ನವದೆಹಲಿ: ೧೨ನೇ ತರಗತಿ ವಿದ್ಯಾರ್ಥಿ ಓಡಿಸುತ್ತಿದ್ದ ಕಾರು ಪಾದಚಾರಿ ಮಾರ್ಗದ ಮೇಲೆ ಮಲಗಿದ್ದ ಜನರ ಮೇಲೆ ಹರಿದ ಪರಿಣಾಮ ಓರ್ವ ವ್ಯಕ್ತಿ ಮೃತಪಟ್ಟಿದ್ದು ಹಲವರಿಗೆ ಗಂಭೀರ ಗಾಯಗಳಾಗಿವೆ.
ಕಾರು ಓಡಿಸುತ್ತಿದ್ದ ಸಮರ್ಥ್ ಚುಗ್ ಎಂಬುವವನನ್ನು, ಈ ದುರಂತ ನಡೆದ ಜಾಗದಲ್ಲಿದ್ದ ಜನರು ಹಿಡಿದಿದ್ದರೆ, ಹುಂಡೈ ಐ೨೦ ಕಾರಿನಲ್ಲಿದ್ದ ಇನ್ನಿಬ್ಬರು ಆ ಸ್ಥಳದಿಂದ ಪರಾರಿಯಾಗಿದ್ದಾರೆ.
ಚುಗ್ ತಂದೆಯವರ ಒಡೆತನದ ಕಾರಿನಲ್ಲಿ ಈ ಮೂವರು ಜಾಲಿಚಾಲನೆ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆ ಬೆಳಗ್ಗೆ ಸುಮಾರು ೫:೪೫ಕ್ಕೆ ಕಾಶ್ಮೀರ ಗೇಟ್ ಅಂತರರಾಜ್ಯ ಬಸ್ ನಿಲ್ದಾಣದ ಬಳಿ ಸಂಭವಿಸಿದೆ.
"ಐಪಿಸಿ ಸೆಕ್ಷನ್ ೩೦೪ರ ಅಡಿಯಲ್ಲಿ ನಾವು ಪ್ರಕರಣ ದಾಖಲಿಸಿಕೊಂಡಿದ್ದೇವೆ" ಎಂದು ಉಪ ಪೊಲೀಸ್ ಆಯುಕ್ತ ಜತಿನ್ ನರ್ವಾಲ್ ಹೇಳಿದ್ದಾರೆ.
ಮೃತಪಟ್ಟ ವ್ಯಕ್ತಿಯ ಗುರುತು ಇನ್ನು ಪತ್ತೆಯಾಗಿಲ್ಲ. ಗಂಭೀರವಾಗಿ ಗಾಯಗೊಂಡ ಮೂವರನ್ನು ಸುಶ್ರುತ ಟ್ರಾಮಾ ಕೇಂದ್ರಕ್ಕೆ ದಾಖಲು ಮಾಡಲಾಗಿದ್ದು, ಅವರನ್ನು ಆಸಿಫ್, ಕರಣ್ ಮತ್ತು ಸಂಜಯ್ ಎಂದು ಗುರುತಿಸಲಾಗಿದೆ. ಈ ನಾಲ್ಕು ಜನ ಕಾರ್ಮಿಕರಿರಬಹುದು ಎಂದು ಪೊಲೀಸರು ಹೇಳಿದ್ದಾರೆ.
ಪೋಲೀಸರ ವರದಿಯಂತೆ ಚುಗ್ ಮತ್ತು ಅವನ ಗೆಳೆಯರಾದ ಉಜ್ವಲ್ ಗೋಯಲ್ ಮತ್ತು ಭವ್ಯ ತಮ್ಮ ೧೨ ನೇ ತರಗತಿಯ ಪರೀಕ್ಷೆ ಮುಗಿಸಿದ ಸಂಭ್ರಮಕ್ಕಾಗಿ ಕಾರಿನಲ್ಲಿ ಜಾಲಿ ಚಾಲನೆ ಮಾಡುತ್ತಿದ್ದರು ಎಂದಿದ್ದಾರೆ. ಚುಗ್ ಅವರು ಉತ್ತರ ದೆಹಲಿಯ ಮಾಡೆಲ್ ಟೌನ್ ನ ನಿವಾಸಿ.
ವರ್ತುಲ ರಸ್ತೆಯಿಂದ ಬರುತ್ತಿದ್ದ ಕಾರು ನಿಯಂತ್ರಣ ಕಳೆದುಕೊಂಡು ಐ ಎಸ್ ಬಿ ಟಿ ಹನುಮಾನ್ ಮಂದಿರದ ಬಳಿ ಇರುವ ಪಾದಚಾರಿ ಮಾರ್ಗವನ್ನು ಹತ್ತಿ ಅಲ್ಲಿ ಮಲಗಿದ್ದ ಸಂತ್ರಸ್ತರ ಮೇಲೆ ಹರಿದಿದೆ ಎಂದು ಪೊಲೀಸರು ಹೇಳಿದ್ದಾರೆ.
ಚುಗ್ ಮೊದಲಿಗೆ ಅಪ್ರಾಪ್ತ ಎನ್ನಲಾಗಿದ್ದರು ನಂತರ ಅಧಿಕಾರಿಗಳು ಸ್ಪಷ್ಟಿಕರಣ ನೀಡಿ, ಅವರು ೧೮ ವರ್ಷದ ಮೇಲ್ಪಟ್ಟವರಾಗಿದ್ದು, ಅವರ ಬಳಿ ಚಾಲನಾ ಪರವಾನಗಿ ಕೂಡ ಇರಲಿಲ್ಲ ಎಂದಿದ್ದಾರೆ.
ಚಾಲನೆ ಮಾಡುವಾಗ ಮದ್ಯ ಸೇವಿಸಿದ್ದರೆ ಎಂಬುದನ್ನು ಪತ್ತೆ ಹಚ್ಚುವುದಕ್ಕೆ ಅವರ ರಕ್ತ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ.