ಶನಿವಾರ ವಿಚಾರಣೆಗೆ ಹಾಜರಾಗುವಂತೆ ದೆಹಲಿ ಪೊಲೀಸರಿಂದ ದಿನಕರನ್ ಗೆ ನೋಟಿಸ್

ಎಐಎಡಿಎಂಕೆ ಪಕ್ಷದ ಎರಡು ಎಲೆಗಳ ಚಿನ್ಹೆಗಾಗಿ ಚುನಾವಣಾ ಆಯೋಗದ ಅಧಿಕಾರಿಗೆ ಲಂಚ ನೀಡಿದ ಆರೋಪ ಎದುರಿಸುತ್ತಿರುವ,....
ಟಿಟಿವಿ ದಿನಕರನ್
ಟಿಟಿವಿ ದಿನಕರನ್
ಚೆನ್ನೈ: ಎಐಎಡಿಎಂಕೆ ಪಕ್ಷದ ಎರಡು ಎಲೆಗಳ ಚಿನ್ಹೆಗಾಗಿ ಚುನಾವಣಾ ಆಯೋಗದ ಅಧಿಕಾರಿಗೆ ಲಂಚ ನೀಡಿದ ಆರೋಪ ಎದುರಿಸುತ್ತಿರುವ, ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ಅವರ ಸಂಬಂಧಿ ಹಾಗೂ ಎಐಎಡಿಎಂಕೆ ಉಪ ಪ್ರಧಾನ ಕಾರ್ಯದರ್ಶಿ  
ಟಿಟಿವಿ ದಿನಕರನ್ ಗೆ ಶನಿವಾರ ವಿಚಾರಣೆಗೆ ಹಾಜರಾಗುವಂತೆ ದೆಹಲಿ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.
ದೆಹಲಿ ಕ್ರೈ ಬ್ರ್ಯಾಂಚ್ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗುವಂತೆ ನಿನ್ನೆ ರಾತ್ರಿ ಸಹಾಯಕ ಪೊಲೀಸ್ ಆಯುಕ್ತ ಸಂಜಯ್ ಹಾಗೂ ಮತ್ತೊಬ್ಬ ಅಧಿಕಾರಿ ಬೆಸಂತ್ ನಗರದಲ್ಲಿರುವ ದಿನಕರನ್ ಅವರ ನಿವಾಸಕ್ಕೆ ನೋಟಿಸ್ ತಲುಪಿಸಿದ್ದಾರೆ.
ದೆಹಲಿ ಪೊಲೀಸರು ನಿನ್ನೆ ದಿನಕರನ್ ವಿರುದ್ಧ ಲುಕ್ ಔಟ್ ನೋಟಿಸ್ ಸಹ ಜಾರಿ ಮಾಡಿದ್ದರು. ವಿಚಾರಣೆಯಿಂದ ಪಾರಾಗಲು ಪರಾರಿಯಾಗುವ ಶಂಕೆ ಮೇರೆಗೆ ಪೊಲೀಸರು ಈ ಕ್ರಮ ಕೈಗೊಂಡಿದ್ದು, ಮುಂಜಾಗ್ರತಾ ಕ್ರಮವಾಗಿ ಲುಕ್ ಔಟ್ ನೋಟಿಸ್ ಜಾರಿ ಮಾಡಲಾಗಿತ್ತು. 
ಇನ್ನು  ಚುನಾವಣಾ ಅಧಿಕಾರಿಗೆ ಲಂಚ ನೀಡಿದ ಪ್ರಕರಣದ ವಿಚಾರಣೆಯನ್ನು ತೀವ್ರ ಗೊಳಿಸಿರುವ ದೆಹಲಿ ಕ್ರೈಂ ಬ್ರ್ಯಾಂಚ್ ಅಧಿಕಾರಿಗಳು ಮಧ್ಯವರ್ತಿ ಸುಖೇಶ್ ಚಂದ್ರಶೇಖರ್ ನನ್ನು ತೀವ್ರ ವಿಚಾರಣೆಗೊಳಪಡಿಸಿದ್ದು, ಅತನ  ಸಹಚರರಿಗಾಗಿಯೂ ಬಲೆ ಬೀಸಿದ್ದಾರೆ.
ಏಪ್ರಿಲ್ 16ರಂದು ದೆಹಲಿಯ ವಿವಿಧೆಡೆ ದಾಳಿ ಮಾಡಿದ್ದ ಅಧಿಕಾರಿಗಳು ದಕ್ಷಿಣ ದೆಹಲಿಯ ಖಾಸಗಿ ಹೊಟೆಲ್ ನ ರೂಂ ಒಂದರಲ್ಲಿ ಮಧ್ಯವರ್ತಿ ಸುಖೇಶ್ ಚಂದ್ರಶೇಖರ್ ನನ್ನು ವಶಕ್ಕೆ ಪಡೆದಿದ್ದರು. ಅಲ್ಲದೆ ಆತನಿಂದ 2000  ರು.ನೋಟಿನ ಕಂತೆಗಳಿರುವ ಬ್ಯಾಗ್ ಅನ್ನು ಕೂಡ ವಶ ಪಡಿಸಿಕೊಂಡಿದ್ದರು. ಚಾಂದಿನಿ ಚೌಕ್ ನಲ್ಲಿರುವ ಹವಾಲಾ ದಂಧೆಕೋರರಿಂದ ಸುಖೇಶ್ ಈ ಹಣ ಪಡೆದಿದ್ದಾಗೆ ಹೇಳಿಕೆ ನೀಡಿದ್ದ.  ಈ ಹಣವನ್ನು ಟಿಟಿವಿ ದಿನಕರನ್ ಅವರೇ  ಹವಾಲಾ ದಂಧೆ ಮೂಲಕ ರವಾನಿಸಿದ್ದರು ಎಂದು ಆರೋಪಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com