ಬಿ ಎಸ್ ಪಿ ಅಧ್ಯಕ್ಷೆ ಮಾಯಾವತಿ
ಪ್ರಧಾನ ಸುದ್ದಿ
ನಿಮ್ಮ ಮತಗಳನ್ನು ಒಡೆಯಬೇಡಿ, ಮುಸ್ಲಿಮರಿಗೆ ಮಾಯಾವತಿ ಮನವಿ
ಉತ್ತರಪ್ರದೇಶದ ಮುಂಬರುವ ಚುನಾವಣೆಯಲ್ಲಿ ಮತಗಳನ್ನು ಒಡೆಯದಂತೆ ಮುಸ್ಲಿಮರಿಗೆ ಎಚ್ಚರಿಸಿದ್ದು, ಖಾಲಿ ಮಾತುಗಳಿಗೆ ದಲಿತರು ಮರುಳಾಗುವುದಿಲ್ಲ ಎಂದು ಬಿ ಎಸ್ ಪಿ ಅಧ್ಯಕ್ಷೆ ಮಾಯಾವತಿ ಹೇಳಿದ್ದಾರೆ.
ಲಖನೌ: ಉತ್ತರಪ್ರದೇಶದ ಮುಂಬರುವ ಚುನಾವಣೆಯಲ್ಲಿ ಮತಗಳನ್ನು ಒಡೆಯದಂತೆ ಮುಸ್ಲಿಮರಿಗೆ ಎಚ್ಚರಿಸಿದ್ದು, ಖಾಲಿ ಮಾತುಗಳಿಗೆ ದಲಿತರು ಮರುಳಾಗುವುದಿಲ್ಲ ಎಂದು ಬಿ ಎಸ್ ಪಿ ಅಧ್ಯಕ್ಷೆ ಮಾಯಾವತಿ ಹೇಳಿದ್ದಾರೆ.
ಒಡಕಾಗುತ್ತಿರುವ ಸಮಾಜವಾದಿ ಪಕ್ಷಕ್ಕೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮತ ಹಾಕದಂತೆ ಎಚ್ಚರದಿಂದಿರಲು ಮುಸ್ಲಿಮರಿಗೆ ಮಾಯಾವತಿ ಹೇಳಿದ್ದಾರೆ.
"ಸಮಾಜವಾದಿ ಪಕ್ಷ ಈಗ ಎರಡು ಹೋಳಾಗಿದೆ. ಮುಸ್ಲಿಮರು ಬಹಳ ಎಚ್ಚರಿಕೆಯಂದಿರಬೇಕು. ಅವರು ತಮ್ಮ ಮತಗಳನ್ನು ಒಡೆಯಬಾರದು" ಎಂದು ಮಾಯಾವತಿ ಹೇಳಿದ್ದಾರೆ.
ತಮಗೆ ಜಾತಿ ಆಧಾರಿತ ರಾಜಕೀಯದ ಮೇಲೆ ನಂಬಿಕೆಯಿದೆ ಎಂಬ ಆರೋಪವನ್ನು ಮಾಯಾವತಿ ಅಲ್ಲಗೆಳೆದಿದ್ದಾರೆ. "ನನಗೆ ಎಲ್ಲ ಸಮುದಾಯಗಳ ಹಿತದ ಮೇಲೆ ನಂಬಿಕೆ ಇದೆ ಮತ್ತು ಎಲ್ಲಾ ಜಾತಿಗಳಿಗೂ ಪಕ್ಷದ ಟಿಕೆಟ್ ಗಳನ್ನು ಹಂಚಿದ್ದೇನೆ" ಎಂದಿರುವ ಅವರು ಕಳೆದ ಚುನಾವಣೆಯಲ್ಲಿ ಯಾವೆಲ್ಲಾ ಜಾತಿ ಮತ್ತು ಧರ್ಮಕ್ಕೆ ಸೇರಿದ ಅಭ್ಯರ್ಥಿಗಳು ಬಿ ಎಸ್ ಪಿ ಪಕ್ಷದಿಂದ ಸೆಣಸಿದ್ದರು ಎಂಬುದರ ಪಟ್ಟಿ ನೀಡಿದ್ದಾರೆ.
ಉಚ್ಚ ಜಾತಿಗಳಲ್ಲಿ ಬ್ರಾಹ್ಮಣರಿಗೆ ೬೬ ಕ್ಷೇತ್ರಗಳಲ್ಲಿ, ಕ್ಷತ್ರಿಯರಿಗೆ ೩೬ ಕ್ಷೇತ್ರಗಳಲ್ಲಿ ಮತ್ತು ಇತರ ಸಮುದಾಯಗಳಿಗೆ ೧೧ ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಅವಕಾಶ ನೀಡಿದ್ದಾಗಿ ಹೇಳಿದ್ದಾರೆ.
ಮುಸ್ಲಿಂ ಮತ್ತು ಉಚ್ಚ ಜಾತಿಗಳನ್ನು ಒಲಿಸಿಕೊಳ್ಳಲು ಪ್ರಯತ್ನಿಸಿರುವ ಮಾಯಾವತಿ, ತಮ್ಮ ಆಡಳಿತದ ಸಮಯದಲ್ಲಿ ಉಚ್ಚ ಜಾತಿಗಳ ಕುಂದುಕೊರತೆಗಳನ್ನು ಪರಿಗಣಿಸಲಾಗಿತ್ತು ಎಂದಿದ್ದಾರೆ. "ಉಚ್ಚ ಜಾತಿಗಳು, ಮುಸ್ಲಿಮರು ಮತ್ತು ಇತರ ಧಾರ್ಮಿಕ ಅಲ್ಪಸಂಖ್ಯಾತರಿಗೆ ಅವರ ಆರ್ಥಿಕ ಸ್ಥಿತಿಯ ಮೇರೆಗೆ ಮೀಸಲಾತಿ ನೀಡಬೇಕೆಂದು ಲೋಕಸಭೆಯಲ್ಲಿ ನಮ್ಮ ಪಕ್ಷ ವಾದ ಮಾಡಿತ್ತು" ಎಂದು ಕೂಡ ಅವರು ಹೇಳಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಕೆಟ್ಟ ಸ್ಥಿತಿಯಲ್ಲಿದೆ ಎಂದಿರುವ ಬಿ ಎಸ್ ಪಿ ಮುಖಂಡೆ, ನರೇಂದ್ರ ಮೋದಿ ಅವರ ಹೆಸರನ್ನು ಪ್ರಸ್ತಾಪಿಸದೆ, ಕೇವಲ ಯೋಜನೆಗಳನ್ನು ಭೀಮ್ ರಾವ್ ಅಂಬೇಡ್ಕರ್ ಹೆಸರಿನಲ್ಲಿ ಘೋಷಣೆ ಮಾಡಿಬಿಟ್ಟರೆ ದಲಿತರು ಅದಕ್ಕೆ ಮರುಳಾಗುವುದಿಲ್ಲ ಎಂದು ಕೂಡ ಪ್ರಧಾನಿಯವರನ್ನು ಪರೋಕ್ಷವಾಗಿ ಟೀಕಿಸಿದ್ದಾರೆ. "ದಲಿತರನ್ನು ಮರುಳರು ಎಂದು ತಿಳಿದುಕೊಳ್ಳಬೇಡಿ, ಅವರಿಗೆ ಎಲ್ಲವು ಚೆನ್ನಾಗಿ ತಿಳಿದಿದೆ... ರೋಹಿತ್ ವೇಮುಲಾ ಅವರ ಕೊಲೆ ಮತ್ತು ಗುಜರಾತಿನ ಉನಾದಲ್ಲಿ ದಲಿತರ ಮೇಲೆ ನಡೆದ ಹಲ್ಲೆಯಂತಹ ಘಟನೆಗಳನ್ನು ಮರೆಯಲು ಸಾಧ್ಯವಿಲ್ಲ" ಎಂದು ಕೂಡ ಮಾಯಾವತಿ ವಾಗ್ದಾಳಿ ನಡೆಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ