
ನವದೆಹಲಿ: ಪ್ರಮುಖ ಬೆಳವಣಿಗೆಯಲ್ಲಿ ಬ್ಯಾಂಕುಗಳಲ್ಲಿ ನಡೆಯುವ 50 ಸಾವಿರಕ್ಕೂ ಅಧಿಕ ನಗದು ವಹಿವಾಟುಗಳಿಗೂ ತೆರಿಗೆ ವಿಧಿಸುವಂತೆ ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ನೇತೃತ್ವದ ಮುಖ್ಯಮಂತ್ರಿಗಳ ಸಮಿತಿ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದೆ.
ನಗದ ರಹಿತ ವಹಿವಾಟು ಉತ್ತೇಜನಕ್ಕಾಗಿ ರಚಿಸಲಾಗಿದ್ದ ಮುಖ್ಯಮಂತ್ರಿಗಳ ಸಮಿತಿ ನಿನ್ನೆ ಪ್ರಧಾನಿ ಮೋದಿ ಅವರಿಗೆ ತಮ್ಮ ಮಧ್ಯಂತರ ವರದಿ ಸಲ್ಲಿಕೆ ಮಾಡಿದ್ದು, ವರದಿಯಲ್ಲಿ 50 ಸಾವಿರಕ್ಕೂ ಅಧಿಕ ನಗದು ವಹಿವಾಟಿನ ಮೇಲೆ ತೆರಿಗೆ ವಿಧಿಸುವಂತೆ ಸಲಹೆ ನೀಡಿದೆ.
ತನ್ನ ವರದಿಯಲ್ಲಿ ಯುಪಿಎ ಸರ್ಕಾರದ ಕ್ರಮವನ್ನು ಉಲ್ಲೇಖ ಮಾಡಿರುವ ಸಮಿತಿಯು, 2005ರಲ್ಲೂ ನಗದು ರಹಿತ ವಹಿವಾಟಿಗೆ ಯತ್ನಿಸಿದ್ದ ಯುಪಿಎ ಸರ್ಕಾರ ಇಂತಹುದೇ ಕ್ರಮವನ್ನು ಜಾರಿ ಮಾಡಿತ್ತು. ಆದರೆ ಅಂದು ನಗದು ರಹಿತ ವಹಿವಾಟು ನಡೆಸುವ ಸಂಬಂಧ ಅಂತಹ ಪೂರಕ ವಾತಾವರಣವಿರಲಿಲ್ಲ. ಹೀಗಾಗಿ ಇದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿ ಸರ್ಕಾರ ತನ್ನ ನಿರ್ಧಾರವನ್ನು ಹಿಂದಕ್ಕೆ ಪಡೆದಿತ್ತು. ಆದರೆ ಇದೀಗ ಪರಿಸ್ಥಿತಿ ಬದಲಾಗಿದ್ದು, ನಗದು ರಹಿತ ವಹಿವಾಟಿಗೆ ಪೂರಕವಾದ ವಾತಾವರಣವಿದ್ದು, ಮೊಬೈಲ್ ಬ್ಯಾಂಕಿಂಗ್ ಮತ್ತು ಇಂಟರ್ ನೆಟ್ ಬ್ಯಾಂಕಿಂಗ್ ಸೇವೆಗಳು ಸಾಕಷ್ಟು ಉತ್ತೇಜನ ಕಂಡಿವೆ. ಹೀಗಾಗಿ ಪ್ರಸ್ತುತ ನಗದು ರಹಿತ ವಹಿವಾಟನ್ನು ಉತ್ತೇಜಿಸಲು ಹೆಚ್ಚು ಮೌಲ್ಯದ ನಗದು ಸಹಿತ ವಹಿವಾಟಿನ ಮೇಲೆ ತೆರಿಗೆ ಹಾಕಬಹುದು ಎಂದು ಚಂದ್ರಬಾಬು ನಾಯ್ಡು ನೇತೃತ್ವದ ಮುಖ್ಯಮಂತ್ರಿಗಳ ಸಮಿತಿ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದೆ.
ಅಂತೆಯೇ ಸಮಿತಿ ಎಲ್ಲ ಸರ್ಕಾರಿ ಕಚೇರಿಗಳು ಕೂಡ ತುರ್ತಾಗಿ ನಗದು ಸಹಿತ ವಹಿವಾಟಿನಿಂದ ನಗದು ರಹಿತ ವಹಿವಾಟಿಗೆ ಬದಲಾಗಬೇಕು. ಆ ಮೂಲಕ ಪ್ರಜೆಗಳಲ್ಲೂ ನಗದು ರಹಿತ ವಹಿವಾಟಿನ ಕುರಿತು ಜಾಗೃತಿ ಮೂಡಿಸಬೇಕು. ಆಧಾರ್ ಕಾರ್ಡ್ ಅನ್ನು ಗ್ರಾಹಕರ ಮೂಲ ಗುರುತಿನ ಚೀಟಿಯನ್ನಾಗಿ ಪರಿಗಣಿಸಬೇಕು. ಎಲ್ಲ ವ್ಯಾಪಾರಸ್ಥರಿಗೂ ಆಧಾರ್ ಪಾವತಿ ಮತ್ತು ಬಯೋಮೆಟ್ರಿಕ್ ಪಾವತಿ ವ್ಯವಸ್ಥೆಯನ್ನು ಶೇ.50ರಷ್ಟು ರಿಯಾಯಿತಿ ದರದಲ್ಲಿ ಮಾರಾಟ ಮಾಡಬೇಕು. ಆ ಮೂಲಕ ವ್ಯಾಪಾರಸ್ಥರೂ ಕೂಡ ಡಿಜಿಟಲ್ ಪಾವತಿಗೆ ಬದಲಾಗುವಂತೆ ಮನವೊಲಿಸಬೇಕು. ಗ್ರಾಹಕರಿಗೆ ಮತ್ತು ವ್ಯಾಪರಸ್ಥರಿಗೆ ವಿವಿಧ ತೆರಿಗೆ ಪ್ರಯೊಜನಗಳನ್ನು ನೀಡಬೇಕು ಎಂದು ಸಮಿತಿ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದೆ.
ಇದೇ ವೇಳೆ ಡಿಜಿಟಲ್ ವಹಿವಾಟಿನ ಸುರಕ್ಷತೆಗಾಗಿ ವಿಮೆ ಮಾಡಿಸುವ ಕುರಿತೂ ನಾಯ್ಡು ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದ್ದು, ನಗದು ರಹಿತ ವಹಿವಾಟು ನಡೆಸುವ ಪ್ರಜೆಗಳ ಹಿತಾಸಕ್ತಿ ರಕ್ಷಣೆಗಾಗಿ ಈ ಕ್ರಮ ಕಡ್ಡಾಯವಾಗಿ ಆಗಬೇಕಿದೆ ಎಂದು ಸಮಿತಿ ಹೇಳಿದೆ.
Advertisement