ಸೇನೆಯ ದಶಕಗಳ ಕನಸು ನನಸು; ಅತ್ಯಾಧುನಿಕ ಹೆಲ್ಮೆಟ್ ತಯಾರಿ ಶುರು!

ಭಾರತೀಯ ಸೇನೆಯ ದಶಕಗಳ ಕನಸು ನನಸಾಗುವ ಕಾಲ ಸನ್ನಿಹಿತವಾಗಿದ್ದು, ಗುಂಡು ನಿರೋಧಕ ಅತ್ಯಾಧುನಿಕ ಹೆಲ್ಮೆಟ್ ಗಳ ತಯಾರಿ ಕಾರ್ಯವನ್ನು ಆರಂಭಿಸಲಾಗಿದೆ ಎಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ನವದೆಹಲಿ: ಭಾರತೀಯ ಸೇನೆಯ ದಶಕಗಳ ಕನಸು ನನಸಾಗುವ ಕಾಲ ಸನ್ನಿಹಿತವಾಗಿದ್ದು, ಗುಂಡು ನಿರೋಧಕ ಅತ್ಯಾಧುನಿಕ ಹೆಲ್ಮೆಟ್ ಗಳ ತಯಾರಿ ಕಾರ್ಯವನ್ನು ಆರಂಭಿಸಲಾಗಿದೆ ಎಂದು ತಿಳಿದುಬಂದಿದೆ.

ಆಂಗ್ಲ ಮಾಧ್ಯಮವೊಂದು ವರದಿ ಮಾಡಿರುವಂತೆ ಈ ಹಿಂದೆ ಯೋಧರಿಗೆ ಆಶ್ವಾಸನೆ ನೀಡಿದಂತೆ ಕೇಂದ್ರ ಸರ್ಕಾರ ಕಾನ್ಪುರ ಮೂಲದ ಎಂಕೆಯು ಇಂಡಸ್ಟ್ರೀಸ್ ಸಂಸ್ಥೆಯೊಂದಿಗೆ ಯೋಧರಿಗಾಗಿ ವಿಶೇಷ ಹೆಲ್ಮೆಟ್ ತಯಾರಿಸುವ  ಒಪ್ಪಂದ ಮಾಡಿಕೊಂಡಿತ್ತು. ಅದರಂತೆ ಕಾನ್ಪುರ ಮೂಲದ ರಕ್ಷಣಾ ಪರಿಕರ ತಯಾರಿಕಾ ಸಂಸ್ಥೆ ಇದೀಗ ಹೆಲ್ಮೆಟ್ ಗಳ ತಯಾರಿಕೆಯನ್ನು ಆರಂಭಿಸಿದ್ದು, ಮುಂದಿನ ಮೂರು ವರ್ಷಗಳಲ್ಲಿ ಈ ಹೆಲ್ಮೆಟ್ ಗಳನ್ನು ಕ್ರಮೇಣ ಭಾರತೀಯ  ಸೇನೆಗೆ ಹಸ್ತಾಂತರಿಸುತ್ತದೆ ಎಂದು ತಿಳಿದುಬಂದಿದೆ.

ಮೂಲಗಳ ಪ್ರಕಾರ ಎಂಕೆಯು ಸಂಸ್ಥೆ ಅಂತಾರಾಷ್ಟ್ರೀಯ ಗುಣಮಟ್ಟದ ಸೇನಾ ಪರಿಕರಗಳನ್ನು ತಯಾರಿಸು ಸಂಸ್ಥೆಯಾಗಿದ್ದು, ವಿಶ್ವದ ನಾನಾ ದೇಶಗಳಿಗೆ ಇದು ತನ್ನ ಪರಿಕರಗಳನ್ನು ರಫ್ತು ಮಾಡುತ್ತದೆ. ಹೀಗಾಗಿ ಈ ಸಂಸ್ಥೆಯೊಂದಿಗೆ  ಕೇಂದ್ರ ಸರ್ಕಾರ ಸುಮಾರು 180 ಕೋಟಿ ರು. ಮೌಲ್ಯದ ಒಪ್ಪಂದ ಮಾಡಿಕೊಂಡಿದ್ದು, ಅದರಂತೆ ಎಂಕೆಯು ಸಂಸ್ಥೆ 1.58 ಲಕ್ಷ (1,58,279) ಹೆಲ್ಮೆಟ್ ಗಳನ್ನು ತಯಾರಿಸಿ ಭಾರತೀಯ ಸೇನೆಗೆ ಹಸ್ತಾಂತರಿಸಲಿದೆ.

ಈ ನೂತನ ಅತ್ಯಾಧುನಿಕ ಹೆಲ್ಮೆಟ್ ಗಳಲ್ಲಿ ಕಮ್ಯೂನಿಕೇಷನ್ ಸಿಸ್ಟಮ್ ಗಳನ್ನು ಅಳವಡಿಸುವ ವ್ಯವಸ್ಥೆ ಇದ್ದು, ಹೆಲ್ಮೆಟ್ ಗಳಿಗೆ ರಾತ್ರಿಯಲ್ಲೂ ಕಾಣುವಂತ ಟೆಲಿಸ್ಕೋಪುಗಳು, ನೈಟ್ ವಿಷನ್ ವ್ಯವಸ್ಥೆ ಮತ್ತು ಹೆಚ್ಚಿನ ರಕ್ಷಣೆ ಒದಗಿಸುವ  ಕನ್ನಡಕಗಳನ್ನು  ಅಳವಡಿಸಬಹದಾಗಿದೆ. ಪ್ರಸ್ತುತ ರಕ್ಷಣಾ ಇಲಾಖೆ ಖರೀದಿಸುತ್ತಿರುವ ಹೆಲ್ಮೆಟ್ ಗಳು ಬುಲೆಟ್ ಪ್ರೂಫ್ ಹೆಲ್ಮೆಟ್ ಗಳು ಹಗರು ಮತ್ತು ಕಠಿಣವಾಗಿದ್ದು, 9 ಎಂ.ಎಂ ಗುಂಡುಗಳನ್ನು 20 ಮೀಟರ್ ಹತ್ತಿರದಿಂದ  ಹಾರಿಸಿದರೂ ತಡೆದುಕೊಳ್ಳುವ ಸಾಮರ್ಥ್ಯ ಹೊಂದಿವೆ. ಹೆಲ್ಮೆಟ್ ನೊಂದಿಗೆ ವೈರ್ ಲೆಸ್ ಕಮ್ಯೂನಿಕೇಷನ್  ಹೆಡ್ ಸೆಟ್ ಅನ್ನು ಕೂಡ ಖರೀಸಲು ಕೇಂದ್ರ ಸರ್ಕಾರ ಮುಂದಾಗಿದೆ.

ಪ್ರಸ್ತುತ ಭಾರತೀಯ ಸೇನೆ ಪಡೆಗಳು ಬಳಕೆ ಮಾಡುತ್ತಿರುವ ಹೆಲ್ಮೆಟ್ ಗಳು ಅತಿ ಭಾರದಿಂದ ಕೂಡಿದ್ದು, ಗುಂಡು ನಿರೋಧಕ ವ್ಯವಸ್ಥೆಯನ್ನು ಹೊಂದಿಲ್ಲ. ಸೇನೆಯ ವಿಶೇಷ ಪಡೆಗಳು ಇಸ್ರೇಲ್ ನ ಆಮದು ಮಾಡಿಕೊಂಡ  ಒಆರ್-201 ಸರಣಿಯ ಹೆಲ್ಮೆಟ್ ಗಳನ್ನು ಬಳಕೆ ಮಾಡುತ್ತಿವೆಯಾದರೂ ಇವು ಗ್ಲಾಸ್ ನಿಂದ ಕೂಡಿದ ಪ್ಲಾಸ್ಟಿಕ್ ನಿಂದ ತಯಾರಾಗಿವೆ. ಹೀಗಾಗಿ ಇವು ಶತ್ರುಪಾಳಯದ ಗುಂಡುಗಳನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿಲ್ಲ.

 ಅಲ್ಲದೆ ಕಾರ್ಯಾಚರಣೆಗಳಲ್ಲಿ ಅವುಗಳನ್ನು ತಲೆಗೆ ಧರಿಸಿ ಕಾರ್ಯಾಚರಣೆ ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ಹಲವು ಸೈನಿಕರು ದೂರುತ್ತಾ ಬಂದಿದ್ದರು.

ಕಳೆದ ಆಗಸ್ಟ್ ನಲ್ಲಿ ನೌಹಟ್ಟಾದಲ್ಲಿ ನಡೆದ ಉಗ್ರದಾಳಿ ವೇಳೆ ವೀರ ಯೋಧ ಪ್ರಮೋದ್ ಕುಮಾರ್ ಅವರು ಗುಂಡೇಟಿನಿಂದ ಹುತಾತ್ಮರಾಗಿದ್ದರು. ಉಗ್ರ ನೋರ್ವ ಸಿಡಿಸಿದ್ದ ಗುಂಡು ಪ್ರಮೋದ್  ಕುಮಾರ್ ಅವರ ತಲೆಗೆ ಹೊಕ್ಕಿ  ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಈ ಘಟನೆ ಬಳಿಕೆ ಭಾರತೀಯ ಸೇನೆಯ ಬುಲೆಟ್ ಪ್ರೂಫ್ ಹೆಲ್ಮೆಟ್ ಬೇಡಿಕೆಗೆ ಹೆಚ್ಚು ಬಲ ಬಂದಿತು. ಸಾಮಾಜಿಕ  ಜಾಲತಾಣಗಳಲ್ಲಿ ಈ ಬಗ್ಗೆ ದೊಡ್ಡ ಜಾಗೃತಿ ಅಭಿಯಾನವೇ ನಡೆದಿತ್ತು. ಅದರ  ಫಲವೇನೋ ಎಂಬಂತೆ ಇದೀಗ ಕೇಂದ್ರ ಸರ್ಕಾರ ಬುಲೆಟ್ ಪ್ರೂಫ್ ಹೆಲ್ಮೆಟ್ ಖರೀದಿಗೆ ಮುಂದಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com