ಇಂಧನ ಉಳಿಸಿ ಎಂದು ಪ್ರಧಾನಿ ಕರೆ ಕೊಟ್ಟರೇ ಹೊರತು, ಪಂಪ್ ಬಂದ್ ಮಾಡಿ ಎಂದು ಅಲ್ಲ: ಧರ್ಮೇಂದ್ರ ಪ್ರಧಾನ್

ಮುಂದಿನ ತಿಂಗಳ 14ರಿಂದ ಪ್ರತಿ ಭಾನುವಾರ ಪೆಟ್ರೋಲ್‌ ಬಂಕ್ ಗಳನ್ನು ಮುಚ್ಚುವ ದಕ್ಷಿಣ ಭಾರತ ರಾಜ್ಯಗಳ ಪೆಟ್ರೋಲ್‌ ಬಂಕ್‌ ಮಾಲೀಕರ ಸಲಹೆಗೆ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿಲ್ಲ. ಇದರಿಂದ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಮುಂದಿನ ತಿಂಗಳ 14ರಿಂದ ಪ್ರತಿ ಭಾನುವಾರ ಪೆಟ್ರೋಲ್‌ ಬಂಕ್ ಗಳನ್ನು ಮುಚ್ಚುವ ದಕ್ಷಿಣ ಭಾರತ ರಾಜ್ಯಗಳ ಪೆಟ್ರೋಲ್‌ ಬಂಕ್‌ ಮಾಲೀಕರ ಸಲಹೆಗೆ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿಲ್ಲ. ಇದರಿಂದ  ಜನಸಾಮಾನ್ಯರಿಗೆ ತೊಂದರೆಯಾಗಲಿದೆ ಎಂದು ತೈಲ ಸಚಿವಾಲಯ ಶುಕ್ರವಾರ ಅಭಿಪ್ರಾಯಪಟ್ಟಿದೆ.

ವಾರದಲ್ಲಿ ಒಂದು ದಿನ ಪೆಟ್ರೋಲ್ ಬಂಕ್ ಬಂದ್ ಮಾಡುವ ದಕ್ಷಿಣ ಭಾರತ ರಾಜ್ಯಗಳ ಪೆಟ್ರೋಲ್‌ ಬಂಕ್‌ ಮಾಲೀಕರ ಒಕ್ಕೂಟದ ಸಲಹೆಯನ್ನು ತಿರಸ್ಕರಿಸಿರುವ ಕೇಂದ್ರ ಸರ್ಕಾರ, ಬಂಕ್ ಬಂದ್ ಮಾಡುವುದರಿಂದ  ಜನಸಾಮಾನ್ಯರಿಗೆ ತೊಂದರೆಯಾಗಲಿದೆ ಎಂದು ಹೇಳಿದೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಅವರು, "ವಾರದಲ್ಲಿ ಒಂದು ದಿನ ಪೆಟ್ರೋಲ್‌, ಡೀಸೆಲ್‌ ಅನ್ನು ಬಳಕೆ ಮಾಡುವುದನ್ನು  ಕಡಿಮೆ ಮಾಡುವ ಮೂಲಕ ದೇಶ ಕಚ್ಚಾ ತೈಲದ ಆಮದನ್ನು ತಗ್ಗಿಸಬಹುದು. ಈ ಮೂಲಕ ದೇಶಕ್ಕೆ ಇಂಧನವನ್ನು ಉಳಿತಾಯ ಮಾಡಬಹುದು ಎಂದು ಪ್ರಧಾನಿ ನರೇಂದ್ರ ಮೋದಿ "ಮನ್‌ ಕಿ ಬಾತ್‌"ನಲ್ಲಿ ಹೇಳಿದ್ದಾರೆಯೇ ಹೊರತು,  ವಾರದಲ್ಲಿ ಒಂದು ದಿನ ಪೆಟ್ರೋಲ್‌ ಬಂಕ್‌ ಗಳನ್ನು ಮುಚ್ಚಲು ಅಲ್ಲ ಎಂದು ಹೇಳಿದ್ದಾರೆ.

ಈ ಬಗ್ಗೆ ಈ ಕುರಿತಂತೆ ಸರಣಿ ಟ್ವೀಟ್‌ ಮಾಡಿರುವ ಪೆಟ್ರೋಲಿಯಂ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್‌ ಅವರು, "ಅಲ್ಪ ಸಂಖ್ಯೆಯ ಪಂಪ್‌ ಗಳ ಈ ನಿರ್ಧಾರದಿಂದ ಜನಸಾಮಾನ್ಯರಿಗೆ ತೊಂದರೆಯಾಗಲಿದೆ. ಹೀಗಾಗಿ ಒಕ್ಕೂಟದ  ಈ ಬೇಡಿಕೆಗೆ ಸಮ್ಮತಿಸುವ ಪ್ರಮೇಯವೇ ಇಲ್ಲ ಎಂದು ಟ್ವೀಟ್ ಮಾಡಿದ್ದಾರೆ.

ಮತ್ತೊಂದೆಡೆ ದೇಶದಲ್ಲಿ ಶೇ.80ರಷ್ಟು (53,224) ಪೆಟ್ರೋಲ್‌ ಬಂಕ್ ಗಳನ್ನು ಹೊಂದಿರುವ ಇಂಡಿಯನ್‌ ಪೆಟ್ರೋಲಿಯಂ ಡೀಲರ್ ಅಸೋಸಿಯೇಷನ್‌, ಪಂಪ್‌ ಮುಚ್ಚುವ ಪ್ರಕ್ರಿಯೆಯಲ್ಲಿ ತಾನಿಲ್ಲ ಎಂದಿದೆ. ತಮಿಳುನಾಡು,  ತೆಲಂಗಾಣ, ಆಂಧ್ರಪ್ರದೇಶ, ಕೇರಳ, ಪುದುಚೇರಿ, ಕರ್ನಾಟಕ, ಮಹಾರಾಷ್ಟ್ಯ ರಾಜ್ಯಗಳಲ್ಲಿ ಮೇ 14ರಿಂದ ಭಾನುವಾರಗಳಂದು ಪೆಟ್ರೋಲ್‌ ಬಂಕ್ ಗಳಿಗೆ ರಜೆ ನೀಡಲು ಅನುಮತಿ ನೀಡುವಂತೆ ಭಾರತದ ಪೆಟ್ರೋಲಿಯಂ ಡೀಲರ್‌ಗಳ ಒಕ್ಕೂಟ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿತ್ತು. ಆದರೆ ಒಕ್ಕೂಟದ ನಿರ್ಧಾರಕ್ಕೆ ಕರ್ನಾಟಕದ ಡೀಲರ್‌ ಗಳು ಅಸಮ್ಮತಿ ಸೂಚಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com