಿನಲ್ಲೇ ನೋವಿದೆ. ಕಾವೇರಿ ನೀರಿಗಾಗಿ ಮುಖ್ಯಮಂತ್ರಿಗಳು ಉತ್ತಮ ನಿರ್ಧಾರ ಕೈಗೊಂಡಿದ್ದಾರೆ. ಅದನ್ನು ನಾನು ಅಭಿನಂದಿಸುತ್ತೇನೆ ಎಂದರು.
ಕಾವೇರಿಗಾಗಿ ಕೇಂದ್ರ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದವನು ನಾನು. ಜನರ ಬಗ್ಗೆ ನನಗೆ ಕಾಳಜಿ ಇದೆ. ನಾನು ಈ ಮಟ್ಟಕ್ಕೆ ಏರಲು ಮಂಡ್ಯ ಜಿಲ್ಲೆಯ ಜನರ ಪ್ರೀತಿಯೇ ಕಾರಣ. ಸೆ.30ರ ಸುಪ್ರೀಂ ಕೋರ್ಟ್ ತೀರ್ಪು ನೋಡಿಕೊಂಡು ಮಂಡ್ಯಕ್ಕೆ ಭೇಟಿ ನೀಡುತ್ತೇನೆ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com