ಆರ್ ಬಿಐಗಿಂತಲೂ ಉತ್ತಮವಾದ 2000 ರು. ನಕಲಿ ನೋಟುಗಳ ಮುದ್ರಿಸುತ್ತಿದೆ ಪಾಕಿಸ್ತಾನ!

ಭಾರತೀಯ ಅರ್ಥವ್ಯವಸ್ಥೆಯನ್ನೇ ಬುಡಮೇಲು ಮಾಡಲು ಪಣತೊಟ್ಟಿರುವ ಪಾಕಿಸ್ತಾನ ಇದೀಗ ಆರ್ ಬಿಐನ ಹೊಸ 2000 ರು.ಮುಖಬೆಲೆಯ ನೋಟುಗಳನ್ನೂ ಕೂಡ ನಕಲು ಮಾಡುತ್ತಿದೆ ಎಂದು ಮೂಲಗಳು ತಿಳಿಸಿವೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಭಾರತೀಯ ಅರ್ಥವ್ಯವಸ್ಥೆಯನ್ನೇ ಬುಡಮೇಲು ಮಾಡಲು ಪಣತೊಟ್ಟಿರುವ ಪಾಕಿಸ್ತಾನ ಇದೀಗ ಆರ್ ಬಿಐನ ಹೊಸ 2000 ರು.ಮುಖಬೆಲೆಯ ನೋಟುಗಳನ್ನೂ ಕೂಡ ನಕಲು ಮಾಡುತ್ತಿದೆ ಎಂದು ಮೂಲಗಳು ತಿಳಿಸಿವೆ.

ಅಘಾತಕಾರಿ ಅಂಶವೆಂದರೆ ಆರ್ ಬಿಐ ಮುದ್ರಿಸುತ್ತಿರುವ ನೋಟುಗಳಿಗಿಂತಲೂ ಉತ್ತಮ ಗುಣಮಟ್ಟದ ನಕಲಿ ನೋಟುಗಳನ್ನು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ ಐ ಮುದ್ರಿಸುತ್ತಿದೆ ಎಂದು ತಿಳಿದುಬಂದಿದೆ. ನೋಟು ನಿಷೇಧ  ಬಳಿಕ ಕರಾಚಿ ಮತ್ತು ಲಾಹೋರ್ ನಲ್ಲಿರುವ ಮುದ್ರಣಾಲಯಗಳು ಕೆಲಸ ವಿಲ್ಲದೆ ಖಾಲಿ ಹೊಡೆಯುತ್ತಿತ್ತು. ಆದರೀಗ ಆರ್ ಬಿಐನ ಭದ್ರತಾ ವೈಶಿಷ್ಟ್ಯಗಳ ರಹಸ್ಯ ತಿಳಿದುಕೊಂಡ ಐಎಸ್ ಐ ಅದೇ ಮಾದರಿಯಲ್ಲಿ ನೋಟುಗಳನ್ನು  ಮುದ್ರಣ ಮಾಡುತ್ತಿದೆ. ಆ ಮೂಲಕ ಮುಚ್ಚುವ ಹಂತದಲ್ಲಿದ್ದ ಮುದ್ರಣಾಲಯಗಳು ಮತ್ತೆ ಕಾರ್ಯಾರಂಭ ಮಾಡಿವೆ.

ಆರ್ ಬಿಐಗಿಂತಲೂ ಉತ್ತಮ ಗುಣಮಟ್ಟದ ನೋಟುಗಳನ್ನು ಮುದ್ರಿಸುತ್ತಿದೆ "ಆಫಿಸ್"
ಪ್ರಸ್ತುತ ಆರ್ ಬಿಐ ಮುದ್ರಿಸುತ್ತಿರುವ ಅಸಲಿ ನೋಟುಗಳ ಪೈಕಿ ಹಲವು ನೋಟುಗಳಲ್ಲಿ ಮುದ್ರಣ ದೋಷ ಕಂಡುಬಂದಿದೆ. ಆದರೆ ಪ್ರಸ್ತುತ ಐಎಸ್ ಐ ಕೃಪಾ ಕಟಾಕ್ಷದೊಂದಿಗೆ ಲಾಹೋರ್ ಮತ್ತು ಕರಾಚಿಯಲ್ಲಿ ಮುದ್ರಿಸಲಾಗುತ್ತಿರುವ  ನಕಲಿ ನೋಟುಗಳಲ್ಲಿ ಮುದ್ರಣ ದೋಷ ಕಂಡಬರಲು ಸಾಧ್ಯವೇ ಇಲ್ಲವಂತೆ. ಅಷ್ಟರ ಮಟ್ಟಿಗೆ ಪಾಕಿಸ್ತಾನದ "ಆಫೀಸ್" (ನಕಲಿ ನೋಟು ಮುದ್ರಣಾಲಯದ ರಹಸ್ಯ ನಾಮಧೇಯ)ಗಳಲ್ಲಿ ನೋಟುಗಳ ಮುದ್ರಣ ಸಾಗುತ್ತಿದೆಯಂತೆ.  ಆರ್ ಬಿಐ ಹೊರ ತಂದಿರುವ ಅಧಿಕ ಮೌಲ್ಯದ ನೋಟುಗಳನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸಿ ಅದಕ್ಕೆ ತಕ್ಕಂತಹ ಅತ್ಯಾಧುನಿಕ ಸಲಕರಣೆಗಳ ಮೂಲಕ ನಕಲಿ ನೋಟುಗಳನ್ನು ಮುದ್ರಿಸಲಾಗುತ್ತಿದೆಯಂತೆ.

ಈಗಾಗಲೇ ಶೇ.50ರಷ್ಟು ಭದ್ರತಾ ಅಂಶಗಳ ನಕಲು
ಈ ಹಿಂದೆ ಆರ್ ಬಿಐ ನಕಲು ಮಾಡಲಾಗದ ಭದ್ರತಾ ವೈಶಿಷ್ಯ್ಟಗಳನ್ನು ಹೊಂದಿದೆ ಎಂದು ಹೇಳಿತ್ತು. ಆದರೆ ಮೂಲಗಳು ತಿಳಿಸಿರುವಂತೆ ಪಾಕಿಸ್ತಾನ ಈಗಾಗಲೇ ಶೇ.50 ಭದ್ರತಾ ಅಂಶಗಳನ್ನು ನಕಲಿ ನೋಟುಗಳಿಗೆ ಅಳವಡಿಸಿದೆ. ಪಾಕಿಸ್ತಾನ ಮುದ್ರಿಸುತ್ತಿರುವ ನೋಟುಗಳಲ್ಲಿ ಆರ್ ಬಿಐ ಅಳವಡಿಕೆ ಮಾಡಿರುವ ಭದ್ರತಾ ಅಂಶಗಳ ಪೈಕಿ  ಈಗಾಗಲೇ ಶೇ.50ರಷ್ಟು ಅಂಶಗಳನ್ನು ಯಥಾವತ್ತಾಗಿ ಅಳವಡಿಸಲಾಗಿದ್ದು, ಯಾವುದೇ ಕಾರಣಕ್ಕೂ ಇವು ನಕಲಿ  ನೋಟುಗಳು ಎಂದು ಗುರುತಿಸಲು ಸಾಧ್ಯವಿಲ್ಲ ಎನ್ನುವಷ್ಟರ ಮಟ್ಟಿಗೆ ನಕಲಿ ನೋಟುಗಳನ್ನು ಮುದ್ರಿಸಲಾಗುತ್ತಿದೆಯಂತೆ. ಕೇವಲ 2 ತಿಂಗಳ ಅಂತರದಲ್ಲಿ ಪಾಕಿಸ್ತಾನದ ಐಎಸ್ ಐ ಭಾರತದ ಹೊಸ ನೋಟುಗಳಲ್ಲಿನ ಭದ್ರತಾ  ಆಂಶಗಳನ್ನು ನಕಲು ಮಾಡಿದೆಯಂತೆ.

ಬಾಂಗ್ಲಾ ಮೂಲಕ ದೇಶ ಪ್ರವೇಶಿಸಲಿವೆ ನಕಲಿ ನೋಟುಗಳು
ಪಾಕಿಸ್ತಾನದಲ್ಲಿ ತಯಾರಾಗುವ ಈ ನಕಲಿ ನೋಟುಗಳು ಇನ್ನು ಕೆಲವೇ ದಿನಗಳಲ್ಲಿ ಭಾರತ ಪ್ರವೇಶ ಮಾಡಲಿವೆ. ಬಾಂಗ್ಲಾದೇಶದಲ್ಲಿರುವ ನಕಲಿ ನೋಟು ಜಾಲ ಪಾಕಿಸ್ತಾನದ ನಕಲಿ ನೋಟುಗಳನ್ನು ಭಾರತಕ್ಕೆ ರವಾನೆ  ಮಾಡುತ್ತದೆಯಂತೆ. ಮೊದಲಿಗೆ ಪಾಕಿಸ್ತಾನದಿಂದ ನೇರವಾಗಿ ದುಬೈಗೆ, ದುಬೈನಿಂದ ಬಾಂಗ್ಲಾದೇಶ ರಾಜಧಾನಿ ಢಾಕಾ ಮತ್ತು ಢಾಕಾದಿಂದ ನಕಲಿ ನೋಟುಗಳು ಭಾರತ ಪ್ರವೇಶ ಮಾಡಲಿವೆ ಎಂದು ಹೇಳಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com