
ನವದೆಹಲಿ: ತನ್ನ ನೆಲದ ಉಗ್ರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಲ್ಲಿ ಪಾಕಿಸ್ತಾನದ ಪದೇ ಪದೇ ವಿಫಲವಾಗುತ್ತಿದೆ ಎಂದು ಅಮೆರಿಕ ಆಕ್ರೋಶ ವ್ಯಕ್ತಪಡಿಸಿದೆ.
ಜಮ್ಮು ಮತ್ತು ಕಾಶ್ಮೀರದ ಉರಿ ಸೆಕ್ಟರ್ ನಲ್ಲಿ ನಡೆದ ಉಗ್ರ ದಾಳಿ ಹಿನ್ನಲೆಯಲ್ಲಿ ನಿನ್ನೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಅವರಿಗೆ ಕರೆ ಮಾಡಿದ ಅಮೆರಿಕ ರಾಷ್ಟ್ರೀಯ ಭದ್ರತಾ ಸಲಹೆಗಾರರಾದ ಸುಸಾನ್ ರೈಸ್ ಅವರು, ಉರಿ ಉಗ್ರ ದಾಳಿಯಲ್ಲಿ ಹುತಾತ್ಮರಾದ 18 ಭಾರತೀಯ ಯೋಧರ ಸಾವಿಗೆ ವಿಷಾಧ ವ್ಯಕ್ತಪಡಿಸಿದರು. ಅಲ್ಲದೆ ಯೋಧರ ಕುಟುಂಬದೊಂದಿಗೆ ತಾವಿದ್ದು, ಭಾರತದ ಬೆನ್ನಿಗೆ ನಿಲ್ಲುವ ಆಶ್ವಾಸನೆ ನೀಡಿದರು.
"ಉಗ್ರ ವಿರೋಧಿ ಕಾರ್ಯಾಚರಣೆಯಲ್ಲಿ ಭಾರತದೊಂದಿಗೆ ಅಮೆರಿಕದ ಬೆಂಬಲ ಸದಾಕಾಲವಿರುತ್ತದೆ. ಜಾಗತಿಕ ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಅಮೆರಿಕ ಸದಾ ಮುಂದಿರುತ್ತದೆ ಎಂದು ರೈಸ್ ಹೇಳಿದರು. ಇದೇ ವೇಳೆ ಉಗ್ರ ದಾಳಿಯನ್ನು ಗಡಿಯಾಚೆಗಿನ ಅಪಾಯ ಎಂದು ಬಣ್ಣಿಸಿದ ರೈಸ್, ಅದನ್ನು ತಡೆಯುವ ಹೊಣೆಗಾರಿಕೆ ನಮ್ಮ ಮೇಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದೇ ವೇಳೆ ಪಾಕಿಸ್ತಾನವನ್ನು ತರಾಟೆಗೆ ತೆಗೆದುಕೊಂಡ ಅವರು, ಲಷ್ಕರ್ ಇ ತೊಯ್ಬಾ, ಜೈಷ್ ಇ ಮೊಹಮದ್ ನಂತಹ ತನ್ನ ನೆಲದ ಉಗ್ರಗಾಮಿ ಸಂಘಟನೆಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳುವಲ್ಲಿ ಪಾಕಿಸ್ತಾನ ಪದೇ ಪದೇ ವಿಫಲವಾಗುತ್ತಿದೆ. ಉಗ್ರ ನಿಗ್ರಹಕ್ಕೆ ಸಂಬಂಧಿಸಿದಂತೆ ನವಾಜ್ ಷರೀಫ್ ಸರ್ಕಾರದ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ".
ಭಾರತದ ಮೇಲೆ ದಾಳಿ ಮಾಡಿದ ಉಗ್ರಗಾಮಿಗಳು ಪಾಕಿಸ್ತಾನದಲ್ಲಿ ಸ್ವತಂತ್ರ ಹಕ್ಕಿಗಳಾಗಿ ಸಂಚರಿಸುತ್ತಿದ್ದಾರೆ. ಇಂತಹ ಬೆಳವಣಿಗೆಯನ್ನು ಒಪ್ಪಲು ಸಾಧ್ಯವಿಲ್ಲ ಎಂದು ರೈಸ್ ಹೇಳಿದ್ದಾರೆ. ಇದೇ ವೇಳೆ ಪ್ರಾದೇಶಿಕ ಶಾಂತಿ ಹಾಗೂ ಭದ್ರತಾ ಸ್ಥಿರತೆ ಕಾಯ್ದುಕೊಳ್ಳಲು ಭಾರತಕ್ಕೆ ಅಮೆರಿಕ ಸಕಲ ನೆರವು ನೀಡುವ ಆಶ್ವಾಸನೆಯನ್ನು ಕೂಡ ರೈಸ್ ನೀಡಿದ್ದಾರೆ. ಅಲ್ಲದೆ ಜಾಗತಿಕ ಭಯೋತ್ಪಾದನೆ ವಿರುದ್ಧ ವಿಶ್ವ ಸಮುದಾಯ ಒಗ್ಗೂಡಿ ಹೋರಾಡಬೇಕಿದೆ ಎಂದು ರೈಸ್ ಅಭಿಪ್ರಾಯಪಟ್ಟಿದ್ದಾರೆ.
ಮುಂಬೈ ದಾಳಿ, ಪಠಾಣ್ ಕೋಟ್ ಹಾಗೂ ಪ್ರಸ್ತುತ ಉರಿ ಉಗ್ರ ದಾಳಿಗಳ ಹಿಂದೆ ಪಾಕಿಸ್ತಾನ ಮೂಲದ ಉಗ್ರ ಕೈವಾಡದ ಕುರಿತು ಭಾರತ ಈಗಾಗಲೇ ಸಾಕಷ್ಟು ಸಾಕ್ಷ್ಯಗಳನ್ನು ಒದಗಿಸಿದ್ದರೂ, ಪಾಕಿಸ್ತಾನ ಮಾತ್ರ ಆ ಬಗ್ಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಉಗ್ರರು ಬಹಿರಂಗವಾಗಿಯೇ ತರಬೇತಿ ಪಡೆಯುತ್ತಿದ್ದಾರೆ. ಇಂದಿಗೂ ಸಾಕಷ್ಟು ಉಗ್ರರು ಪಾಕ್ ಆಕ್ರಮಿತ ಕಾಶ್ಮೀರದಿಂದ ಭಾರತದ ಗಡಿಯೊಳಗೆ ನುಸುಳಲು ಯತ್ನಿಸುತ್ತಿದ್ದಾರೆ. ಈ ಬಗ್ಗೆಯೂ ಸಾಕಷ್ಟು ದಾಖಲೆಗಳನ್ನು ಒದಗಿಸಲಾಗಿದೆಯಾದರೂ, ಪಾಕ್ ಮಾತ್ರ ಈ ಬಗ್ಗೆ ಜಾಣ ಕಿವುಡುತನ ಪ್ರದರ್ಶನ ಮಾಡುವ ಮೂಲಕ ಉಗ್ರತ್ವಕ್ಕೆ ಕುಮ್ಮಕ್ಕು ನೀಡುತ್ತಿದೆ. ಇದೀಗ ಅಮೆರಿಕ ಎಚ್ಚರಿಕೆಯನ್ನು ಪಾಕಿಸ್ತಾನ ಅದಾವ ನಿಟ್ಟಿನಲ್ಲಿ ಪರಿಗಣಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
Advertisement