ಗುಪ್ತಚರ ಇಲಾಖೆ ವೈಫಲ್ಯ, ನಿಯಮಗಳ ಕಡೆಗಣನೆಯೇ ಹೆಚ್ಚಿನ ಹಾನಿಗೆ ಕಾರಣ!

25 ಮಂದಿ ಸಿಆರ್ ಪಿಎಫ್ ಯೋಧರ ಧಾರುಣ ಸಾವಿಗೆ ಕಾರಣವಾದ ಸುಕ್ಮಾ ನಕ್ಸಲ್ ದಾಳಿಗೆ ಗುಪ್ತಚರ ಇಲಾಖೆಯ ವೈಫಲ್ಯ ಹಾಗೂ ನಿಯಮಗಳನ್ನು ಕಡೆಗಣಿಸಿದ್ದೇ ಕಾರಣ ಎಂದು ಹೇಳಲಾಗುತ್ತಿದೆ.
ನಕ್ಸಲರ ದಾಳಿಯಲ್ಲಿ ಗಾಯಗೊಂಡ ಯೋಧ (ಸಂಗ್ರಹ ಚಿತ್ರ)
ನಕ್ಸಲರ ದಾಳಿಯಲ್ಲಿ ಗಾಯಗೊಂಡ ಯೋಧ (ಸಂಗ್ರಹ ಚಿತ್ರ)
Updated on

ರಾಯ್ ಪುರ: 25 ಮಂದಿ ಸಿಆರ್ ಪಿಎಫ್ ಯೋಧರ ಧಾರುಣ ಸಾವಿಗೆ ಕಾರಣವಾದ ಸುಕ್ಮಾ ನಕ್ಸಲ್ ದಾಳಿಗೆ ಗುಪ್ತಚರ ಇಲಾಖೆಯ ವೈಫಲ್ಯ ಹಾಗೂ ನಿಯಮಗಳನ್ನು ಕಡೆಗಣಿಸಿದ್ದೇ ಕಾರಣ ಎಂದು ಹೇಳಲಾಗುತ್ತಿದೆ.

ನಿನ್ನೆ ಛತ್ತೀಸ್ ಘಡದ ಸುಕ್ಮಾ ಜಿಲ್ಲೆಯಲ್ಲಿ ನಡೆದ ಭೀಕರ ನಕ್ಸಲ್ ದಾಳಿ ಬೆನ್ನಲ್ಲೇ ಮುಖ್ಯಮಂತ್ರಿ ರಮಣ್ ಸಿಂಗ್ ಅವರು ಸರ್ಕಾರದ ಉನ್ನತ ಮಟ್ಟದ ಭದ್ರತಾ ಅಧಿಕಾರಿಗಳ ತುರ್ತು ಸಭೆ ನಡೆಸಿದರು. ಈ ವೇಳೆ ದಾಳಿಗೆ  ಸಂಬಂಧಿಸಿದಂತೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಲಾಯಿತು. ಅಂತೆಯೇ ಬಹುತೇಕ ಅಧಿಕಾರಿಗಳು ದಾಳಿಗೆ ರಾಜ್ಯ ಗುಪ್ತಚರ ಇಲಾಖೆಯ ವೈಫಲ್ಯ ಹಾಗೂ ನಿಯಮಗಳನ್ನು ಕಡೆಗಣಿಸಿದ್ದೇ ಕಾರಣ ಎಂಬ ಅಭಿಪ್ರಾಯ  ವ್ಯಕ್ತಪಡಿಸಿದ್ದಾರೆ.

ಪ್ರಮುಖವಾಗಿ ರಸ್ತೆ ಲೋಕಾರ್ಪಣೆ ಕಾರ್ಯಕ್ರಮಕ್ಕೆ 100 ಸಿಆರ್ ಪಿಎಫ್ ಯೋಧರನ್ನು ನಿಯೋಜಿಸಲಾಗಿತ್ತಾದರೂ ತಮ್ಮದೇ ಸುತ್ತಮುತ್ತಲ ಪ್ರದೇಶದಲ್ಲಿ ಭಾರಿ ಸಂಖ್ಯೆಯ ನಕ್ಸಲರು ದಾಳಿಗಾಗಿ ಕಾದಿರುವ ವಿಚಾರ ಯೋಧರಿಗೆ  ತಿಳಿಯದೇ ಹೋಗಿತ್ತು. ಕೇವಲ 1-2 ಕಿ.ಮೀ ವ್ಯಾಪ್ತಿಯಲ್ಲಿ ಬರೊಬ್ಬರಿ 300 ನಕ್ಸಲರು ಅವಿತಿರುವ ಕುರಿತು ಯಾವುದೇ ಮಾಹಿತಿ ಲಭ್ಯವಾಗದೇ ಇರುವುದು ಗುಪ್ತಚರ ಇಲಾಖೆಯ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ.

ಎನ್ ಕೌಂಟರ್ ನಡೆದ ಪ್ರದೇಶದಿಂದ ಕೇವಲ ನಾಲ್ಕೇ ಕಿ.ಮೀ ಅಂತರದಲ್ಲಿ ಬುರ್ಕಾಪಾಲ್ ಸಿಆರ್ ಪಿಎಫ್ ಬೇಸ್ ಕ್ಯಾಂಪ್ ಇದ್ದು, ದಾಳಿಯಾದ ಕುರಿತು ಬೇಸ್ ಕ್ಯಾಂಪ್ ಗೆ ತಡವಾಗಿ ಮಾಹಿತಿ ಬಂದಿದ್ದೂ ಕೂಡ ಹೆಚ್ಚಿನ ಹಾನಿಗೆ  ಕಾರಣ ಎಂದು ಹೇಳಲಾಗಿದೆ. ಅಚ್ಚರಿಯ ವಿಷಯವೆಂದರೆ ಬೇಸ್ ಕ್ಯಾಂಪ್ ನ ನಾಲ್ಕು ಕಿ.ಮೀ ವ್ಯಾಪ್ತಿಯಲ್ಲಿ ಭಾರಿ ಸಂಖ್ಯೆಯ ನಕ್ಸಲರು ಓಡಾಡುತ್ತಿದ್ದರೂ ಯಾವುದೇ ರೀತಿಯ ಮಾಹಿತಿ ದೊರೆಯದೇ ಇರುವುದು ಭದ್ರತೆಯಲ್ಲಿ ಭಾರಿ  ಪ್ರಮಾಣದ ಲೋಪವಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.

ಇನ್ನು ದಾಳಿ ವೇಳೆ ಪ್ರತೀ ಮೂವರು ನಕ್ಸರ ವಿರುದ್ಧ ಓರ್ವ ಸಿಆರ್ ಪಿಎಫ್ ಯೋಧ ಹೋರಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿತ್ತು. ಇದಲ್ಲದೆ 50 ಮಂದಿ ಜವಾನರು ನಕ್ಸಲರನ್ನು ಹಿಮ್ಮೆಟ್ಟಿಸುವ ಕಾರ್ಯದಲ್ಲಿ ತೊಡಗಿದ್ದರು.  ಹೀಗಾಗಿ ಸಾವು-ನೋವಿನ ಸಂಖ್ಯೆ ಹೆಚ್ಚಾಗಿದೆ ಎಂದು ಹಿರಿಯ ಭದ್ರತಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇನ್ನು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಅಧಿಕಾರಿಗಳು ನಕ್ಸಲರಿಗೆ ಸ್ಥಳೀಯರ ನೆರವು ದೊರೆತಿರುವ ಸಾಧ್ಯತೆಗಳಿದೆ ಎಂದು ಶಂಕಿಸಿದ್ದು, ಯಾವುದೇ ಮುನ್ಸೂಚನೆ ಇಲ್ಲದೇ ಭಾರಿ ಪ್ರಮಾಣದ ನಕ್ಸಲರು ಬಂದಿದ್ದು ಹೇಗೆ  ಎಂಬ ವಿಚಾರದ ಕುರಿತು ಗಂಭೀರವಾಗಿ ಚಿಂತಿಸಬೇಕಿದೆ ಎಂದು ಡಿಜಿಪಿ ಎ ಎನ್ ಉಪಾಧ್ಯಾಯ ಅವರು ಅಭಿಪ್ರಾಯಪಟ್ಟಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com