
ನವದೆಹಲಿ: ಭಾರತದ ತ್ರಿವರ್ಣ ಧ್ವಜವಿರುವ ಡೋರ್ ಮ್ಯಾಟ್ ಗಳನ್ನು ಮಾರಾಟಕ್ಕೆ ಇಟ್ಟು ಭಾರಿ ವಿವಾದಕ್ಕೆ ಕಾರಣವಾಗಿದ್ದ ಖ್ಯಾತ ಆನ್ ಲೈನ್ ಮಾರಾಟ ಸಂಸ್ಥೆ ಅಮೆಜಾನ್ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ಅವರ ಎಚ್ಚರಿಕೆ ಬಳಿಕ ಭೇಷರತ್ ಕ್ಷಮೆ ಯಾಚಿಸಿದೆ.
ಈ ಬಗ್ಗೆ ಸ್ವತಃ ಅಮೆಜಾನ್ ಇಂಡಿಯಾ ಸಂಸ್ಥೆಯ ಉಪಾಧ್ಯಕ್ಷ ಅಮಿತ್ ಅಗರ್ವಾಲ್ ಅವರು ಕೇಂದ್ರ ಸಚಿವೆ ಸುಷ್ಮಸ್ವರಾಜ್ ಅವರಿಗೆ ಪತ್ರ ಬರೆದಿದ್ದು, ಭಾರತೀಯ ಕಾನೂನನ್ನು ಮತ್ತು ಭಾರತೀಯರ ಭಾವನೆಗಳನ್ನು ಅಮೆಜಾನ್ ಸಂಸ್ಥೆ ಗೌರವಿಸುತ್ತದೆ. ಭಾರತೀಯರ ಭಾವನೆಗಳಿಗೆ ಧಕ್ಕೆಯುಂಟು ಮಾಡುವ ಉದ್ದೇಶ ಸಂಸ್ಥೆಯದ್ದಲ್ಲ. ತ್ರಿವರ್ಣ ಧ್ವಜದ ಡೋರ್ ಮ್ಯಾಟ್ ಗಳು ಅಮೆಜಾನ್ ಸಂಸ್ಥೆಯದ್ದಲ್ಲ. ಬದಲಿಗೆ ಮೂರನೇ ಮಾರಾಟಗಾರನಿಂದ ಅಮೆಜಾನ್ ಸಂಸ್ಥೆಯ ವೆಬ್ ಸೈಟಿನಲ್ಲಿ ಹಾಕಲ್ಪಟ್ಟಿದೆ. ಹೀಗಾಗಿ ತ್ರಿವರ್ಣ ಧ್ವಜದ ಡೋರ್ ಮ್ಯಾಟ್ ಅನ್ನು ಅಮೆಜಾನ್ ಸಂಸ್ಥೆ ಉದ್ದೇಶಪೂರ್ವಕವಾಗಿ ಹಾಕಿಲ್ಲ. ಹೀಗಿದ್ದೂ ನಮ್ಮಿಂದ ತಪ್ಪಾಗಿದ್ದು, ನಾವು ಭೇಷರತ್ ಕ್ಷಮೆಯಾಚಿಸುತ್ತೇವೆ. ಅಲ್ಲದೆ ಸಂಸ್ಥೆ ಕೆನಡಾ ವೆಬೈಸೈಟಿನಿಂದ ಆ ಡೋರ್ ಮ್ಯಾಟ್ ಗಳನ್ನು ತೆಗೆದು ಹಾಕಿದ್ದೇವೆ. ಮಾತ್ರವಲ್ಲದೇ ಇತರೆ ವೆಬ್ ಸೈಟ್ ಗಳಲ್ಲಿ ಮತ್ತು ಮಾರುಕಟ್ಟೆಗಳಲ್ಲಿಯೂ ಈ ಮಾದರಿಯ ಡೋರ್ ಮ್ಯಾಟ್ ಗಳನ್ನು ಮಾರಾಟ ಮಾಡದಂತೆ ಸಂದೇಶ ರವಾನಿಸಿದ್ದೇವೆ ಎಂದು ಹೇಳಿದ್ದಾರೆ.
ನಿನ್ನೆಯಷ್ಟೇ ಅಮೆಜಾನ್ ಕೆನಡಾ ಸಂಸ್ಥೆಯ ವೆಬ್ ಸೈಟಿನಲ್ಲಿ ತ್ರಿವರ್ಣ ಧ್ವಜದ ಮ್ಯಾಟ್ ಗಳು ಮಾರಾಟವಾಗುತ್ತಿರುವ ಕುರಿತು ಅಟುಲ್ ಭೋಬೆ ಎಂಬುವವರು ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಟ್ವೀಟ್ ಮಾಡಿ ತಿಳಿಸಿದ್ದರು. ಕೂಡಲೇ ಅಮೆಜಾನ್ ಇಂಡಿಯಾ ಸಂಸ್ಥೆಗೆ ಎಚ್ಚರಿಕೆ ನೀಡಿದ್ದ ಕೇಂದ್ರ ಸಚಿವೆ ಸುಷ್ಮಾ ಅವರು ಕೂಡಲೇ ತ್ರಿವರ್ಣ ಧ್ವಜಕ್ಕೆ ಅಪಮಾನ ಮಾಡುವ ಡೋರ್ ಮ್ಯಾಟ್ ಗಳನ್ನು ತೆಗೆದು ಹಾಕಿ ಬೇಷರತ್ ಕ್ಷಮೆಯಾಚಿಸಬೇಕು ಎಂದು ಎಚ್ಚರಿಕೆ ನೀಡಿದ್ದರು. ಇದರ ಬೆನ್ನಲ್ಲೇ ಅಮೆಜಾನ್ ಸಂಸ್ಥೆ ತನ್ನ ವೆಬ್ ಸೈಟಿನಿಂದ ವಿವಾದಿತ ಡೋರ್ ಮ್ಯಾಟ್ ಗಳನ್ನು ತೆಗೆದುಹಾಕಿತ್ತು.
Advertisement