ಕೇವಲ 4 ಗಂಟೆಯಲ್ಲಿ 38 ಉಗ್ರರು, 6 ಪಾಕ್ ಸೈನಿಕರ ಹತ್ಯೆ ಗೈದ ಸೇನೆ!

ಗಡಿ ನಿಯಂತ್ರಣ ರೇಖೆಯನ್ನು ದಾಟಿ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ ಅಲ್ಲಿದ್ದ 7 ಉಗ್ರ ಕ್ಯಾಂಪ್ ಗಳನ್ನು ಯಶಸ್ವಿಯಾಗಿ ಧ್ವಂಸಗೊಳಿಸಿ ಸುರಕ್ಷಿತವಾಗಿ ವಾಪಸಾದ ಭಾರತೀಯ ಯೋಧರ ಸಾಹಸಕ್ಕೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಗಡಿ ನಿಯಂತ್ರಣ ರೇಖೆಯನ್ನು ದಾಟಿ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ ಅಲ್ಲಿದ್ದ 7 ಉಗ್ರ ಕ್ಯಾಂಪ್ ಗಳನ್ನು ಯಶಸ್ವಿಯಾಗಿ ಧ್ವಂಸಗೊಳಿಸಿ ಸುರಕ್ಷಿತವಾಗಿ ವಾಪಸಾದ ಭಾರತೀಯ  ಯೋಧರ ಸಾಹಸಕ್ಕೆ ಇದೀಗ ಎಲ್ಲಡೆ ಶ್ಲಾಘನೆಗೆ ಪಾತ್ರವಾಗುತ್ತಿದೆ. ಕೇವಲ 4 ಗಂಟೆಯಲ್ಲಿ 44 ಪಾಕಿಗಳನ್ನು ಹತ್ಯೆಗೈದ ಭಾರತೀಯ ಸೇನೆಯ ಸೀಮಿತ ದಾಳಿಯ ಸಂಪೂರ್ಣ ವಿವರ ಇಲ್ಲಿದೆ.

ಇದೇ ಸಪ್ಟೆಂಬರ್ 18ರಂದು ಉರಿ ಸೆಕ್ಟರ್ ನಲ್ಲಿ ನಡೆದ ಭೀಕರ ಉಗ್ರ ದಾಳಿಯಲ್ಲಿ 18 ಮಂದಿ ಭಾರತೀಯ ಯೋಧರು ಹುತಾತ್ಮರಾದಾಗಲೇ ಪಾಕಿಸ್ತಾನದ ಉಗ್ರ ಕ್ಯಾಂಪ್ ಗಳ ಮೇಲೆ ಭಾರತದ  ದಾಳಿ ನಿಶ್ಚಯವಾಗಿತ್ತು. ಅಂದೇ ಭಾರತೀಯ ಯೋಧರ ಸಾವಿಗೆ ತಕ್ಕ ಉತ್ತರ ನೀಡಬೇಕು ಎಂದೆಣಿಸಿದ್ದ ಭಾರತೀಯ ಸೇನೆ ಇದಕ್ಕಾಗಿ ಸಕಲ ಸಿದ್ಧತೆ ನಡೆಸಿತ್ತು. ಆದರೆ ನಿನ್ನೆ ಇದಕ್ಕೆ  ಮುಹೂರ್ತ ಫಿಕ್ಸ್ ಆಗಿತ್ತು. ಇದಕ್ಕೆ ಪೂರಕವೆಂಬಂತೆ ಈ ಹಿಂದೆ ಪ್ರತಿಕ್ರಿಯೆ ನೀಡಿದ್ದ ಹಿರಿಯ ಸೇನಾಧಿಕಾರಿಗಳು ಉರಿ ಉಗ್ರದಾಳಿಗೆ ಪ್ರತಿಯಾಗಿ ಎಲ್ಲಿ ಯಾವಾಗ ಹೊಡೆತ ನೀಡಬೇಕು  ಎಂಬುದು ನಮ್ಮ ಆಯ್ಕೆ ಎಂದು ಹೇಳುವ ಮೂಲಕ ದಾಳಿ ಕುರಿತು ಸುಳಿವು ನೀಡಿದ್ದರು.

ಗಂಭೀರವಾದ ಈ ವಿಚಾರವನ್ನು ಭಾರತೀಯ ಸೇನಾಧಿಕಾರಿಗಳು ತೀರಾ ಗೌಪ್ಯವಾಗಿಟ್ಟಿದ್ದರು. ಯಾವುದೇ ರೀತಿಯ ಸಣ್ಣ ಸುಳಿವು ಕೂಡ ಪಾಕಿಸ್ತಾನಕ್ಕೆ ದೊರೆತಿದ್ದರೂ ಪಾಕ್ ನೆಲದಲ್ಲಿ ನಮ್ಮ  ಸೈನಿಕರ ಮಾರಣಹೋಮವೇ ಆಗುವ ಅಪಾಯವಿತ್ತು. ಹೀಗಾಗಿ ಈ ದಾಳಿ ವಿಚಾರವನ್ನು ಮಾಧ್ಯಮಗಳಿಂದ ದೂರವಿಡಲು ಸೇನೆ ನಿರ್ಧರಿಸಿತ್ತು. ಇದಾಗ್ಯೂ ಪಾಕ್ ನೆಲದಲ್ಲಿ ಭಾರತೀಯ ಸೇನೆ  ದಾಳಿ ನಡೆಸಿ ಹಲವು ಉಗ್ರರನ್ನು ಕೊಂದಿದೆ ಎಂಬ ಮಾಹಿತಿ ಮಾಧ್ಯಮಗಳಲ್ಲಿ ಹರಿದಾಡಿತ್ತು.

ಇದು ಪಾಕಿಸ್ತಾನಿ ಅಧಿಕಾರಿಗಳ ಮನದಲ್ಲಿ ಆತಂಕ ಉಂಟುಮಾಡಿತ್ತು. ಆದರೆ ಯಾವಾಗ ಸ್ವತಃ ಭಾರತೀಯ ಸೇನಾಧಿಕಾರಿಗಳೇ ಪ್ರತಿಕ್ರಿಯಿಸಿ ಅಂತಹ ಯಾವುದೇ ರೀತಿಯ ದಾಳಿಗಳನ್ನು  ನಡೆಸಿಲ್ಲ. ಅಂತಹ ಪ್ರಸ್ತಾಪ ಕೂಡ ಇಲ್ಲ ಎಂದಾಗ ಅವರು ನಿರಮ್ಮಳರಾಗಿದ್ದರು. ಆದರೆ ಬುಧವಾರ ರಾತ್ರಿ ಕಾರ್ಯಾಚರಣೆ ನಡೆಸಿದ ಭಾರತೀಯ ಸೇನೆ ಕೇವಲ 4 ಗಂಟೆಗಳ ಅವಧಿಯಲ್ಲಿ 38 ಉಗ್ರರು ಹಾಗೂ ಅವರ ರಕ್ಷಣೆಗೆ ಬಂದ 6 ಮಂದಿ ಪಾಕಿಸ್ತಾನಿ ಸೈನಿಕರನ್ನು ಕೂಡ ಹೊಡೆದುರುಳಿಸಿದ್ದಾರೆ.

ಈ ಆಪರೇಷನ್ ಪಿಒಕೆ ಕಾರ್ಯಾಚರಣೆಯ ಸಂಕ್ಷಿಪ್ತ ವಿವರ ಇಲ್ಲಿದೆ.
1.ಉರಿ ಉಗ್ರ ದಾಳಿ ಬೆನ್ನಲ್ಲೇ ಪಾಕ್ ಪ್ರಾಯೋಜಿತ ಭಯೋತ್ಪಾದನೆ ವಿರುದ್ಧ ಕುದಿಯುತ್ತಿದ್ದ ಭಾರತ ಒಂದು ಅವಕಾಶಕ್ಕಾಗಿ ಕಾಯುತ್ತಿತ್ತು. ಇದೇ ಹೊತ್ತಿನಲ್ಲಿ ಕೇಂದ್ರ ಗುಪ್ತಚರ ಇಲಾಖೆ ಪಾಕ್  ಆಕ್ರಮಿತ ಗಡಿ ಪ್ರದೇಶದಲ್ಲಿ ಸುಮಾರು 5ಕ್ಕೂ ಹೆಚ್ಚು ಉಗ್ರ ಕ್ಯಾಂಪ್ ಗಳು ಇರುವ ಕುರಿತು ಖಚಿತ ಮಾಹಿತಿ ನೀಡಿತ್ತು. ಗುಪ್ತಚರ ಇಲಾಖೆ ನೀಡಿದ ಮಾಹಿತಿಯನ್ವಯ ರಾಷ್ಟ್ರೀಯ ಭದ್ರತಾ  ಸಲಹೆಗಾರ ಅಜಿತ್ ಧೋವಲ್ ಹಾಗೂ ಸೇನಾಮುಖ್ಯಸ್ಥರ ನೇತೃತ್ವದಲ್ಲಿ ದಾಳಿಯ ರೂಪುರೇಷೆ ಸಿದ್ಧಪಡಿಸಲಾಯಿತು.

2. ಅದರಂತೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ 7 ಉಗ್ರ ನೆಲೆಗಳನ್ನು ಗುರುತು ಹಾಕಿಕೊಂಡು, ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಕೇಲ್, ಭಿಂಬರ್, ಹಾಟ್ ಸ್ಟ್ರಿಂಗ್, ಲಿಪಾ ಸೇರಿದಂತೆ ಉಗ್ರ  ನೆಲೆಗಳಿರುವ 7 ಪ್ರದೇಶಗಳನ್ನು ಆಯ್ಕೆ ಮಾಡಿಕೊಳ್ಳಲಾಯಿತು. ಅಲ್ಲಿನ ಪ್ರಾದೇಶಿಕ ಹಾಗೂ ಭೌಗೋಳಿಕ ಪರಿಸ್ಥಿತಿಗಳ ಅವಲೋಕಿಸಲಾಗಿತ್ತು. ರಾತ್ರಿ ವೇಳೆಯ ಹವಾಮಾನ ವಾತಾವರಣ ಮಳೆ  ಎಂಬಿತ್ಯಾದಿ ಅಂಶಗಳ ಕುರಿತು ಚರ್ಚಿಸಲಾಗಿತ್ತು. ಬಳಿಕ ಬುಧವಾರ ರಾತ್ರಿ 12.30ಕ್ಕೆ ದಾಳಿಗೆ ಮುಹೂರ್ತ ಫಿಕ್ಸ್ ಮಾಡಲಾಯಿತು.

3. ಬುಧವಾರದ ದಾಳಿಗಾಗಿ ಭಾರತೀಯ ಸೇನೆಯ ನುರಿತ 25 ಯೋಧರ ಆಯ್ಕೆ ಮಾಡಿದ ಸೇನಾಧಿಕಾರಿಗಳು ರಾತ್ರಿ ದಾಳಿಗೆ ಸಿದ್ಧರಾಗುವಂತೆ ಸೂಚನೆ ನೀಡಿದ್ದರು. ಅಂತೆಯೇ ಯಾವುದೇ ಕಾರಣಕ್ಕೂ ಮುಂಜಾನೆ ಹೊತ್ತಿಗೆ ಕಾರ್ಯಾಚರಣೆ ಮುಗಿಸಿ ಮತ್ತೆ ವಾಪಸ್ ಹೆಲಿಕಾಪ್ಟರ್ ಇರುವ ಜಾಗಕ್ಕೆ ಬಂದು ಸೇರಬೇಕು ಎಂದು ಯೋಧರಿಗೆ ಸೂಚಿಸಲಾಗಿತ್ತು. ಹೀಗಾಗಿ  ಸೂರ್ಯೋದಯವಾಗುವ ಹೊತ್ತಿಗೆ ಕಾರ್ಯಾಚರಣೆ ಮುಗಿಸುವ ಒತ್ತಡ ಕೂಡ ಯೋಧರ ಮೇಲಿತ್ತು. ದಾಳಿಗಾಗಿ ಭಾರತೀಯ ವಾಯುಸೇನೆಯ ವಿಶೇಷ ಹೆಲಿಕಾಪ್ಟರ್ ಅನ್ನು ಕೂಡ  ಸಿದ್ಧಪಡಿಸಲಾಗಿತ್ತು. ಅದರಂತೆ ಬುಧವಾರ ರಾತ್ರಿ ನುರಿತ 25 ಯೋಧರನ್ನು ಹೊತ್ತ ವಿಶೇಷ ಹೆಲಿಕಾಪ್ಟರ್ 12.30ರ ಹೊತ್ತಿಗೆ ಗಡಿ ನಿಯಂತ್ರಣ ರೇಖೆಯ ಬಳಿ ಇಳಿಯಿತು. ಎಲ್ ಒಸಿ ಬಳಿ ಶಸ್ತ್ರ  ಸಜ್ಜಿತರಾಗಿ ಇಳಿದ ಯೋಧರು ದಟ್ಟಕಾನನದ ನಡುವೆಯೇ ಸುಮಾರು 2 ಕಿ.ಮೀಗಳ ವರೆಗೂ ನಡೆದು ಸಾಗಿದರು.

4. ಒಂದು ವೇಳೆ ಯೋಧರ ಪ್ರಾಣಕ್ಕೆ ಅಪಾಯವಾದರೆ ಅವರ ರಕ್ಷಣೆಗಾಗಿ ವಾಯುಸೇನೆ ಗಡಿಯುದ್ದಕ್ಕೂ ಭಾರಿ ನಿಗಾ ಇರಿಸಿತ್ತು.

5. ಎಲ್ಲಾ 25 ಸೈನಿಕರು ತಮಗೆ ನೀಡಲಾಗಿದ್ದ 7 ಟಾರ್ಗೆಟ್ ಗಳಿಗೆ ಅನುಗುಣವಾಗಿ ವಿವಿಧ ತಂಡಗಳಾಗಿ ಬೇರ್ಪಟ್ಟು ಚದುರಿದರು. ಬಳಿಕ ಏಕಕಾಲದಲ್ಲಿ ಎಲ್ಲ ಏಳೂ ಉಗ್ರ ಕ್ಯಾಂಪ್ ಗಳ ಮೇಲೆ  ದಾಳಿ ನಡೆಸಿದ ಸೈನಿಕರು ಗುಂಡಿನ ಸುರಿಮಳೆ ಗೈದು ಬರೊಬ್ಬರಿ 38 ಉಗ್ರರ ಹತ್ಯೆಗೈದರು. ಈ ವೇಳೆ ಉಗ್ರರ ನೆರವಿಗೆ ಧಾವಿಸಿದ ಪಾಕಿಸ್ತಾನಿ ಸೈನಿಕರನ್ನೂ ಕೂಡ ಅನ್ಯ ಮಾರ್ಗವಿಲ್ಲದೇ  ಸೈನಿಕರು ಗುಂಡು ಹಾರಿಸಿಕೊಂದು ಹಾಕಿದರು.

6. ಬಳಿಕ ನಿಗದಿಯಂತೆ ಕಾರ್ಯಾಚರಣೆ ಮುಗಿಸಿ ಮತ್ತೆ ವಾಪಸ್ 2 ಕಿ.ಮೀ ದೂರ ನಡೆದು ಗಡಿ ನಿಯಂತ್ರಣ ರೇಖೆ ಬಳಿ ಇದ್ದ ಸೇನಾ ಹೆಲಿಕಾಪ್ಟರ್ ಹತ್ತಿರ ಬಂದಿದ್ದಾರೆ. ಈ ವೇಳೆಗಾಗಲೇ  ಸಮಯ 4.30 ಆಗಿತ್ತು. ಸೈನಿಕರು ಸೇನಾ ಹೆಲಿಕಾಪ್ಟರ್ ಹತ್ತಿರ ಬರುತ್ತಿದ್ದಂತೆಯೇ ಎಲ್ಲ ಸೈನಿಕರನ್ನು ಸುರಕ್ಷಿತವಾಗಿ ಹತ್ತಿಸಿಕೊಂಡ ಪೈಲಟ್ ಮತ್ತೆ ಭಾರತ ಸೇನಾ ಕ್ಯಾಂಪ್ ಗೆ ವಾಪಸಾಗಿದ್ದಾರೆ.  ಇವಿಷ್ಟೂ ಕಾರ್ಯಾಚರಣೆ ಕೇವಲ 4 ಗಂಟೆಗಳಲ್ಲಿ ನಡೆದಿದ್ದು, ಕಾರ್ಯಾಚರಣೆ ವೇಳೆ ಪಾಕಿಸ್ತಾನದ 6 ಸೈನಿಕರು, 38 ಉಗ್ರರು ಹತರಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com