ಕಪ್ಪುಹಣ ಎಲ್ಲಿ? ಬಹುತೇಕ ಎಲ್ಲ ನಿಷೇಧಿತ ನೋಟುಗಳ ಜಮಾ ಸಾಧ್ಯತೆ! ಸರ್ಕಾರಕ್ಕೆ ಆಘಾತ?

ಕೇಂದ್ರ ಸರ್ಕಾರ ೫೦೦ ಮತ್ತು ೧೦೦೦ ರೂ ನೋಟುಗಳನ್ನು ಹಿಂಪಡೆಯುವ ನಿರ್ಧಾರ ಘೋಷಿಸುವುದಕ್ಕೆ ಮುಖ್ಯ ಕಾರಣ ಕಪ್ಪು ಹಣಕ್ಕೆ ಕಡಿವಾಣ ಹಾಕಿ, ಖಾತೆಗಳಲ್ಲಿ ಜಮಾವಾಗದ ಕಪ್ಪು ಹಣ ಸರ್ಕಾರದ ಬೊಕ್ಕಸಕ್ಕೆ
ನಿಷೇಧಿತ ೫೦೦ ಮತ್ತು ೧೦೦೦ ರೂ ನೋಟುಗಳು
ನಿಷೇಧಿತ ೫೦೦ ಮತ್ತು ೧೦೦೦ ರೂ ನೋಟುಗಳು
ನವದೆಹಲಿ: ಕೇಂದ್ರ ಸರ್ಕಾರ ೫೦೦ ಮತ್ತು ೧೦೦೦ ರೂ ನೋಟುಗಳನ್ನು ಹಿಂಪಡೆಯುವ ನಿರ್ಧಾರ ಘೋಷಿಸುವುದಕ್ಕೆ ಮುಖ್ಯ ಕಾರಣ ಕಪ್ಪು ಹಣಕ್ಕೆ ಕಡಿವಾಣ ಹಾಕಿ, ಖಾತೆಗಳಲ್ಲಿ ಜಮಾವಾಗದ ಕಪ್ಪು ಹಣ ಸರ್ಕಾರದ ಬೊಕ್ಕಸಕ್ಕೆ ಸೇರಲಿದೆ ಎಂಬುದು ಕೂಡ. 
ಹಲವಾರು ವರದಿಗಳು ತಿಳಿಸಿದ್ದಂತೆ ೩ ಲಕ್ಷ ಕೋಟಿ ರೂ ಇಂದ ೫ ಲಕ್ಷ ಕೋಟಿ ರೂವರೆಗೆ ಕಪ್ಪು ಹಣ ಖಾತೆಗಳಿಗೆ ಜಮವಾಗದೆ ಉಳಿಯುವ ಸಾಧ್ಯತೆಗಳಿವೆ ಎನ್ನಲಾಗಿತ್ತು. ಆದರೆ ಇಂದಿನವರೆಗೆ ಬ್ಯಾಂಕ್ ಖಾತೆಗಳಲ್ಲಿ ಜಮಾ ಆಗಿರುವ ಮೊತ್ತವನ್ನು ಗಮನಿಸಿದರೆ ಇದು ಬೇರೆಯೇ ಕಥೆ ಹೇಳುತ್ತದೆ. ಇದು ನರೇಂದ್ರ ಮೋದಿ ಸರ್ಕಾರಕ್ಕೆ ಆಘಾತವನ್ನುಂಟು ಮಾಡಲಿದೆ ಎನ್ನಲಾಗುತ್ತಿದೆ. 
ರಾಜ್ಯಸಭೆಯಲ್ಲಿ ವಿತ್ತ ಖಾತೆಯ ರಾಜ್ಯ ಸಚಿವ ನೀಡಿದ್ದ ಹೇಳಿಕೆಯಂತೆ ಇಲ್ಲಿಯವರೆಗೂ ಚಾಲ್ತಿಯಲ್ಲಿದ್ದ ೫೦೦ ಮತ್ತು ೧೦೦೦ ರೂ ಮೌಲ್ಯದ ಒಟ್ಟು ಹಣ ೧೫.೪೪ ಲಕ್ಷ ಕೋಟಿ ರು. (೫೦೦ ರೂ ನೋಟುಗಳಲ್ಲಿ ೮.೫೮ ಲಕ್ಷ ರೂ ಕೋಟಿ ಮತ್ತು ೧೦೦೦ ರೂ ನೋಟುಗಳಲ್ಲಿ ೬.೮೬ ಲಕ್ಷ ರೂ ಕೋಟಿ).
ನವೆಂಬರ್ ೨೮ ರಂದು ಆರ್ ಬಿ ಐ ನೀಡಿರುವ ಅಂಕಿ ಅಂಶಗಳ ಪ್ರಕಾರ ನವೆಂಬರ್ ೧೦ ಮತ್ತು ನವೆಂಬರ್ ೨೭ ರ ನಡುವೆ ಬ್ಯಾಂಕ್ ಗಳಲ್ಲಿ ನಿಷೇಧಿತ ನೋಟುಗಳು ಜಮಾ ಆಗಿರುವ ಹಣದ ಒಟ್ಟು ಮೊತ್ತ ೮.೪೫ ಲಕ್ಷ ಕೋಟಿ ರು. ನವೆಂಬರ್ ೮ ರಂದು ಕೇಂದ್ರ ಸರ್ಕಾರ ಈ ನಿರ್ಧಾರ ಪ್ರಕಟಿಸಿದ ಮೇಲೆ ನವೆಂಬರ್ ೯ ನೆಯ ತಾರೀಖು ಬ್ಯಾಂಕ್ ಗಳು ಕೆಲಸ ಮಾಡಿರಲಿಲ್ಲ. 
ಅಂದರೆ ಸರ್ಕಾರ ನಿಷೇಧಿತ ನೋಟುಗಳನ್ನು ಜಮಾ ಮಾಡಲು ನೀಡಿರುವ ೫೦ ದಿನಗಳ ಸಮಯದಲ್ಲಿ ಕೇವಲ ೧೮ ದಿನಗಳಲ್ಲಿಯೇ ೮.೪೫ ಲಕ್ಷ ಕೋಟಿ ರೂ ಜಮಾ ಆಗಿದೆ. ಇನ್ನು ಎಷ್ಟೋ ಜನ ಬ್ಯಾಂಕ್ ಮುಂದೆ ದೊಡ್ಡ ಸರತಿ ಸಾಲುಗಳನ್ನು ನೋಡಿ ಆತ್ತ ಸರಿದಿಲ್ಲ. 
ಮತ್ತೊಂದು ಸಂಗತಿಯೆಂದರೆ ಭಾರತದ ಎಲ್ಲ ವಾಣಿಜ್ಯ ಬ್ಯಾಂಕ್ ಗಳು ಆರ್ ಬಿ ಐ ನಲ್ಲಿ ತಮ್ಮ ಠೇವಣಿಯ ಒಂದು ಭಾಗವನ್ನು ಇರಿಸಬೇಕಿರುತ್ತದೆ. ಅದನ್ನು ಕ್ಯಾಶ್ ರಿಸರ್ವ್ ರೇಶಿಯೋ (ಸಿ ಆರ್ ಆರ್) ಎಂದು ಕರೆಯಲಾಗುತ್ತದೆ. ಈ ಮಾಹಿತಿ ಪ್ರಕಾರ ನವೆಂಬರ್ ೮ ರಂದು ಆರ್ ಬಿ ಐ ನಲ್ಲಿ ಇದ್ದ ಒಟ್ಟು ನಗದು (ಸಿ ಆರ್ ಆರ್) ೪.೦೬ ಲಕ್ಷ ಕೋಟಿ ರೂ. ಸಾಮಾನ್ಯವಾಗಿ ಎಲ್ಲ ಬ್ಯಾಂಕ್ ಗಳು ಉನ್ನತ ಮೌಲ್ಯದ ನೋಟುಗಳಲ್ಲಿ ಆರ್ ಬಿ ಐ ನಲ್ಲಿ ಈ ಠೇವಣಿ ಇಟ್ಟಿರತ್ತವೆ!
ಇದರ ಜೊತೆಗೆ ಬ್ಯಾಂಕ್ ಗಳು ದಿನನಿತ್ಯದ ವ್ಯವಹಾರ ನಡೆಸಲು ಕೂಡ ಹಣ ಇಟ್ಟುಕೊಂಡಿರುತ್ತವೆ. ಒಂದು ಅಂದಾಜಿನ ಪ್ರಕಾರ ಇದು ಎಲ್ಲ ನೋಟುಗಳನ್ನು ಒಳಗೊಂಡಂತೆ ಸುಮಾರು ೭೦,೦೦೦ ಕೋಟಿ ಎನ್ನಲಾಗಿದೆ. 
ಆದುದರಿಂದ ಈಗ ೨೦ ದಿನಗಳಲ್ಲಿ ಜಮಾ ಆಗಿರುವ ದುಡ್ಡು ೮.೪೫ ಲಕ್ಷ ಕೋಟಿ, ನವೆಂಬರ್ ೮ ರ ಸಿ ಆರ್ ಆರ್ ೪.೦೬ ಕೋಟಿ ಸೇರಿಸಿದರೆ ಒಟ್ಟು ಸುಮಾರು ೧೨.೫ ಲಕ್ಷ ಕೋಟಿ ಈಗಾಗಲೇ ವ್ಯವಸ್ಥೆಯ ಒಳಕ್ಕೆ ಬಂದಿದೆ. ಅಲ್ಲದೆ ಬ್ಯಾಂಕ್ ಗಳ ದಿನ ನಿತ್ಯದ ವ್ಯವಹಾರಕ್ಕೆ ಉನ್ನತ ಮೌಲ್ಯದ ನೋಟುಗಳಲ್ಲಿ ಇಟ್ಟುಕೊಂಡಿದ್ದ ಹಣ ೫೦೦೦೦ ಕೋಟಿ ಇರಬಹುದು ಎಂಬ ಅಂದಾಜಿನಲ್ಲಿ ಒಟ್ಟು ೧೩ ಲಕ್ಷ ಕೋಟಿ ನಿಷೇಧಿತ ನೋಟುಗಳು ಈಗಗಾಲೇ ಆರ್ ಬಿ ಐ ಸೇರಿವೆ. 
ಹಿಂಪಡೆದ ನೋಟುಗಳನ್ನು ಜಮಾ ಮಾಡಲು ಇನ್ನು ೩೦ ದಿನಗಳು ಬಾಕಿಯಿದ್ದು, ಮತ್ತು ಬ್ಯಾಂಕ್ ಗಳ ಒಳಹರಿಯುತ್ತಿರುವ ಈ ನೋಟುಗಳ ಪ್ರಮಾಣ ನೋಡಿದರೆ ಇನ್ನುಳಿದ ೨ ಲಕ್ಷ ಕೋಟಿ ರೂ ಹಣ ಡಿಸೆಂಬರ್ ೩೦ ರೊಳಗೆ ಜಮಾ ಆಗುವುದು ಬಹುತೇಕ ಖಚಿತವಾಗಿದೆ. 
ಈ ಲೆಕ್ಕಾಚಾರ, ಸರ್ಕಾರದ ಲೆಕ್ಕಾಚಾರಗಳನ್ನೆಲ್ಲಾ ಬುಡಮೇಲು ಮಾಡುತ್ತಿದ್ದು, ಸರ್ಕಾರವನ್ನು ಮುಜುಗರದ ಪರಿಸ್ಥಿತಿಗೆ ತಳ್ಳಿ ಆಘಾತ ಉಂಟು ಮಾಡಲಿದೆಯೇ? ಇದು ಇನ್ನಷ್ಟು ಪ್ರಶ್ನೆಗಳನ್ನು ಕೇಳುವಂತೆ ಮಾಡಿದೆ. ಕಪ್ಪು ಹಣ ಉನ್ನತ ಮೌಲ್ಯದ ನೋಟುಗಳಲ್ಲಿ ಶೇಖರವಾಗಿಲ್ಲವೇ? ಅಥವಾ ಅನ್ಯ ಮಾರ್ಗಗಳನ್ನು ಬಳಸಿ ಬ್ಯಾಂಕ್ ಖಾತೆಗಳಲ್ಲಿ ಜಮಾ ಮಾಡಲಾಗಿದೆಯೇ? 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com