ಉರಿ ಉಗ್ರ ದಾಳಿ ಬೆನ್ನಲ್ಲೇ ಸಿದ್ಧವಾಗಿತ್ತು "ಮಾಸ್ಟರ್ ಪ್ಲಾನ್"!

19 ಯೋಧರ ಸಾವಿಗೆ ಕಾರಣವಾಗಿದ್ದ ಉರಿ ಉಗ್ರ ದಾಳಿ ಬೆನ್ನಲ್ಲೇ ಪಿಒಕೆಯಲ್ಲಿ ಸೇನಾ ಕಾರ್ಯಾಚರಣೆ ನಡೆಸುವ ಕುರಿತು ನಿರ್ಧಾರವಾಗಿತ್ತು ಎಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: 19 ಯೋಧರ ಸಾವಿಗೆ ಕಾರಣವಾಗಿದ್ದ ಉರಿ ಉಗ್ರ ದಾಳಿ ಬೆನ್ನಲ್ಲೇ ಪಿಒಕೆಯಲ್ಲಿ ಸೇನಾ ಕಾರ್ಯಾಚರಣೆ ನಡೆಸುವ ಕುರಿತು ನಿರ್ಧಾರವಾಗಿತ್ತು ಎಂದು ತಿಳಿದುಬಂದಿದೆ.

ಜಮ್ಮು ಮತ್ತು ಕಾಶ್ಮೀರದ ಉರಿ ಸೆಕ್ಟರ್ ನಲ್ಲಿದ್ದ ಸೇನಾ ಕ್ಯಾಂಪ್ ಮೇಲೆ ದಾಳಿ ಮಾಡಿದ್ದ ಹಲವು ಶಸ್ತ್ರಸಜ್ಜಿತ ಉಗ್ರರು ಏಕಾಏಕಿ ದಾಳಿ ಮಾಡಿದ್ದರು. ಇದರಿಂದ ಕ್ಯಾಂಪ್ ಗೆ ಬೆಂಕಿ ಬಿದ್ದು, ಉಗ್ರರ  ಗುಂಡಿನ ದಾಳಿಗೆ ಬಲಿಯಾದ ಸೈನಿಕರಿಗಿಂತ ಬೆಂಕಿಗಾಹುತಿಯಾಗಿ ಸಾವನ್ನಪ್ಪಿದ ಯೋಧರ ಸಾವಿನ ಸಂಖ್ಯೆಯೇ ಹೆಚ್ಚಾಗಿತ್ತು. ಈ ಘಟನೆ ಇಡೀ ದೇಶದ ಆಕ್ರೋಶಕ್ಕೆ ಕಾರಣವಾಗಿತ್ತು. ಅಲ್ಲದೆ  ಉಗ್ರರ ವಿರುದ್ಧ ಸೇನಾ ಕಾರ್ಯಾಚರಣೆ ನಡೆಸಬೇಕು ಎಂಬ ಕೂಗು ಕೇಳಿಬಂತು.

ಇದೇ ಒತ್ತಡದ ಹಿನ್ನಲೆಯಲ್ಲಿ ಮತ್ತು ದಾಳಿ ಕುರಿತಂತೆ ಚರ್ಚಿಸಲು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಅವರ ನೇತೃತ್ವದಲ್ಲಿ ಸೇನಾಧಿಕಾರಿಗಳ ಸಭೆ ನಡೆಸಲಾಗಿತ್ತು. ಈ ವೇಳೆ  ಉಗ್ರರನ್ನು ಮಟ್ಟ ಹಾಕುವ ಸಂಬಂಧ ಚರ್ಚೆಯಲ್ಲಿ ಸೇನೆಯನ್ನು ಸಜ್ಜುಗೊಳಿಸುವುದಷ್ಟೇ ಅಲ್ಲದೇ ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರನೆಲೆಗಳನ್ನು ಧ್ವಂಸ ಮಾಡಬೇಕು ಎಂಬ ಅಭಿಪ್ರಾಯ  ಕೇಳಿ ಬಂದಿತ್ತು. ಈ ಹಿನ್ನಲೆಯಲ್ಲಿ ನಿರ್ಧಾರ ಕೈಗೊಂಡ ಸೇನಾಧಿಕಾರಿಗಳು ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರ ಕ್ಯಾಂಪ್ ಗಳ ಕುರಿತು ಮಾಹಿತಿ ಕಲೆ ಹಾಕಿದ್ದರು. ಇದೇ ವೇಳೆ ಕೇಂದ್ರ  ಗುಪ್ತಚರ ಮೂಲಗಳು ಕೂಡ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಉಗ್ರ ಕ್ಯಾಂಪ್ ಗಳಿರುವ ಕುರಿತು ಮಾಹಿತಿ ನೀಡಿತ್ತು. ಇದರ ಬೆನ್ನಲ್ಲೇ ದಾಳಿ ನಡೆಸುವ ಕುರಿತು ನಿರ್ಧಾರ ಕೈಗೊಳ್ಳಲಾಗಿದೆ. ಆಗ  ಹುಟ್ಟಿಕೊಂಡಿದ್ದೇ ಈ ಸೀಮಿತ ದಾಳಿ ಅಥವಾ ಸರ್ಜಿಕಲ್ ಸ್ಟ್ರೈಕ್ ವಿಚಾರ ಎಂದು ಮೂಲಗಳು ತಿಳಿಸಿವೆ.

ಉಗ್ರರ ಮೇಲೆ ಸೇನಾ ಕಾರ್ಯಾಚರಣೆ ನಡೆಸಿದರೆ ಎರಡೂ ವಿಭಾಗಲ್ಲಿ ಅಪಾರ ಪ್ರಮಾಣದ ನಷ್ಟವಾಗುವ ಅಪಾಯವಿರುತ್ತದೆ. ಆದರೆ ಈ ಸೀಮಿತ ದಾಳಿ ಅಥವಾ ಸರ್ಜಿಕಲ್ ಸ್ಟ್ರೈಕ್ ನಲ್ಲಿ  ಇಂತಹ ಅಪಾಯ ಕಡಿಮೆ. ಇದೇ ಕಾರಣಕ್ಕೇ ಸೇನಾಧಿಕಾರಿಗಳು ಪಿಒಕೆಯಲ್ಲಿ ಸೀಮಿತ ದಾಳಿ ನಡೆಸುವ ನಿರ್ಧಾರ ಕೈಗೊಂಡರು. ಅದರಂತೆ ಬುಧವಾರ ರಾತ್ರಿ ಕಾರ್ಯಾಚರಣೆ ನಡೆಸಲಾಗಿದೆ.  ಕಳೆದ ಕೆಲ ದಿನಗಳಿಂದ ಪಾಕ್ ಉಗ್ರ ಶಿಬಿರಗಳ ಮೇಲೆ ನಿಗಾ ಇಟ್ಟಿದ್ದ ಸೇನಾಪಡೆ ಪೂರ್ವತಯಾರಿ ನಡೆಸಿಯೇ ಈ ದಾಳಿ ನಡೆಸಿದೆ. ಕಾರ್ಯಾಚರಣೆಯಲ್ಲಿ ಭೂಸೇನೆ ಜತೆಗೆ ವಾಯುಪಡೆಯೂ  ಕೈಜೋಡಿಸಿತ್ತು ಎಂದು ಮೂಲಗಳು ತಿಳಿಸಿವೆ.

ಸೆಪ್ಟೆಂಬರ್ 20ರಂದೇ ನಡೆದಿತ್ತು ಮೊದಲ ಯತ್ನ!
ಇನ್ನು ಸೇನೆಯ ಮತ್ತೊಂದು ಮೂಲಗಳು ತಿಳಿಸಿರುವಂತೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ದಾಳಿ ನಡೆಸಲು ಭಾರತೀಯ ಸೇನೆ ನಿರ್ಧರಿಸಿತ್ತಾದರೂ ಯಾವಾಗ ಮತ್ತು ಹೇಗೆ ದಾಳಿ ಮಾಡಬೇಕು  ಎಂಬ ನಿರ್ಧಾರ ಕೈಗೊಂಡಿರಲಾಗಿರಲಿಲ್ಲ. ಪಿಒಕೆಯಲ್ಲಿನ ಉಗ್ರಕ್ಯಾಂಪ್ ಗಳ ಕುರಿತ ಮಾಹಿತಿಯನ್ನು ಸೇನಾಧಿಕಾರಿಗಳು ಕಲೆಹಾಕುತ್ತಿದ್ದರು. ಇದೇ ಹೊತ್ತಿನಲ್ಲಿ ಗುಪ್ತಚರ ಮೂಲಗಳು ನೀಡಿದ್ದ  ಖಚಿತ ಮಾಹಿತಿ ಬೆನ್ನಲ್ಲೇ ಸೀಮಿತ ದಾಳಿಗೆ ಸೇನೆ ಮುಂದಾಗಿತ್ತು. ಆ ಮೂಲಕ 10 ದಿನಗಳ ಹಿಂದೆ ಅಂದರೆ ಸೆಪ್ಟೆಂಬರ್ 20ರಂದೇ ಸೇನೆ ಈ ಸಂಬಂಧ ಮೊದಲ ಬಾರಿಗೆ ಯತ್ನಿಸಿತ್ತು. ಆದರೆ ಆ ಕಾರ್ಯಾಚರಣೆಯಲ್ಲಿ ಸೈನಿಕರು ಸಫಲರಾಗಿರಲಿಲ್ಲ ಎಂದು ಉನ್ನತ ಸೇನಾ ಮೂಲಗಳು ತಿಳಿಸಿವೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.

ಏನಿದು ಸರ್ಜಿಕಲ್ ಸ್ಟ್ರೈಕ್?

ಸೀಮಿತ ಅಥವಾ ಸರ್ಜಿಕಲ್ ದಾಳಿ ಯುದ್ಧವಲ್ಲ, ಯುದ್ಧದ ಆಹ್ವಾನವೂ ಅಲ್ಲ. ಬದಲಿಗೆ ಶತ್ರುಗಳ ನೆಲೆಯನ್ನಷ್ಟೇ ನಾಶ ಮಾಡುವ ಕ್ಷಿಪ್ರ ಸೇನಾ ಕಾರ್ಯಾಚರಣೆ. ಗಡಿ ದಾಟಿ ಉಗ್ರ ನೆಲೆಗಳ  ಮೇಲೆ ದಾಳಿ ನಡೆಸಿ ಅದೇ ವೇಗದಲ್ಲಿ ಸೇನೆ ತನ್ನ ಮೊದಲಿನ ಸ್ಥಿತಿಗೆ ಬರುವುದೇ ಈ ದಾಳಿಯ ಸ್ವರೂಪ. ಇದರಿಂದ ಉಭಯ ದೇಶಗಳ ಸೇನೆಗೆ ಉಂಟಾಗುವ ಹಾನಿಯೂ ಕಡಿಮೆ. ಆದರೆ  ದಾಳಿಗೆ ಒಳಗಾದವರಿಗೆ ಉಂಟಾಗುವ ಹಾನಿ ಅತ್ಯಂತ ಹೆಚ್ಚಿರುತ್ತದೆ. ಇಂಥ ದಾಳಿಗಳನ್ನು ವಾಯುಪಡೆ ಬಳಸಿ ಮಾಡಲಾಗುತ್ತದೆ. ಕಡಿಮೆ ಸಂಖ್ಯೆಯ ಯೋಧರು ಇದರಲ್ಲಿ ಪಾಲ್ಗೊಳ್ಳುತ್ತಾರೆ,  ದಾಳಿಯಲ್ಲಿ ಭಾಗವಹಿಸಿರುವ ಪ್ರತಿಯೊಬ್ಬರಿಗೂ ನಿರ್ದಿಷ್ಟ ಕರ್ತವ್ಯ ನಿಗದಿಪಡಿಸಲಾಗಿರುತ್ತದೆ. ಕಾರ್ಯಾಚರಣೆ ನಂತರ ಯಾವ ಕಾರಣಕ್ಕೆ ದಾಳಿ ನಡೆಸಲಾಯಿತು ಎಂಬ ಮಾಹಿತಿಯನ್ನು ಶತ್ರು  ರಾಷ್ಟ್ರಕ್ಕೆ ಅಧಿಕೃತವಾಗಿ ನೀಡಲಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com