ಲಖನೌ: ಹಿಂದೂಗಳ ಹಬ್ಬವಾದ ನವರಾತ್ರಿಯ ಮೊದಲ ದಿನವಾದ ಇಂದು ದೇವಾಲಯವೊಂದರ ಆವರಣಕ್ಕೆ ಕೊಳಚೆ ನೀರು ಎರಚಿದ್ದಾರೆ ಎಂಬ ಆರೋಪದ ಮೇರೆಗೆ ಉತ್ತರ ಪ್ರದೇಶದ ಬುಲಂದ್ಶಹರ್ ಜಿಲ್ಲೆಯಲ್ಲಿ ಕೋಮು ಉದ್ವಿಗ್ನ ವಾತಾವರಣ ಉಂಟಾದ ವರದಿಯಾಗಿದೆ.
ಎರಡು ಕೋಮಿನ ನಡುವೆ ನಡೆದ ಕಲ್ಲೆಸೆತದ ಘರ್ಷಣೆಯಲ್ಲಿ 12 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ನವರಾತ್ರಿ ಪೂಜೆಯ ದಿನ ದೇವಾಲಯದ ಆವರಣವನ್ನು ಅರ್ಚಕರು ಸ್ವಚ್ಛಗೊಳಿಸುತ್ತಿದ್ದಾಗ ನೆರೆಯ ವ್ಯಕ್ತಿಯೊಬ್ಬ ಕೊಳಚೆ ನೀರು ಮತ್ತು ಕಸವನ್ನು ಎಸೆದಿದ್ದಾನೆ ಎಂದು ಆರೋಪಿಸಲಾಗಿದೆ.
ಜಿಲ್ಲಾ ನ್ಯಾಯಾಧೀಶ ಮತ್ತು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಮತ್ತಿತರ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಉದ್ರೇಕಗೊಂಡಿದ್ದ ಗುಂಪನ್ನು ಸಮಾಧಾನಿಸಲು ಯತ್ನಿಸಿದ್ದಾರೆ.
ಈ ಸಂಧಾನದ ಫಲವಾಗಿ ಎರಡು ಕೋಮಿನವರು ಹಿಂದೆ ಸರಿದಿದ್ದರು, ಆ ಪ್ರದೇಶದಲ್ಲಿ ಉದ್ವಿಗ್ನತೆ ಮುಂದುವರೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಘಟನೆ ಮುಂಜಾನೆಯ ಸಮಯದಲ್ಲಿ ದೆಯೊಲಿ ಗ್ರಾಮದಲ್ಲಿ ನಡೆದಿದೆ ಎಂದಿದ್ದಾರೆ.
ಎರಡು ಗುಂಪುಗಳ ನಡುವೆ ಮೊದಲು ವಾಗ್ವಾದವಾಗಿದ್ದು, ನಂತರ ಇದು ಹೊಡೆದಾಟಕ್ಕೆ ತಿರುಗಿ ಕಲ್ಲೆಸೆತಕ್ಕೆ ಮುಂದಾಗಿದ್ದಾರೆ ಎಂದು ತಿಳಿಸಿರುವ ಅಧಿಕಾರಿಗಳು ಇದರಲ್ಲಿ ಅರ್ಚಕರಿಗೆ ಗಾಯವಾಗಿದೆ ಎಂದಿದ್ದಾರೆ.
ಈ ಉದ್ವಿಗ್ನತೆ ಹೆಚ್ಚಾಗದಂತೆ ಹಾಗು ಶಾಂತಿಯುತವಾಗಿ ದೇವಾಲಯದಲ್ಲಿ ಪೂಜೆ ಸಲ್ಲಿಸಲು ಅವಕಾಶ ನೀಡುವಂತೆ ಜಿಲ್ಲಾ ನ್ಯಾಯಾಧೀಶರು ಅಧಿಕಾರಿಗಳು ನಿರ್ದೇಶಿಸಿದ್ದಾರೆ.