ಮೃತ ದೇಹ ಅಥವಾ ಗಾಯಾಳು ಸೈನಿಕರನ್ನು ಬಿಟ್ಟು ಬರಬೇಡಿ: ಸೈನಿಕರಿಗೆ ಸೂಚಿಸಿದ್ದ ಸೇನಾಧಿಕಾರಿಗಳು
ನವದೆಹಲಿ: ಬುಧವಾರ ರಾತ್ರಿ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನಡೆದ ಭಾರತೀಯ ಸೈನಿಕರ ಸೀಮಿತ ದಾಳಿ ವೇಳೆ ಯಾವುದೇ ಕಾರಣಕ್ಕೂ ಸೈನಿಕರ ಮೃತ ದೇಹ ಮತ್ತು ಗಾಯಾಳು ಸೈನಿಕರನ್ನು ಬಿಟ್ಟು ಬರದಂತೆ ಸೈನ್ಯಾಧಿಕಾರಿಗಳು ಸೂಚಿಸಿದ್ದರು ಎಂಬ ಮಹತ್ವದ ಅಂಶ ಬೆಳಕಿಗೆ ಬಂದಿದೆ.
ನಿನ್ನೆ ಮುಂಜಾನೆ ಮುಕ್ತಾಯಗೊಂಡಿದ್ದ ಕಾರ್ಯಾಚರಣೆಯಲ್ಲಿ ಅದೃಷ್ಟವಶಾತ್ ಯಾವುದೇ ಭಾರತೀಯ ಸೈನಿಕರು ಗಾಯಗೊಂಡಿಲ್ಲ. ಆದರೆ ಒಂದು ವೇಳೆ ಉಗ್ರರ ವಿರುದ್ಧ ಕಾರ್ಯಾಚರಣೆ ಯಾವುದೇ ಭಾರತೀಯ ಸೈನಿಕ ಸಾವನ್ನಪ್ಪಿದರೆ ಅಥವಾ ಗಾಯಗೊಂಡರೆ ಆತನನ್ನು ಪಾಕ್ ನೆಲದಲ್ಲಿ ಬಿಟ್ಟು ಬರದಂತೆ ಸೈನಿಕರಿಗೆ ಸೂಚಿಸಲಾಗಿತ್ತಂತೆ. ಇಂತಹುದೊಂದು ಮಾಹಿತಿಯನ್ನು ಸೇನಾ ಮೂಲಗಳು ತಿಳಿಸಿದ್ದು, ಸಾಧ್ಯವಾದಷ್ಟು ಹೆಚ್ಚು ಉಗ್ರರನ್ನು ಕೊಲ್ಲುವ ಅಥವಾ ಗಂಭೀರವಾಗಿ ಗಾಯಗೊಳಿಸುವ ಗುರಿಯನ್ನು ದಾಳಿಯಲ್ಲಿ ಪಾಲ್ಗೊಂಡಿದ್ದ ಸೈನಿಕರಿಗೆ ನೀಡಲಾಗಿತ್ತಂತೆ.
ಅಲ್ಲದೆ ಎಷ್ಟೇ ಒತ್ತಡ ಅಥವಾ ಪರಿಸ್ಥಿತಿ ಗಂಭೀರವಾಗಿದ್ದರೂ ಈ ಕಾರ್ಯಾಚರಣೆ ಸೂರ್ಯೋದಯದ ಒಳಗೆ ಪೂರ್ಣಗೊಳ್ಳಬೇಕು ಮತ್ತು ಸೂರ್ಯೋದಯದ ಒಳಗೆ ಕಾರ್ಯಾಚರಣೆಯ ಎಲ್ಲ ಸೈನಿಕರು ನಿಗದಿ ಪಡಿಸಿದ್ದ ಜಾಗದಲ್ಲಿರುವ ಹೆಲಿಕಾಪ್ಚರ್ ಗೆ ಬಂದು ತಲುಪಬೇಕು ಎಂದು ಸೂಚನೆ ನೀಡಲಾಗಿತ್ತು ಎಂದು ತಿಳಿದುಬಂದಿದೆ. ಇದೇ ಕಾರಣಕ್ಕೆ ಬುಧವಾರ ರಾತ್ರಿ ನಡೆದ ಕಾರ್ಯಾಚರಣೆಯಲ್ಲಿ ಸೂರ್ಯೋದಯದೊಳಗೆ ಸೈನಿಕರು ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಮುಗಿಸಿ ತಮ್ಮ ತಮ್ಮ ಸೇನಾ ಕ್ಯಾಂಪ್ ಗಳನ್ನು ಬಂದು ತಲುಪಿದ್ದರು.
ಬುಧವಾರ ರಾತ್ರಿ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಾರತೀಯ ಸೇನೆ ನಡೆಸಿದ ದಾಳಿಯಲ್ಲಿ ಒಟ್ಟು 38 ಉಗ್ರರು ಹಾಗೂ ಅವರ ರಕ್ಷಣೆಗೆ ಬಂದ 6 ಮಂದಿ ಪಾಕಿಸ್ತಾನಿ ಸೈನಿಕರು ಹತರಾಗಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ