ಬಡ್ತಿಯಲ್ಲಿ ಎಸ್ಸಿ, ಎಸ್ಟಿ ಮೀಸಲಾತಿ ರದ್ದುಗೊಳಿಸಿದ ಸುಪ್ರೀಂ ಕೋರ್ಟ್, ರಾಜ್ಯ ಸರ್ಕಾರಕ್ಕೆ ತೀವ್ರ ಹಿನ್ನಡೆ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ನೌಕರರಿಗೆ ಬಡ್ತಿಯಲ್ಲಿ ನೀಡಲಾಗುತ್ತಿದ್ದ ಮೀಸಲಾತಿಯನ್ನು ಸುಪ್ರೀಂ ಕೋರ್ಟ್‌ ರದ್ದುಗೊಳಿಸಿದ್ದು,...
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್
ನವದೆಹಲಿ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ನೌಕರರಿಗೆ ಬಡ್ತಿಯಲ್ಲಿ ನೀಡಲಾಗುತ್ತಿದ್ದ ಮೀಸಲಾತಿಯನ್ನು ಸುಪ್ರೀಂ ಕೋರ್ಟ್‌ ರದ್ದುಗೊಳಿಸಿದ್ದು, ಮೀಸಲಾತಿ ಒದಗಿಸುವ ಅಧಿಕಾರ ರಾಜ್ಯ ಸರ್ಕಾರಕ್ಕಿಲ್ಲ ಮತ್ತು ಕರ್ನಾಟಕ ಸರ್ಕಾರದ 39 ವರ್ಷಗಳ ಕೋಟಾ ಕಾನೂನಿಗೆ ಯಾವುದೇ ಮಾನ್ಯತೆಯಿಲ್ಲ ಎಂದು  ಹೇಳಿದೆ.
ಸುಪ್ರೀಂ ಕೋರ್ಟ್ ನ ಈ ಮಹತ್ವದ ತೀರ್ಪಿನಿಂದಾಗಿ ಬಡ್ತಿ ಮೀಸಲಾತಿ ವಿಧಾನ ಅನುಸರಿಸುವ ರಾಜ್ಯ ಸರ್ಕಾರದ 2002ರ ಕಾಯ್ದೆ ರದ್ದಾದಂತಾಗಿದೆ. ಅಲ್ಲದೆ ಹೊಸ ಜ್ಯೇಷ್ಠತಾ ಪಟ್ಟಿಯನ್ನು ಮೂರು ತಿಂಗಳೊಳಗೆ ಪರಿಷ್ಕರಿಸಿ ಸಿದ್ಧಪಡಿಸಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದ್ದು, ಇದರಿಂದಾಗಿ ಹಲವು ವರ್ಷಗಳಿಂದ ಬಡ್ತಿಗಾಗಿ ಕಾಯುತ್ತಿದ್ದ ಸಾಮಾನ್ಯ ಹಾಗೂ ಇತರೆ ಹಿಂದುಳಿದ ವರ್ಗಗಳ ನೌಕರರಿಗೆ ನ್ಯಾಯ ಸಿಗಲಿದ್ದು, ಅವರು ನೆಮ್ಮದಿಯ ನಿಟ್ಟುಸಿರು ಬಿಡಬಹುದಾಗಿದೆ.
2011ರಲ್ಲಿ ಬಿಡಿಎನಲ್ಲಿ ಸೇವೆ ಸಲ್ಲಿಸುತ್ತಿದ್ದ ಬಿ.ಕೆ.ಪವಿತ್ರಾ ಎಂಬವರು ಸೇವಾ ಬಡ್ತಿ ವಿಚಾರದಲ್ಲಿ ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಆದರ್ಶಕುಮಾರ್‌ ಗೋಯೆಲ್‌ ಹಾಗೂ ಯು.ಯು. ಲಲಿತ್‌ ಅವರನ್ನು ಒಳಗೊಂಡ ಪೀಠ, ಹೈಕೋರ್ಟ್ ಆದೇಶ ದೋಷಪೂರಿತ ಎಂದು ಹೇಳಿದೆ. ಅಲ್ಲದೆ ಬಡ್ತಿ ಹುದ್ದೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಸಮ ಪ್ರಮಾಣದ ಪ್ರಾತಿನಿಧ್ಯ ಇಲ್ಲ ಎಂಬ ಒಂದೇ ಕಾರಣದಿಂದ ಸೇವೆಯಲ್ಲಿ ಕಿರಿಯರಾಗಿದ್ದರೂ ಸಾಂದರ್ಭಿಕ ಹಿರಿತನ ನೀಡಿ ಆ ಮೂಲಕ ಇತರರಿಗೆ ಬಡ್ತಿಯನ್ನು ನಿರಾಕರಿಸುವುದು ಸರಿಯಲ್ಲ ಎಂದು ಹೇಳಿದೆ.
ಬಡ್ತಿಯಲ್ಲಿ ಮೀಸಲಾತಿ ನೀಡುವಾಗ ಸರ್ಕಾರಿ ಹುದ್ದೆಗಳಲ್ಲಿ ಆಯಾ ಸಮುದಾಯಗಳಿಗೆ ದೊರೆತಿರುವ ಪ್ರಾತಿನಿಧ್ಯ, ಹಿಂದುಳಿದಿರುವಿಕೆ ಮತ್ತು ಆಡಳಿತ ದಕ್ಷತೆಯಂತಹ ಮಾನದಂಡಗಳನ್ನು ಅನುಸರಿಸುವುದು ಕಡ್ಡಾಯ ಎಂದು ಕೋರ್ಟ್ ಹೇಳಿದೆ.
ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಹುದ್ದೆಯ ತನಕ ಮಾತ್ರವೇ ಮೀಸಲಾತಿ ಆಧರಿತ ಬಡ್ತಿ ನೀಡುವ ಕಾರಣ ಇಲಾಖೆಯ ಎಲ್ಲ ಉನ್ನತ ಹುದ್ದೆಗಳೂ ಪರಿಶಿಷ್ಟರಿಗೆ ದಕ್ಕಿಬಿಡುತ್ತವೆ ಮತ್ತು ಸಾಮಾನ್ಯ ವರ್ಗದ ನೌಕರರಿಗೆ ಅವಕಾಶಗಳು ಬತ್ತಿಹೋಗುತ್ತವೆ ಎಂಬ ವಾದದಲ್ಲಿ ಹುರುಳಿಲ್ಲ ಎಂದು ತಿಳಿಸಿ ರಾಜ್ಯ ಸರ್ಕಾರದ ಕಾಯ್ದೆಯ ಸಿಂಧುತ್ವವನ್ನು ಹೈಕೋರ್ಟ್‌ ಎತ್ತಿಹಿಡಿದಿತ್ತು. 
ರಾಜ್ಯ ಸರ್ಕಾರದ ಕಾಯ್ದೆಯು ಬಡ್ತಿಗೆ ಸಂಬಂಧಿಸಿದ್ದೇ ವಿನಾ ಮೀಸಲಾತಿಗೆ ಸಂಬಂಧಿಸಿದ್ದಲ್ಲ. ಸೇವಾಹಿರಿತನವು ನಾಗರಿಕ ಹಕ್ಕೇ ವಿನಾ ಮೂಲಭೂತ ಹಕ್ಕಲ್ಲ. ನಿಗದಿತ ಪ್ರಮಾಣವನ್ನು ಮೀರದಿರುವ ಪರಿಸ್ಥಿತಿಯಲ್ಲಿ ಬಡ್ತಿ ನೀಡಲು ಯಾವುದೇ ಮಿತಿಗಳಿಲ್ಲ. ಜ್ಯೇಷ್ಠತೆಯನ್ನು ರದ್ದು ಮಾಡುವುದಿದ್ದರೂ, ನಿವೃತ್ತರಾಗಿರುವ ಅಥವಾ ಉನ್ನತ ಹುದ್ದೆಗಳನ್ನು ತಲುಪಿರುವವರ ಜ್ಯೇಷ್ಠತೆಯನ್ನು ತಿರುವುಮುರುವು ಮಾಡುವುದು ಸಾಧ್ಯವಿಲ್ಲ ಎಂದು ರಾಜ್ಯ ಸರ್ಕಾರದ ಪರವಾಗಿ ಹಿರಿಯ ವಕೀಲ ಬಸವಪ್ರಭು ಪಾಟೀಲ ಮಂಡಿಸಿದ್ದ ವಾದವನ್ನು ಕೋರ್ಟ್‌ ತಿರಸ್ಕರಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com