68ನೇ ಗಣರಾಜ್ಯೋತ್ಸವ ಸಂಭ್ರಮಾಚರಣೆಗೆ ವರ್ಣರಂಜಿತ ತೆರೆ

ರಾಷ್ಟ್ರರಾಜಧಾನಿ ದೆಹಲಿಯಲ್ಲಿ ನಡೆದ 68ನೇ ಗಣರಾಜ್ಯೋತ್ಸವ ಸಂಭ್ರಮಾಚರಣೆಗೆ ರಾಷ್ಟ್ರಗೀತೆಯನ್ನು ಹಾಡುವ ಮೂಲಕ ವರ್ಣ ರಂಜಿತ ತೆರೆ ಎಳೆಯಲಾಗಿದ್ದು...
ಗಣರಾಜ್ಯೋತ್ಸವ ಸಂಭ್ರಮಾಚರಣೆಗೆ ವರ್ಣ ರಂಜಿತ ತೆರೆ
ಗಣರಾಜ್ಯೋತ್ಸವ ಸಂಭ್ರಮಾಚರಣೆಗೆ ವರ್ಣ ರಂಜಿತ ತೆರೆ

ನವದೆಹಲಿ: ರಾಷ್ಟ್ರರಾಜಧಾನಿ ದೆಹಲಿಯಲ್ಲಿ ನಡೆದ 68ನೇ ಗಣರಾಜ್ಯೋತ್ಸವ ಸಂಭ್ರಮಾಚರಣೆಗೆ ರಾಷ್ಟ್ರಗೀತೆಯನ್ನು ಹಾಡುವ ಮೂಲಕ ವರ್ಣ ರಂಜಿತ ತೆರೆ ಎಳೆಯಲಾಗಿದ್ದು, ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹಾಗೂ  ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿದ್ದ ಶೇಖ್ ಮೊಹಮ್ಮದ್ ಬಿನ್ ಜಾಯೇದ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಆತ್ಮೀಯ ಬೀಳ್ಕೊಡುಗೆ ನೀಡಿದರು.

ಇದಕ್ಕೂ ಮೊದಲು ಪ್ರಣಬ್ ಮುಖರ್ಜಿ ಅವರು ಧ್ವಜಾರೋಹಣ ಮಾಡುವ ಮೂಲಕ 68ನೇ ಗಣರಾಜ್ಯೋತ್ಸವಕ್ಕೆ ವಿದ್ಯುಕ್ತ ಚಾಲನೆ ನೀಡಿದರು.ಉಗ್ರ ದಾಳಿ ಆತಂಕದ ನಡುವೆಯೇ 68ನೇ ಗಣರಾಜ್ಯೋತ್ಸವ ಸಂಭ್ರಮಾಚರಣೆಯಲ್ಲಿ  ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಧ್ವಜಾರೋಹಣ ಮಾಡಿದರು. ಈ ವೇಳೆ 21 ಸುತ್ತು ಕುಶಾಲ ತೋಪು ಸಿಡಿಸುವ ಮೂಲಕ ಧ್ವಜಗೌರವ ಸಲ್ಲಿಸಲಾಯಿತು. ಬಳಿಕ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು, ಗಡಿಯಲ್ಲಿ ತಮ್ಮ  ಶೌರ್ಯ ಪ್ರದರ್ಶನ ಮಾಡಿ 3 ಉಗ್ರರನ್ನು ಹತ್ಯೈಗೈದಿದ್ದ  ಹುತಾತ್ಮ ಯೋಧ ಹವಾಲ್ದಾರ್  ಹಂಗಪನ್ ದಾದಾ ಅವರಿಗೆ ಅಶೋಕ ಚಕ್ರ ಪ್ರಶಸ್ತಿ ಪ್ರದಾನ ಮಾಡಿದರು. ಹವಾಲ್ದಾರ್  ಹಂಗಪನ್ ದಾದಾ ಅವರ ಪತ್ನಿಗೆ ಪ್ರಣಬ್  ಮುಖರ್ಜಿ ಅವರು ಪ್ರಶಸ್ತಿ ಪ್ರದಾನ ಮಾಡಿದರು.

ಇದರ ಬೆನ್ನಲ್ಲೇ ಭಾರತೀಯ ಸೇನೆಯಎಂಐ-17 ಹೆಲಿಕಾಪ್ಟರ್ ಸೇರಿದಂತೆ ನೌಕಾದಳ, ವಾಯುದಳ ಹಾಗೂ ಭೂಸೇನೆಯ ಪ್ರತೀಕವಾದ ಇತರೆ 3 ಹೆಲಿಕಾಪ್ಟರ್ ಗಳು ತ್ರಿವರ್ಣ ಧ್ವಜವನ್ನು ಹೊತ್ತು ಸಾಗುವ ಮೂಲಕ ಆಕರ್ಷಕ ಪಥ ಸಂಚಲನಕ್ಕೆ ಚಾಲನೆ ನೀಡಿದವು. ಬಳಿಕ ಪರೇಡ್ ಕಮಾಂಡರ್ ಮನೋಜ್ ನರವಾನೆ ಮತ್ತು ಮೇಜರ್ ಜನರಲ್ ರಾಜೇಶ್ ಸಹಾಯ್ ಅವರ ನೇತೃತ್ವದ ಅಶ್ವಾರೋಹಿ ದಳ ಭಾರತೀಯ ಶಸ್ತ್ರಸ್ತ್ರ ದಳದ ಸುಪ್ರೀಂ ಕಮ್ಯಾಂಡರ್ ರಾಷ್ಟ್ರಪತಿಗಳಿಗೆ ಗೌರವ ಸಲ್ಲಿಸಿದರು. ಬಳಿಕ ನಡೆದ ಸೇನೆಯ ಆಕರ್ಷಕ ಪಥ ಸಂಚಲನದಲ್ಲಿ ಭಾರತೀಯ ಸೇನೆ ವಿವಿಧ ದಳಗಳು ಆಕರ್ಷಕ ಪಥಸಂಚಲನ ನಡೆಸಿದವು.

ಇದೇ ವೇಳೆ ಕೋರ್ ಆಫ್ ಮಿಲಿಟರಿ ಪಡೆಯ 60 ಯೋಧರು 15 ಚಲಿಸುವ ಬೈಕ್ ಗಳಲ್ಲಿ ಪಿರಮಿಡ್ ನಿರ್ಮಿಸುವ ಮೂಲಕ ವೀಕ್ಷಕರ ಅಚ್ಚರಿಗೆ ಕಾರಣರಾದರು. ಇನ್ನು ಇದೇ ಮೊದಲ ಬಾರಿಗೆ ಸೇನೆಯ ಉನ್ನತ ಪಡೆಗಳಲ್ಲಿ ಒಂದಾದ ಎನ್ ಎಸ್ ಜಿ ಕಮಾಂಡೊ ಪಡೆಯ ಒಂದು ತುಕಡಿ ಇಂದಿನ ಪರೇಡ್ ನಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಅಂತೆಯೇ ಭಾರತೀಯ ಸೇನೆ ಪ್ರಮುಖ ಅಸ್ತ್ರ ಎಂದೇ ಹೇಳಲಾಗುತ್ತಿರುವ ಟಿ-90 ಭೀಷ್ಮ ಟ್ಯಾಂಕರ್ ಗಳು ಪರೇಡ್ ನಡೆಸುವ ಮೂಲಕ ತಮ್ಮ ಸಾಮರ್ಥ್ಯ ಪ್ರದರ್ಶನ ಮಾಡಿದವು.

ಅಂತೆಯೇ ಭಾರತೀಯ ಸೇನೆಯ ಪ್ರಬಲ ಶಕ್ತಿ ಎಂದೇ ಹೇಳಲಾಗುತ್ತಿರುವ ಬ್ರಹ್ಮೋಸ್ ಕ್ಷಿಪಣಿಗಳು, ಸ್ವಾತಿ ರಡಾರ್ ವ್ಯವಸ್ಥೆ, ಟ್ಯಾಂಕರ್ ಗಳು, ಕಮ್ಯುನಿಕೇಷನ್ ವ್ಯವಸ್ಥೆ, ಆಕಾಶ್ ಕ್ಷಿಪಣಿಗಳು, ಟ್ರೂಪ್ ಲೆವೆಲ್ ರಾಡಾರ್, ಅರ್ಟಿಲರಿ ಗನ್ ವ್ಯವಸ್ಥೆ, ಫಿರಂಗಿಗಳು ಪರೇಡ್ ನಲ್ಲಿ ಪಾಲ್ಗೊಂಡಿದ್ದವು.

ಕಣ್ಮನ ಸೆಳೆದ ಸ್ತಬ್ದ ಚಿತ್ರಗಳು
ಇದೇ ವೇಳೆ ದೇಶದ 17 ರಾಜ್ಯಗಳ ಕಲೆ-ಸಂಸ್ಕೃತಿಗಳನ್ನು ಬಿಂಬಿಸುವ ವಿವಿಧ ಸ್ತಬ್ದ ಚಿತ್ರಗಳು ಮೆರವಣಿಗೆ ನಡೆಸಿದವು. ಅಂತೆಯೇ ಕೇಂದ್ರ ಸರ್ಕಾರದ ಯೋಜನೆಗಳನ್ನು ಬಿಂಬಿಸುವ ಸ್ತಬ್ದ ಚಿತ್ರಗಳೂ ಕೂಡ ಮೆರವಣಿಗೆಯಲ್ಲಿ ಪಾಲ್ಗೊಂಡು ಜಾಗೃತಿ ಮೂಡಿಸಿದವು. ಲೋಕಮಾನ್ಯ ಬಾಲಗಂಗಾಧರ ತಿಲಕ್ ಅವರ ಪ್ರತಿಮೆಯನ್ನು ಹೊಂದಿದೆ ಮತ್ತು ಮಹಾರಾಷ್ಟ್ರದ ಮರಾಠಿ ಸಂಸ್ಕೃತಿಯನ್ನು ಬಿಂಬಿಸುವ ಸ್ತಬ್ದ ಚಿತ್ರ, ಮಣಿಪುರ, ಗುಜರಾತ್, ಲಕ್ಷದ್ವೀಪ, ಗೋವಾ, ದೆಹಲಿ, ಹಿಮಾಚಲ ಪ್ರದೇಶ, ಹರ್ಯಾಣ ಸೇರಿದಂತೆ ವಿವಿಧ ರಾಜ್ಯಗಳ ಸ್ತಬ್ದ ಚಿತ್ರಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು. ಅಂತೇಯೇ ಕೇಂದ್ರ ಸರ್ಕಾರದ ಪ್ರಮುಖ ಯೋಜನೆಗಳಾದ ಭೇಠಿ ಬಚಾವೋ ಭೇಠಿ ಪಡಾವೋ, ಖಾದಿ ಇಂಡಿಯಾ ಸೇರಿದಂತೆ ವಿವಿಧ ಸ್ತಬ್ದ ಚಿತ್ರಗಳು ಮೆರವಣಿಗೆಯ ಆಕರ್ಷಕವಾಗಿದ್ದವು. ಕರ್ನಾಟಕದ ಜಾನಪದ ಸಂಸ್ಕೃತಿ ಬಿಂಬಿಸುವ ಸ್ತಬ್ದ ಚಿತ್ರ ನೋಡುಗರ ಕಣ್ಮನ ಸೆಳೆಯಿತು. ಕರ್ನಾಟಕದ ಜಾನಪದ ಸಂಸ್ಕೃತಿಯ ಪ್ರತೀಕವಾಗಿರುವ ಗೊರವಯ್ಯ ಪ್ರತಿಮೆ ಹಾಗೂ ಕಂಸಾಳೆ ನೃತ್ಯಗಾರರ ತಂಡ ಸ್ತಬ್ಜ ಚಿತ್ರ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ಆಗಸದಲ್ಲಿ ಸಾಹಸ ಮೆರೆದ ವಾಯುಸೇನೆ
ಇದೇ ಮೊದಲ ಬಾರಿಗೆ ಸ್ವದೇಶಿ ನಿರ್ಮಿತ ಯುದ್ಧ ವಿಮಾನ ತೇಜಸ್ ಕೂಡ ರಾಜ್ ಪಥ್ ಮೇಲೆ ಹಾರಾಟ ಮಾಡುವ ಮೂಲಕ ತನ್ನ ಸಾಮರ್ಥ್ಯ ಪ್ರದರ್ಶಿಸಿತು. ಸುದರ್ಶನ ಚಕ್ರ. ಹೆಲಿಕಾಪ್ಚರ್, ಸುಖೋಯ್ ಯುದ್ಧ ವಿಮಾನಗಳು, 5 ಜಾಗ್ವಾರ್ ವಿಮಾನಗಳು, 5 ಮಿಗ್ 29 ವಿಮಾನಗಳು ಹಾಗೂ ಎಂಐ-17 ಹೆಲಿಕಾಪ್ಚರ್ ಗಳು ಸೇರಿದಂತೆ ಒಟ್ಟು ಭಾರತೀಯ ವಾಯು ಸೇನೆ 27 ಯುದ್ಧ ವಿಮಾನಗಳು ಹಾರಾಟ ನಡೆಸಿದವು. ಅಂತಿಮವಾಗಿ ವಾಯುಸೇನೆಯ ಸುಮಾರು 27ಕ್ಕೂ ಹೆಚ್ಚು ವಿಮಾನಗಳು ಆಗಸದಲ್ಲಿ "ವರ್ಟಿಕಲ್ ಚಾರ್ಲಿ ಫಾರ್ಮೇಶಷನ್" ಮಾಡುವ ಮೂಲಕ ಪರೇಡ್ ಗೆ ವರ್ಣ ರಂಜಿತ ತೆರೆ ಎಳೆದವು. ರಾಷ್ಟ್ರಗೀತೆ ಹಾಡುವ ಮೂಲಕ ಸಂಭ್ರಮಾಚರಣೆಗೆ ವಿದ್ಯುಕ್ತ ತೆರೆ ಎಳೆಯಲಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com