ಜೋಧ್ ಪುರ: ಅಕ್ರಮ ಶಸ್ತ್ರಾಸ್ತ್ರ ಪ್ರಕರಣದ ಸಂಬಂಧ ಶಿಕ್ಷೆ ಭೀತಿ ಎದುರಿಸುತ್ತಿದ್ದ ನಟ ಸಲ್ಮಾನ್ ಖಾನ್ ಗೆ ಜೋಧ್ ಪುರ ನ್ಯಾಯಾಲಯ ರಿಲೀಫ್ ನೀಡಿದ್ದು, ನಟ ನಿರ್ದೋಷಿ ಎಂದು ತೀರ್ಪು ನೀಡಿದೆ.
1998ರ ಕೃಷ್ಣಮೃಗ ಭೇಟೆ ಪ್ರಕರಣ ಸಂಬಂಧ ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದ ಆರೋಪ ಮೇರೆಗೆ ಅಕ್ರಮ ಶಸ್ತ್ರಾಸ್ತ್ರ ಕಾಯ್ದೆಯಡಿ ಜೈಲು ಶಿಕ್ಷೆ ಭೀತಿ ಎದುರಿಸುತ್ತಿದ್ದ ಬಾಲಿವುಡ್ ನಟ ಸಲ್ಮಾನ್ ಖಾನ್ ರಾಜಸ್ತಾನದ ಜೋದ್ಪುರ ನ್ಯಾಯಾಲಯ ರಿಲೀಫ್ ನೀಡಿದೆ. ಪ್ರಕರಣದಲ್ಲಿ ಸಲ್ಮಾನ್ ಖಾನ್ ರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ.
ಪ್ರಕರಣ ಅಂತಿಮ ತೀರ್ಪು ಪ್ರಕಟಿಸಿದ ಜೋದ್ಪುರ ನ್ಯಾಯಾಲಯದ ಸಿಜೆಎಂ ದಲ್ಪತ್ ಸಿಂಗ್ ರಾಜ್ ಪುರೋಹಿತ್ ಅವರು, ಸಲ್ಮಾನ್ ಖಾನ್ ವಿರುದ್ಧದ ಆರೋಪಗಳನ್ನು ಸಾಬೀತು ಪಡಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಿದೆ. ಹೀಗಾಗಿ ಪ್ರಕರಣದಿಂದ ಸಲ್ಮಾನ್ ಖಾನ್ ರನ್ನು ಖುಲಾಸೆಗೊಳಿಸಲಾಗಿದೆ ಎಂದು ತಮ್ಮ ತೀರ್ಪನ್ನು ಓದಿದರು.
ಇದಕ್ಕೂ ಮೊದಲು ತಮ್ಮ ವಾದ ಮಂಡಿಸಿದ್ದ ಸಲ್ಮಾನ್ ಖಾನ್ ಪರ ವಕೀಲರು 1998ರ ಅಕ್ಟೋಬರ್ 1 ಮತ್ತು 2ರ ನಡುವಿನ ರಾತ್ರಿ ನಟ ಸಲ್ಮಾನ್ ಖಾನ್ ಶಸ್ತ್ರಾಸ್ತ್ರವನ್ನೇ ಬಳಕೆ ಮಾಡಿಲ್ಲ. ಹೀಗಿರುವಾಗ ಕೃಷ್ಣಮೃಗ ಭೇಟೆ ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದರು. ಅಲ್ಲದೆ ನಟ ಸಲ್ಮಾನ್ ಖಾನ್ ತಮ್ಮ ಪರವಾನಗಿ ಇರುವ ಶಸ್ತ್ರಾಸ್ತ್ರಗಳು ಕಳೆದುಹೋಗಿದೆ ಎಂದು ನೀಡಿದ್ದ ದೂರಿನ ಅಧಾರದ ಮೇಲೆ ಅವರ ವಿರುದ್ಧ ಸುಳ್ಳು ಸಾಕ್ಷ್ಯ ಸೃಷ್ಟಿಸಿ ಅಕ್ರಮ ಶಸ್ತ್ರಾಸ್ತ್ರ ಕಾಯ್ದೆಯಡಿಯಲ್ಲಿ ಪೊಲೀಸರು ದೂರು ದಾಖಲಿಸಿಕೊಂಡಿದ್ದರು. ಹೀಗಾಗಿ ಪ್ರಾಸಿಕ್ಯೂಷನ್ ವಾದದಲ್ಲಿ ಹುರುಳಿಲ್ಲ. ತಮ್ಮ ಕಕ್ಷೀದಾರರನ್ನು ಬಿಡುಗಡೆ ಮಾಡಬೇಕು ಎಂದು ವಾದಮಂಡಿಸಿದ್ದರು.
ಅದರಂತೆ ಸಾದಂರ್ಭಿಕ ಸಾಕ್ಷ್ಯಗಳ ಕೊರತೆ ಹಾಗೂ ಸಂಶಯಾತೀತ ಸಾಕ್ಷ್ಯಗಳ ಕೊರತೆ ಹಿನ್ನಲೆಯಲ್ಲಿ ನ್ಯಾಯಾಲಯ ಸಲ್ಮಾನ್ ಖಾನ್ ರನ್ನು ಪ್ರಕರಣದಿಂದ ಖುಲಾಸೆಗೊಳಿಸಿದೆ.
1998ರಲ್ಲಿ ಹಮ್ ಸಾಥ್ ಸಾಥ್ ಹೈ ಸಿನಿಮಾ ಶೂಟಿಂಗ್ ವೇಳೆ ಜೋಧ್‍ಪುರದ ಬಳಿಯಲ್ಲಿರುವ ಕಂಕಣಿ ಗ್ರಾಮದಲ್ಲಿ ಸಲ್ಮಾನ್ ಖಾನ್ ಕೃಷ್ಣಮೃಗ ಬೇಟೆಯಾಡಿದ್ದರು. ರಕ್ಷಿತ ಅರಣ್ಯ ಪ್ರದೇಶದಲ್ಲಿ ಕೃಷ್ಣಮೃಗ ಬೇಟೆಯಾಡಿದ್ದ ಸಲ್ಮಾನ್ ಖಾನ್ ವಿರುದ್ಧ ಅರಣ್ಯ ಇಲಾಖೆ ಅಕ್ರಮ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಿತ್ತು. ಈ ಪ್ರಕರಣಕ್ಕೆ ಸಂಬಂಧಸಿದಂತೆ ಸಲ್ಮಾನ್ ಖಾನ್ 2006 ರ ಏಪ್ರಿಲ್ ಮತ್ತು 2007ರ ಆಗಸ್ಟ್ನಲ್ಲಿ ಎರಡು ಬಾರಿ ಜೈಲುವಾಸ ಅನುಭವಿಸಿದ್ದರು. ಜನವರಿ 9 ರಂದು ನಡೆದ ವಿಚಾರಣೆಯ ದಿನದಂದು ಎಲ್ಲಾ ರೀತಿಯ ವಾದ ಹಾಗೂ ಪ್ರತಿವಾದಗಳು ಅಂತ್ಯಗೊಂಡಿತ್ತು. ಈ ಹಿನ್ನಲೆಯಲ್ಲಿ ನ್ಯಾಯಾಲಯವು ಅಕ್ರಮ ಶಸ್ತ್ರಾಸ್ತ್ರ ಕಾಯ್ದೆ ಪ್ರಕರಣದ ತೀರ್ಪನ್ನು ಜನವರಿ 18ಕ್ಕೆ ಪ್ರಕಟಿಸುವುದಾಗಿ ತಿಳಿಸಿತ್ತು.
ಈ ಹಿಂದೆ ಹಿಟ್ ಅಂಡ್ ರನ್ ಮತ್ತು ಚಿಂಕರ ಬೇಟೆ ಪ್ರಕರಣಗಳಲ್ಲಿ ನಟ ಸಲ್ಮಾನ್ ಖಾನ್ ನಿರ್ದೋಷಿ ಎಂದು ನ್ಯಾಯಾಲಯಗಳು ತೀರ್ಪು ನೀಡಿತ್ತು. ಇದೀಗ ಮೂರನೇ ಪ್ರಕರಣದಲ್ಲೂ ಜೋದ್ ಪುರ ನ್ಯಾಯಾಲಯ ನಟನಿಗೆ ರಿಲೀಫ್ ನೀಡಿದ್ದು, ನಾಲ್ಕನೇ ಮತ್ತು ಅಂತಿಮ ಪ್ರಕರಣವಾದ ಕೃಷ್ಣಮೃಗ ಭೇಟೆ ಪ್ರಕರಣದ ಅಂತಿಮ ತೀರ್ಪು ಇನ್ನಷ್ಟೇ ಹೊರಬರಬೇಕಿದೆ.
ತೀರ್ಪಿನ ಆದೇಶ ಪ್ರತಿ ದೊರೆತ ಬಳಿಕ ಮುಂದಿನ ನಿರ್ಧಾರ: ವೈಷ್ಣೋಯಿ ಸಮಾಜದ ಪರ ವಕೀಲರ ಹೇಳಿಕೆ
ಇನ್ನು ಜೋದ್ಪುರ ನ್ಯಾಯಾಲಯದ ಆದೇಶ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ವೈಷ್ಣೋಯಿ ಸಮಾಜದ ಪರ ವಕೀಲರು, ತಮಗಿನ್ನೂ ಆದೇಶದ ಪ್ರತಿ ಸಿಕ್ಕಿಲ್ಲ. ಆದೇಶದ ಪ್ರತಿಯಲ್ಲಿನ ಅಂಶಗಳನ್ನು ಗಮನಿಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.
Advertisement