ನವದೆಹಲಿ: ದೆಹಲಿ ರಜೌರಿ ಗಾರ್ಡನ್ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಬಿಜೆಪಿ ಪಕ್ಷದ ಮಂಜಿಂದರ್ ಸಿಂಗ್ ಸಿರ್ಸಾ ಕಾಂಗ್ರೆಸ್ ಅಭ್ಯರ್ಥಿಯನ್ನು ಗುರುವಾರ ಸೋಲಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಮೀನಾಕ್ಷಿ ಚಾಂಡೇಲಾ ಅವರನ್ನು ೧೪,೦೦೦ ಮತಗಳ ಆನಂತರದಿಂದ ಮಂಜಿಂದರ್ ಸೋಲಿಸಿದ್ದರೆ, ಎಎಪಿ ಪಕ್ಷದ ಅಭ್ಯರ್ಥಿಯನ್ನು ಮೂರನೇ ಸ್ಥಾನಕ್ಕೆ ತಳ್ಳಿದ್ದಾರೆ.
ಸಿರ್ಸಾ, ಚಾಂಡೇಲಾ ಮತ್ತು ಎಎಪಿ ಪಕ್ಷದ ಹರ್ಜಿತ್ ಸಿಂಗ್ ಕ್ರಮವಾಗಿ ೪೦,೬೦೨ - ೨೫,೯೫೦ ಮತ್ತು ೧೦,೨೪೩ ಮತಗಳನ್ನು ಪಡೆದಿದ್ದಾರೆ.
ಶಾಸಕ ಜರ್ನೇಲ್ ರಾಜೀನಾಮೆ ಮುಳುವಾಯಿತು: ಸಿಸೋಡಿಯಾ
ದೆಹಲಿ ರಾಜೌರಿ ಗಾರ್ಡನ್ ಉಪಚುನಾವಣೆಯಲ್ಲಿ ಮೂರನೇ ಸ್ಥಾನಕ್ಕೆ ಎಎಪಿ ತಳ್ಳಲ್ಪಟ್ಟಿದ್ದು, ಇದಕ್ಕೆ ಪ್ರತಿಕ್ರಿಯಿಸಿರುವ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಪಂಜಾಬ್ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಜರ್ನೇಲ್ ಸಿಂಗ್ ರಾಜೀನಾಮೆ ನೀಡಿದ್ದು ಅಲ್ಲಿನ ಮತದಾರರನ್ನು ಕುಪಿತಗೊಳಿಸಿದೆ ಎಂದಿದ್ದಾರೆ. ಇದೆ ಉಪಚುನಾವಣೆಯಲ್ಲಿ ನಮ್ಮ ಸೋಲಿಗೆ ಕಾರಣ ಎಂದು ಕೂಡ ಹೇಳಿದ್ದಾರೆ.
"ರಜೌರಿ ಗಾರ್ಡನ್ ಮತದಾರರು ಜರ್ನೇಲ್ ಸಿಂಗ್ ರಾಜೀನಾಮೆ ನೀಡಿದ್ದಕ್ಕೆ ಕುಪಿತಗೊಂಡಿದ್ದಾರೆ. ಅವರಿಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದೆವು. ಆದರೆ ಅವರು ಇನ್ನು ಕುಪಿತರಾಗಿಯೇ ಇದ್ದಾರೆ" ಎಂದು ಸಿಸೋಡಿಯಾ ಮಾಧ್ಯಮಗಳಿಗೆ ಹೇಳಿದ್ದಾರೆ.