ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮನೆಯೆದುರು ಪ್ರತಿಭಟನೆ ನಡೆಸುತ್ತಿದ್ದ ೧೨೦ ಬಿಜೆಪಿ ನಗರಸಭಾ ಸದಸ್ಯರನ್ನು ದೆಹಲಿ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಪೌರಕಾರ್ಮಿಕರ ವೇತನಕ್ಕೆ ಹಣ ಬಿಡುಗಡೆ ಮಾಡಲು ಆಗ್ರಹಿಸಿ ಅವರು ಪ್ರತಿಭಟನೆ ನಡೆಸುತ್ತಿದ್ದರು.
ಹಿರಿಯ ಬಿಜೆಪಿ ನಗರಸಭಾ ಸದಸ್ಯ ಸುಭಾಷ್ ಆರ್ಯ ನೇತೃತ್ವದಲ್ಲಿ ನಡೆಯಿತ್ತಿದ್ದ ಈ ಧರಣಿಯಲ್ಲಿ, ನಾಲ್ಕನೇ ದೆಹಲಿ ವಿತ್ತ ಆಯೋಗ (ಎಫ್ ಡಿ ಎಫ್ ಸಿ) ನಿಯಮದಂತೆ ನಗರಸಭಾ ದೇಣಿಗೆಯನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಲಾಗಿದೆ.
ಧರಣಿ ನಿರತರನ್ನು ಒತ್ತಾಯಪೂರ್ವಕವಾಗಿ ವಶಪಡಿಸಿಕೊಂಡ ಪೊಲೀಸರು, ಸಿವಿಲ್ ಲೈನ್ಸ್ ಮತ್ತು ಮಾರಿಸ್ ನಗರ ಪೊಲೀಸ್ ಠಾಣೆಗಳಿಗೆ ಕರೆತಂದಿದ್ದಾರೆ.
ಪೂರ್ವ ದೆಹಲಿ ನಗರ ಸಭಾ (ಇ ಡಿ ಎಂ ಸಿ) ಪೌರಕಾರ್ಮಿಕರು ಕಳೆದ ಕೆಲವು ತಿಂಗಳುಗಳಿಂದ ವೇತನ ಪಡೆಯದೆ ಒಂದು ವಾರ ಪ್ರತಿಭಟನೆ ನಡೆಸಿರುವುದರ ಪರಿಣಾಮವಾಗಿ ಆ ಪ್ರದೇಶಗಳಲ್ಲಿ ಕಸ ತುಂಬಿತುಳುಕುತ್ತಿದೆ.
ಜನವರಿ ೯ ರಂದು ಇ ಡಿ ಎಂ ಸಿ ಮುಖ್ಯ ಕಚೇರಿಯ ಎದುರು ಧರಣಿ ನಡೆಸಿದ್ದ ಪೌರಕಾರ್ಮಿಕರು, ಕೇಜ್ರಿವಾಲ್ ಅವರ ಪ್ರತಿಕೃತಿಯನ್ನು ಕೂಡ ದಹಿಸಿದ್ದರು.
ಹಿಂದಿನ ಎಲ್ಲ ಸರ್ಕಾರಗಳಿಗಿಂತಲೂ ಹೆಚ್ಚು ಹಣ ಬಿಡುಗಡೆ ಮಾಡಿರುವುದಾಗಿ ತಿಳಿಸಿರುವ ದೆಹಲಿ ಸರ್ಕಾರ, ಬಿಜೆಪಿ ಆಡಳಿತದ ನಗರಸಭೆ ಭಾರಿ ಅವ್ಯವಹಾರ ನಡೆಸಿದೆ ಎಂದು ಪ್ರತ್ಯಾರೋಪ ಮಾಡಿದೆ.