ಪಾಟ್ನಾ: ಪುರುಷರು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಲಕ್ಷಾಂತರ ಜನ ಶನಿವಾರ ಬಿಹಾರದಲ್ಲಿ ರಾಜ್ಯ ಸರ್ಕಾರದ ಮದ್ಯ ನಿಷೇಧ ನೀತಿಯನ್ನು ಬೆಂಬಲಿಸಿ ಮಾನವ ಸರಪಳಿ ನಿರ್ಮಿಸಿದ್ದಾರೆ.
ಈ ಮಾನವ ಸರಪಳಿಯಲ್ಲಿ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್, ಮೈತ್ರಿ ಪಕ್ಷ ಆರ್ ಜೆ ಡಿ ಅಧ್ಯಕ್ಷ ಲಾಲು ಪ್ರಸಾದ್, ಕಾಂಗ್ರೆಸ್ ಮುಖಂಡರು ಹಾಗು ವಿರೋಧ ಪಕ್ಷ ಬಿಜೆಪಿ ಮುಖಂಡರು ಕೂಡ ಭಾಗಿಯಾಗಿದ್ದು ವಿಶೇಷ.
ರಾಜ್ಯದಲ್ಲಿ ಮದ್ಯ ನಿಷೇಧ ಬೆಂಬಲಿಸಿ ವಿಶ್ವದಲ್ಲೇ ಅತಿ ದೊಡ್ಡದಾದ ಅಂದರೆ ೧೧,೦೦೦ ಕಿಲೋ ಮೀಟರ್ ಉದ್ದದ ಮಾನವ ಸರಪಳಿ ನಿರ್ಮಿಸುತ್ತಿರುವುದಾಗಿ ಬಿಹಾರದ ಮುಖ್ಯ ಕಾರ್ಯದರ್ಶಿ ಅಂಜನಿ ಕುಮಾರ್ ಸಿಂಗ್ ಹೇಳಿದ್ದಾರೆ.
ಈ ಮಾನವ ಸರಪಳಿಯ ಚಿತ್ರವನ್ನು ದಾಖಲಿಸಲು ಒಂದು ವಿದೇಶಿ ಮತ್ತು ಎರಡು ಇಸ್ರೋ ಉಪಗ್ರಹಗಳು, ನಾಲ್ಕು ವಿಮಾನಗಳು, ಎರಡು ಹೆಲಿಕ್ಯಾಪ್ಟರ್ ಗಳು ಮತ್ತು ೪೦ ಡ್ರೋನ್ ಗಳನ್ನು ಬಳಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
೧೨:೧೫ ರಿಂಗ ೧ ಘಂಟೆಯ ನಡುವೆ ಸುಮಾರು ೨೦ ದಶಲಕ್ಷ ಜನ ಈ ಮಾನವ ಸರಪಳಿಗೆ ಕೈಜೋಡಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.