ನವದೆಹಲಿ: ಸಾಮಾಜಿಕ ಜಾಲತಾಣ ಮಾಧ್ಯಮಗಳನ್ನು ಸಂಸತ್ತಿನ ಸದಸ್ಯರಿಗೆ ಮಾನಹಾನಿ ಆಗುವಂತೆ ಬಳಸಲಾಗುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖಂಡ ನರೇಶ್ ಅಗರ್ವಾಲ್ ಗುರುವಾರ ಹೇಳಿದ್ದು, ಈ ಸಮಸ್ಯೆಯನ್ನು ಬಗೆಹರಿಸಲು ಸರ್ಕಾರ ಕಾರ್ಯತಂತ್ರ ರೂಪಿಸಬೇಕು ಎಂದು ಆಗ್ರಹಿಸಿದ್ದಾರೆ.
ಶೂನ್ಯ ಅವಧಿಯಲ್ಲಿ ರಾಜ್ಯಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ನರೇಶ್, ಸಂಸತ್ತಿನ ಸದಸ್ಯರ ವೇತನ ಮತ್ತು ಇತರ ಸೌಕರ್ಯಗಳ ಬಗ್ಗೆ ಅವಹೇಳನಕಾರಿಯಾಗಿ ಬರೆದು ಮಾನಹಾನಿ ಉಂಟುಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
"ಸಂಸದರಿಗೆ ಅದು ಸಿಗುತ್ತದೆ, ಇದು ಸಿಗುತ್ತದೆ... ಅವರು ನಮ್ಮ ವೇತನ ಮತ್ತು ಇತರ ಸೌಕರ್ಯಗಳ ಬಗ್ಗೆ ಮಾತನಾಡುತ್ತಾರೆ ಮತ್ತು ನಾವು ಸಾರ್ವಜನಿಕರ ನಡುವೆ ಹೋದಾಗ ಸಾಮಾಜಿಕ ಅಂತರ್ಜಾಲ ಮಾಧ್ಯಮಗಳ ಈ ಪ್ರತಿಕ್ರಿಯೆಗಳಿಂದ ನಮಗೆ ಅವಮಾನವಾಗುತ್ತದೆ" ಎಂದು ಅಗರ್ವಾಲ್ ಹೇಳಿದ್ದಾರೆ.
ಇದಕ್ಕೆ ನಗುತ್ತ ಉತ್ತರಿಸಿದ ಉಪಸಭಾಪತಿ ಪಿ ಜೆ ಕುರಿಯನ್, ನೀವು ಕೂಡ ಸಾಮಾಜಿಕ ಅಂತರ್ಜಾಲ ಮಾಧ್ಯಮಗಳಿಗೆ ಹೊಕ್ಕಿ ಇಂತಹ ಪ್ರತಿಕ್ರಿಯೆಗಳಿಗೆ ಉತ್ತರಿಸಬೇಕು ಎಂದಿದ್ದಾರೆ.
ಈ ವಿಷಯದಲ್ಲಿ ಅಗರ್ವಾಲ್ ಅವರನ್ನು ಬೆಂಬಲಿಸಿದ ಕಾಂಗ್ರೆಸ್ ಪಕ್ಷದ ರಾಜೀವ್ ಶುಕ್ಲ, ಸಂಸತ್ತಿನ ಕ್ಯಾಂಟೀನ್ ಗಳಲ್ಲಿ ಸಂಸದರು ಮಾತ್ರ ತಿನ್ನುತ್ತಾರೆ ಮತ್ತು ಅವರಿಗೆ ಹೆಚ್ಚೆಚ್ಚು ಸೌಕರ್ಯಗಳಿವೆ ಎಂದು ಬಿಂಬಿಸಲಾಗುತ್ತಿದೆ ಎಂದಿದ್ದಾರೆ.
"ಸಾಮಾಜಿಕ ಮಾಧ್ಯಮಗಳಲ್ಲಿ ಸಮಾಜ ವಿರೋಧಿ ಚಟುವಟಿಕೆಗಳು ಇವು" ಎಂದು ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ಮುಕ್ತಾರ್ ಅಬ್ಬಾಸ್ ನಕ್ವಿ ಹೇಳಿದ್ದು, ಸರ್ಕಾರ ಇದರ ಬಗ್ಗೆ ಚಿಂತಿಸಿ, ಸಾಧ್ಯವಾದದ್ದನ್ನು ಮಾಡುತ್ತದೆ ಎಂದಿದ್ದಾರೆ.