ದಾಖಲೆಯ 104 ಉಪಗ್ರಹ ಉಡಾವಣೆ: ಜಾಗತಿಕ ಮಾಧ್ಯಮಗಳಿಂದ ಇಸ್ರೋ ಸಾಧನೆಯ ಬಣ್ಣನೆ

ಏಕಕಾಲದಲ್ಲಿ ಬರೊಬ್ಬರಿ 104 ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಐತಿಹಾಸಿಕ ಸಾಧನೆಗೆ ವಿಶ್ವಾದ್ಯಂತ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದ್ದು, ಜಾಗತಿಕ ಬಾಹ್ಯಾಕಾಶ ಸ್ಪರ್ಧೆಯಲ್ಲಿ ಭಾರತ ಪಾತ್ರ ಹೊಂದಿದೆ ಎಂದು ಜಾಗತಿಕ ಮಾಧ್ಯಮಗಳು ಬಣ್ಣಿಸಿವೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಏಕಕಾಲದಲ್ಲಿ ಬರೊಬ್ಬರಿ 104 ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಐತಿಹಾಸಿಕ ಸಾಧನೆಗೆ ವಿಶ್ವಾದ್ಯಂತ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದ್ದು,  ಜಾಗತಿಕ ಬಾಹ್ಯಾಕಾಶ ಸ್ಪರ್ಧೆಯಲ್ಲಿ ಭಾರತ ಪಾತ್ರ ಹೊಂದಿದೆ ಎಂದು ಜಾಗತಿಕ ಮಾಧ್ಯಮಗಳು ಬಣ್ಣಿಸಿವೆ.

ನಿನ್ನೆಯಷ್ಟೇ ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ತನ್ನ ಮಹತ್ವದ 104 ಉಪಗ್ರಹಗಳನ್ನು ಏಕಕಾಲಕ್ಕೆ ಬಾಹ್ಯಾಕಾಶ ಕಕ್ಷೆಗೆ ಸೇರಿಸುವ ಕಾರ್ಯವನ್ನು ಪಿಎಸ್ ಎಲ್ ವಿ ಸಿ37 ರಾಕೆಟ್ ಮೂಲಕ ಯಶಸ್ವಿಯಾಗಿ ನಿಭಾಯಿಸಿತ್ತು. ಈ  ಐತಿಹಾಸಿಕ ಮೈಲಿಗಲ್ಲಿನ ಬೆನ್ನಲ್ಲೇ ಇಸ್ರೋ ಸಾಧೆನೆಗೆ ವಿಶ್ವಾದ್ಯಂತ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದ್ದು, ಅಭಿವೃದ್ಧಿಯಾಗುತ್ತಿರುವ ಬಾಹ್ಯಾಕಾಶ ವಲಯದಲ್ಲಿ ಭಾರತ ಪ್ರಮುಖ ಪಾತ್ರಧಾರಿಯಾಗಿ ರೂಪುಗೊಳ್ಳುತ್ತಿದ್ದು, ಕಣ್ಗಾವಲು  ಮತ್ತು ಸಂವಹನ ಕ್ಷೇತ್ರದಲ್ಲಿ ಭಾರತ ತನ್ನದೇ ಆ ಛಾಪು ಮೂಡಿಸುತ್ತಿದೆ ಎಂದು ವಿಶ್ವ ಮಾಧ್ಯಮ ಬಣ್ಣಿಸಿದೆ.

104 ಉಪಗ್ರಹಗಳನ್ನು ಉಡಾವಣೆ ಮಾಡಿದ ಇಸ್ರೋ ಸಾಧನೆಯನ್ನು ಬಣ್ಣಿಸಿರುವ ಅಮೆರಿಕದ ಪ್ರತಿಷ್ಟಿತ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ, ಜಾಗತಿಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಪ್ರಮುಖ ದೇಶವಾಗಿ ರೂಪುಗೊಳ್ಳುತ್ತಿದೆ ಎಂದು  ಹೇಳಿದೆ. ಇಸ್ರೋ ಮಾಡಿದ್ದ 104 ಉಪಗ್ರಹಗಳ ಉಡಾವಣೆ ನಿಜಕ್ಕೂ ಅತ್ಯಂತ ಕ್ಲಿಷ್ಟಕರ ಕೆಲಸವಾಗಿತ್ತು ಕೆಲವೇ ಸೆಕೆಂಡ್ ಗಳ ಅಂತರದಲ್ಲಿ ಉಪಗ್ರಹಗಳನ್ನು ಅವುಗಳ ಕಕ್ಷೆಗೆ ತಲುಪಿಸುವುದು ಸಾಮಾನ್ಯ ಸಂಗತಿಯೇನಲ್ಲ.  ಬರೊಬ್ಬರಿ 17 ಸಾವಿರ ಕಿ.ಮೀ ದೂರವನ್ನು ಇಸ್ರೋ ರಾಕೆಟ್ ಕೆಲವೇ ನಿಮಿಷಗಳಲ್ಲಿ ತಲುಪಿದೆ. ಒಂದು ವೇಳೆ ರಾಕೆಟ್ ಉಪಗ್ರಹಗಳನ್ನು ವಿಸರ್ಜಿಸುವ ಸಮಯ ಏರುಪೇರಾಗಿದ್ದರೂ ಉಪಗ್ರಹಗಳ ಕಕ್ಷೆ ಅದಲು ಬದಲಾಗಿ  ಒಂದಕ್ಕೊಂದು ಢಿಕ್ಕಿ ಹೊಡೆಯುವ ಅವಕಾಶವೇ ಹೆಚ್ಚಾಗಿತ್ತು. ಇಂತಹ ಅತ್ಯಂತ ಕ್ಲಿಷ್ಟಕರ ಪರಿಸ್ಥಿತಿಯನ್ನು ರಾಕೆಟ್ ಯಶಸ್ವಿಯಾಗಿ ನಿಭಾಯಿಸಿದೆ ಎಂದು ಪತ್ರಿಕೆ ಶ್ಲಾಘಿಸಿದೆ.

ಇದೇ ರೀತಿ, ಅಮೆರಿಕ ಮತ್ತು ರಷ್ಯಾ ಅಲ್ಲ.. ಬಾಹ್ಯಾಕಾಶ ಸ್ಪರ್ಧೆಗೆ ಇದೀಗ ಏಷ್ಯಾ ಪ್ರಮುಖ ವೇದಿಕೆಯಾಗಿದೆ ಎಂದು ಸಿಎನ್ ಎನ್ ಹೇಳಿದೆ.

ಬ್ರಿಟನ್ ನ ದಿ ಗಾರ್ಡಿಯನ್ ಪತ್ರಿಕೆ. ದಾಖಲೆ ಉಪಗ್ರಹಗಳ ಉಡಾವಣೆ ಮೂಲಕ ಇಸ್ರೋ ಮತ್ತು ಭಾರತ, ಬಾಹ್ಯಾಕಾಶ ವಲಯದ ಪ್ರಮುಖ ಸ್ಪರ್ಧಿಯಾಗಿ ರೂಪುಗೊಂಡಿದೆ. 1980ರಲ್ಲಿ ಮೊದಲ ರಾಕೆಟ್ ಉಡಾವಣೆ ಮಾಡುವ  ಮೂಲಕ ಬಾಹ್ಯಾಕಾಶ ಕ್ಷೇತ್ರಕ್ಕೆ ಕಾಲಿಟ್ಟ ಭಾರತ, ಇದೀಗ ತನ್ನ ಸುಧೀರ್ಘ ಸಂಶೋಧನೆ ಮತ್ತು ಸತತ ಪರಿಶ್ರಮದಿಂದಾಗಿ ಬಾಹ್ಯಾಕಾಶ ಕ್ಷೇತ್ರದ ಪ್ರಮುಖ ದೇಶವಾಗಿ ಮಾರ್ಪಟ್ಟಿದೆ. ಪ್ರತೀ ವರ್ಷ ಭಾರತ ಸರ್ಕಾರದ ಬಾಹ್ಯಾಕಾಶ  ಬಜೆಟ್ ನ ವ್ಯಾಪ್ತಿ ಕೂಡ ವಿಸ್ತರಿಸುತ್ತಿದೆ ಎಂದು ಹೇಳಿದೆ.

ಇನ್ನು ಖ್ಯಾತ ಅಂತಾರಾಷ್ಟ್ರೀಯ ಮಾಧ್ಯಮ ಬಿಬಿಸಿ, ಇಸ್ರೋದ ಐತಿಹಾಸಿಕ ಸಾಧನೆಯ ಮೂಲಕ ಬಹು ಬಿಲಿಯನ್ ಡಾಲರ್ ಮೌಲ್ಯದ ಬಾಹ್ಯಾಕಾಶ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ ಎಂದು ಹೇಳಿದೆ.

ಒಟ್ಟಾರೆ ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ತನ್ನ ಐತಿಹಾಸಿಕ ಸಾಧನೆ ಮೂಲಕ ಬಾಹ್ಯಾಕಾಶ ಕ್ಷೇತ್ರದ ಇತರೆ ಪ್ರಮುಖ ರಾಷ್ಟ್ರಗಳೂ ನಾಚುವಂತೆ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com