ಮೊದಲ ಬಾರಿಗೆ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಪಿಸ್ತೂಲು ಪ್ರದರ್ಶನ!

1927ರಲ್ಲಿ ಬ್ರಿಟೀಷ್ ಅಧಿಕಾರಿ ಜಾನ್ ಸಾಂಡರ್ ರನ್ನು ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರು ಕೊಂದಿದ್ದ ಐತಿಹಾಸಿಕ ಪಿಸ್ತೂಲ್ ಅನ್ನು 90 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಪ್ರದರ್ಶನಕ್ಕೆ ಇಡಲಾಗಿದೆ.
ಭಗತ್ ಸಿಂಗ್ ಅವರ ಪಿಸ್ತೂಲು (ಸಂಗ್ರಹ ಚಿತ್ರ)
ಭಗತ್ ಸಿಂಗ್ ಅವರ ಪಿಸ್ತೂಲು (ಸಂಗ್ರಹ ಚಿತ್ರ)

ಇಂದೋರ್: 1927ರಲ್ಲಿ ಬ್ರಿಟೀಷ್ ಅಧಿಕಾರಿ ಜಾನ್ ಸಾಂಡರ್ ರನ್ನು ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರು ಕೊಂದಿದ್ದ ಐತಿಹಾಸಿಕ ಪಿಸ್ತೂಲ್ ಅನ್ನು 90 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಪ್ರದರ್ಶನಕ್ಕೆ ಇಡಲಾಗಿದೆ.

ಇಂದೋರ್ ನಲ್ಲಿರುವ ಬಿಎಸ್ ಎಫ್ ಮ್ಯೂಸಿಯಂ ನಲ್ಲಿ ಈ ಐತಿಹಾಸಿಕ ಪಿಸ್ತೂಲ್ ಅನ್ನು ಪ್ರದರ್ಶನಕ್ಕೆ ಇಡಲಾಗಿದ್ದು, ಸಾವಿರಾರು ಮಂದಿ ಈ ಗನ್ ಅನ್ನು ವೀಕ್ಷಣೆ ಮಾಡಲು ಮುಗಿಬಿದ್ದಿದ್ದಾರೆ. ಪಾಯಿಂಟ್ 32 ಕಾಲ್ಟ್  ಅ್ಯಟೋಮ್ಯಾಟಿಕ್ ಸರಣಿಯ ಗನ್ ಇದಾಗಿದ್ದು, ಬಿಎಸ್ ಎಫ್ ನ ಸೆಂಟ್ರಲ್ ಸ್ಕೂಲ್ ಆಫ್ ವೆಪನ್ಸ್ ಅಂಡ್ ಟ್ಯಾಕ್ಟಿಕ್ಸ್ ಯೋಜನೆಯಡಿಯಲ್ಲಿ ಭಾವಿ ಯೋಧರಿಗೆ ತರಬೇತಿ ನೀಡುವ ಸಂದರ್ಭದಲ್ಲಿ ಇದನ್ನು ಪ್ರದರ್ಶನಕ್ಕೆ ಇಡಲಾಗಿದೆ  ಎಂದು ತಿಳಿದುಬಂದಿದೆ.

ಭಾರತ ಸ್ವತಂತ್ರಗೊಂಡ ಬಳಿಕ ಇದೇ ಮೊದಲ ಬಾರಿಗೆ ಈ ಗನ್ ಅನ್ನು ಪ್ರದರ್ಶನಕ್ಕೆ ಇಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಬಿಎಸ್ ಎಫ್ ಮ್ಯೂಸಿಯಂ ನ ಮೇಲುಸ್ತುವಾರಿ  ಅಧಿಕಾರಿ ವಿಜೇಂದರ್ ಸಿಂಗ್ ಅವರು, ಗನ್ ಮೇಲಿನ ಕಪ್ಪುಬಣ್ಣವನ್ನು ತೆಗೆಯುವಾಗ ಅದರ ಮೇಲಿದ್ದ ಕೋಡ್ ನಿಜಕ್ಕೂ ನಮ್ಮನ್ನು ಅಚ್ಚರಿಗೊಳಪಡಿಸಿತ್ತು. ಗನ್ ಮೇಲಿದ್ದ ಸೀರಿಯಲ್ ನಂಬರ್ 168896 ಸ್ವತಂತ್ರ್ಯಪೂರ್ವದ  ಶಸ್ತ್ರಾಸ್ತ್ರವಾಗಿದ್ದು, ದಾಖಲೆಗಳನ್ನು ಪರಿಶೀಲಿಸಿದಾಗ ಈ ಗನ್ 1927ರಲ್ಲಿ ಭಗತ್ ಸಿಂಗ್ ಅವರು ಬ್ರಿಟೀಷ್ ಅಧಿಕಾರಿ ಜಾನ್ ಸಾಂಡರ್ ಅವರನ್ನು ಕೊಂದು ಹಾಕಿದ್ದ ಗನ್ ಇದಾಗಿತ್ತು ಎಂದು ಹೇಳಿದ್ದಾರೆ.

ಆದರೆ ಈ ಗನ್ ಭಗತ್ ಸಿಂಗ್ ಅವರು ಬ್ರಿಟೀಷ್ ಅಧಿಕಾರಿ ಜಾನ್ ಸಾಂಡರ್ಸ್ ರನ್ನು ಕೊಲ್ಲಲು ಬಳಕೆ ಮಾಡಿದ್ದೇ ಆದರೂ, ಈ ಗನ್ ಅವರಿಗೆ ಸೇರಿದ್ದೇ ಅಥವಾ ಬ್ರಿಟೀಷರಿಂದ ಕಸಿದಿದ್ದೇ ಎಂಬುದರ ಕುರಿತು ಸ್ಪಷ್ಟ ಮಾಹಿತಿ  ಲಭ್ಯವಾಗಿಲ್ಲ.

ಗನ್ ಹಿನ್ನಲೆ ಏನು?
1927ರಲ್ಲಿ ಭಾರತದಲ್ಲಿ ಸ್ವಾತಂತ್ರ್ಯ ಹೋರಾಟ ನಡೆಯುತ್ತಿದ್ದ ಸಂದರ್ಭದಲ್ಲಿ ಅಂದು ಬ್ರಿಟೀಷ್ ಸರ್ಕಾರ ಭಾರತದ ಆಡಳಿತ ವ್ಯವಸ್ಥೆ ಮೇಲುಸ್ತುವಾರಿಗಾಗಿ ಸೈಮನ್ ಸಮಿತಿಯನ್ನು ರಚನೆ ಮಾಡಿತ್ತು. ಆದರೆ ಸಮಿತಿಯಲ್ಲಿ  ಯಾವುದೇ ಭಾರತೀಯರಿಲ್ಲದೇ ಇರುವುದು ಇಂದಿನ ಹೋರಾಟಗಾರರ ಆಕ್ರೋಶಕ್ಕೆ ಕಾರಣವಾಗಿತ್ತು. ಇದನ್ನು ವಿರೋಧಿಸಿ ಹಿರಿಯ ಸ್ವತಂತ್ರ್ಯ ಹೋರಾಟಗಾರ ಲಾಲಾ ಲಜಪತ್ ರಾಯ್ ಅವರ ನೇತೃತ್ವದಲ್ಲಿ ಲಾಹೋರ್ ನ ರೈಲು  ನಿಲ್ದಾಣದಲ್ಲಿ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು.

ಅದೇ ನಿಲ್ದಾಣಕ್ಕೆ ಆಗಮಿಸಿದ್ದ ಬ್ರಿಟೀಷ್ ಪೋಲಿಸ್ ಸೂಪರಿಂಟೆಂಡೆಂಟ್ ಜೇಮ್ಸ್ ಎ. ಸ್ಕಾಟ್ ಎಂಬ ಅಧಿಕಾರಿಯು ಮೆರವಣಿಗೆಯಲ್ಲಿ ಹೋಗುತ್ತಿದ್ದವರ ಮೇಲೆ ಏಕಾಏಕಿ  ಲಾಠಿ ಚಾರ್ಜ್ ಮಾಡುವ ಆದೇಶ ನೀಡಿದ್ದ. ಅಷ್ಟೇ ಅಲ್ಲದೇ ಲಾಲಾ ಲಜಪತ ರಾಯ್ ಅವರ ಮೇಲೆ ಸ್ವಯಂ ಆಕ್ರಮಣ ನಡೆಸಿ ಅವರ ಮೇಲೆ ಗಂಭೀರ ಹಲ್ಲೆ ಮಾಡಿದ್ದ. ಈ ಗಂಭೀರ ಗಾಯಗಳಿಂದ ಚೇತರಿಸಿಕೊಳ್ಳಲಾಗದ ಲಾಲಾ  ಲಜಪತ್ ರಾಯ್ ಅವರು ನವೆಂಬರ್ 17, 1928 ರಂದು ಹೃದಯಾಘಾತದಿಂದ ನಿಧನರಾದರು.

ಸ್ಕಾಟ್ ವಿರುದ್ಧ ಸಿಡಿದೆದ್ದ ಭಗತ್ ಸಿಂಗ್
ಈ ದೌರ್ಜನ್ಯದಿಂದ ಸಿಡಿದೆದ್ದ ಭಗತ್ ಸಿಂಗ್, ರಾಜ್ ಗುರು, ಸುಖದೇವ್ ಥಾಪರ್ ಮತ್ತು ಚಂದ್ರಶೇಖರ್ ಆಜಾದ್ ಅವರು ಲಾಲಾ ಲಜಪತ್ ರಾಯ್ ಸತ್ತ ಅದೇ ದಿನ ಬ್ರಿಟೀಷ್ ಅಧಿಕಾರಿ ಸ್ಕಾಟ್ ನ ಮೇಲೆ ದಾಳಿ ನಡೆಸಿದರು. ಆದರೆ  ಅಂದು ಸ್ಕಾಟ್ ದಾಳಿಯಿಂದ ಪಾರಾದ. ಆದರೆ ಅಂದು ಭಗತ್ ಸಿಂಗ್ ಸಿಡಿಸಿದ್ದ ಗುಂಡಿಗೆ ಮತ್ತೋರ್ವ ಅಧಿಕಾರಿ ಜಾನ್ ಸಾಂಡರ್ಸ್ ಸಾವನ್ನಪ್ಪಿದ್ದ. ಇದೇ ಕಾರಣಕ್ಕೆ ಭಗತ್ ಸಿಂಗ್, ರಾಜ್ ಗುರು ಅವರನ್ನು ಬಳಿಕ ಬ್ರಿಟೀಷರು ಗಲ್ಲಿಗೇರಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com