ಭಾರತ ಸೇರಿದಂತೆ ವಿವಿಧ ಸದಸ್ಯ ರಾಷ್ಟ್ರಗಳ ಬಹಿಷ್ಕಾರ; ಸಾರ್ಕ್ ಶೃಂಗಸಭೆ ಮುಂದೂಡಿಕೆ

ಭಯೋತ್ಪಾದನೆ ವಿಚಾರದಲ್ಲಿ ಮೊಂಡುತನ ಪ್ರದರ್ಶಿಸುತ್ತಿರುವ ಪಾಕಿಸ್ತಾನಕ್ಕೆ ಮರ್ಮಾಘಾತವಾಗಿದ್ದು, ಇಸ್ಲಾಮಾಬಾದಿನಲ್ಲಿ ನಡೆಯಬೇಕಿದ್ದ 19 ಸಾರ್ಕ್ ಶೃಂಗಸಭೆ ಭಾರತದ ಅಸಹಕಾರದಿಂದಾಗಿ ಮುಂದೂಡಲ್ಪಟ್ಟಿದೆ.
ಪ್ರಧಾನಿ ನರೇಂದ್ರ ಮೋದಿ ಹಾಗೂ ಸಾರ್ಕ್ ಶೃಂಗಸಭೆ (ಸಂಗ್ರಹ ಚಿತ್ರ)
ಪ್ರಧಾನಿ ನರೇಂದ್ರ ಮೋದಿ ಹಾಗೂ ಸಾರ್ಕ್ ಶೃಂಗಸಭೆ (ಸಂಗ್ರಹ ಚಿತ್ರ)

ಇಸ್ಲಾಮಾಬಾದ್: ಭಯೋತ್ಪಾದನೆ ವಿಚಾರದಲ್ಲಿ ಮೊಂಡುತನ ಪ್ರದರ್ಶಿಸುತ್ತಿರುವ ಪಾಕಿಸ್ತಾನಕ್ಕೆ ಮರ್ಮಾಘಾತವಾಗಿದ್ದು, ಇಸ್ಲಾಮಾಬಾದಿನಲ್ಲಿ ನಡೆಯಬೇಕಿದ್ದ 19 ಸಾರ್ಕ್ ಶೃಂಗಸಭೆ  ಭಾರತದ ಅಸಹಕಾರದಿಂದಾಗಿ ಮುಂದೂಡಲ್ಪಟ್ಟಿದೆ.

ಉರಿ ಉಗ್ರ ದಾಳಿ ಹಿನ್ನಲೆಯಲ್ಲಿ ಪಾಕಿಸ್ತಾನ ರಾಜಧಾನಿ ಇಸ್ಲಾಮಾಬಾದಿನಲ್ಲಿ ಇದೇ ನವೆಂಬರ್ 9 ಮತ್ತು ರಂದು ನಡೆಯಬೇಕಿದ್ದ 19ನೇ ಸಾರ್ಕ್ ಶೃಂಗಸಭೆಯನ್ನು ಭಾರತ ಬಹಿಷ್ಕರಿಸಿದ  ಬೆನ್ನಲ್ಲೇ ಬಾಂಗ್ಲಾದೇಶ, ಆಫ್ಘಾನಿಸ್ತಾನ, ಭೂತಾನ್ ಮತ್ತು ನೇಪಾಳ ರಾಷ್ಟ್ರಗಳು ಕೂಡ ಭಾರತವನ್ನು ಬೆಂಬಲಿಸಿ ಸಾರ್ಕ್ ಶೃಂಗಸಭೆ ಬಹಿಷ್ಕರಿಸಿದ್ದವು. ಹೀಗಾಗಿ ಸಾರ್ಕ್ ಶೃಂಗಸಭೆ  ರದ್ದಾಗುವುದು ಎಂದು ಭಾವಿಸಲಾಗಿತ್ತು. ಆದರೆ ಇದೀಗ ಸಾರ್ಕ್ ಶೃಂಗಸಭೆಯನ್ನು ರದ್ದು ಮಾಡುವ ಬದಲು ಮುಂದೂಡಲು ನಿರ್ಧರಿಸಲಾಗಿದೆ.

ಪ್ರಮುಖವಾಗಿ ಸಾರ್ಕ್ ಶೃಂಗ ಸಮ್ಮೇಳನದ ಮುಖ್ಯಸ್ಥ ರಾಷ್ಟ್ರ ನೇಪಾಳವೇ ಇಸ್ಲಾಮಾಬಾದ್ ಶೃಂಗಸಭೆಯನ್ನು ಬಹಿಷ್ಕರಿಸಿರುವುದು ಪಾಕಿಸ್ತಾನಕ್ಕೆ ವಿಶ್ವಸಮುದಾಯದ ಎದುರು ಮರ್ಮಾಘಾತ  ನೀಡಿದೆ. ಹೀಗಾಗಿ ಶೃಂಗಸಭೆಯನ್ನು ಮುಂದೂಡುವುದಾಗಿ ಪಾಕಿಸ್ತಾನ ಹೇಳಿಕೊಂಡಿದೆ. ಈ ಬಗ್ಗೆ ಅಧಿಕೃತ ಹೇಳಿಕೆ ನೀಡಿರುವ ಪಾಕಿಸ್ತಾನ ಸಾರ್ಕ್ ಶೃಂಗಸಭೆ ನಿಗದಿತ ದಿನಾಂಕದಲ್ಲಿ ಅಥವಾ  ಬೇರೆ ದಿನಾಂಕದಲ್ಲಿ ಬೇರೊಂದು ಪ್ರದೇಶದಲ್ಲಿ ನಡೆಯಲಿದೆ ಎಂದು ಹೇಳಿದೆ. ಇನ್ನು ಈ ಬಗ್ಗೆ ಸಾರ್ಕ್ ಮುಖ್ಯಸ್ಥ ರಾಷ್ಟ್ರ ಈ ವರೆಗೂ ಅಧಿಕೃತ ಹೇಳಿಕೆ ನೀಡಿಲ್ಲವಾದರೂ, ಇದೇ ಶನಿವಾರ ಈ ಬಗ್ಗೆ  ಅಧಿಕೃತ ಹೇಳಿಕೆ ನೀಡುವ ಸಾಧ್ಯತೆ ಇದೆ.

ಜಾಗತಿಕ ಮಟ್ಟದಲ್ಲಿ ಭಾರತದ ಶಕ್ತ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸಿದ ಸಾರ್ಕ್

ಇದೇ ವೇಳೆ 19ನೇ ಸಾರ್ಕ್ ಶೃಂಗಸಭೆ ವಿಚಾರ ಪಾಕಿಸ್ತಾನಕ್ಕೆ ಮುಖಭಂಗವಾದರೆ ಭಾರತದ ಪಾಲಿಗೆ ಮಾತ್ರ ತನ್ನ ಶಕ್ತಿ ಪ್ರದರ್ಶನಕ್ಕೆ ಅತ್ಯುತ್ತಮ ವೇದಿಕೆಯಾಗಿ ಪರಿಣಮಿಸಿತು. ಉರಿ ಉಗ್ರ  ದಾಳಿ ಕುರಿತಂತೆ ಪಾಕಿಸ್ತಾನಕ್ಕೆ ಪಾಠ ಕಲಿಸಬೇಕು ಎನ್ನುವ ಭಾರತದ ನಿಲುವಿಗೆ ಇಸ್ಲಾಮಾಬಾದ್ ನಲ್ಲಿ ಆಯೋಜನೆಯಾಗಿದ್ದ 19ನೇ ಸಾರ್ಕ್ ಶೃಂಗಸಭೆ ವೇದಿಕೆ ಒದಗಿಸಿತು. ಸಭೆಯನ್ನು  ಭಾರತ ಪ್ರಧಾನಿ ನರೇಂದ್ರ ಮೋದಿ ಬಹಿಷ್ಕರಿಸುವ ಮೂಲಕ ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಇದರ ಬೆನ್ನಲ್ಲೇ ಭಾರತದ  ನೆರವಿನೊಂದಿಗೆ ಪಾಕಿಸ್ತಾನದಿಂದ ಸ್ವತಂತ್ರ ಪಡೆದ ಬಾಂಗ್ಲಾದೇಶ ಕೂಡ ಭಾರತಕ್ಕೆ ಬೆಂಬಲ ನೀಡಿ ತಾನೂ ಕೂಡ ಸಾರ್ಕ್ ಶೃಂಗಸಭೆ ಬಹಿಷ್ಕರಿಸಿತು.

ಇದೇ ವೇಳೆ ಭಯೋತ್ಪಾದನೆ ವಿರುದ್ಧದ ಭಾರತದ ಹೋರಾಟಕ್ಕೆ ಆಫ್ಘಾನಿಸ್ತಾನ ಹಾಗೂ ಭೂತಾನ್ ಸರ್ಕಾರ ಕೂಡ ಸಾಥ್ ನೀಡಿ, ತನ್ನ ನೆಲದಲ್ಲಿ ಉಗ್ರತ್ವ ಪ್ರಾಯೋಜಿಸುತ್ತಿರುವ ರಾಷ್ಟ್ರದಲ್ಲಿ  ನಡೆಯುವ ಸಭೆಯಲ್ಲಿ ಪಾಲ್ಗೊಳ್ಳಲು ತಾವು ಸಿದ್ಧವಿಲ್ಲ ಎಂದು ಹೇಳಿ ಸಭೆಯನ್ನು ಬಹಿಷ್ಕರಿಸಿ ಪತ್ರಬರೆದವು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com