
ವಾಷಿಂಗ್ಟನ್: ಹೊರಗುತ್ತಿಗೆ ಉದ್ಯೋಗಗಳ ವಿರುದ್ಧ ಸಮರ ಸಾರಿರುವ ಅಮೆರಿಕ ಸರ್ಕಾರ ಕೊನೆಗೂ ಮಸೂದೆಯನ್ನು ಜಾರಿಗೆ ತರುವಲ್ಲಿ ಯಶಸ್ವಿಯಾಗಿದ್ದು, ಅಮೆರಿಕ ಕಾಂಗ್ರೆಸ್ ಹೊರಗುತ್ತಿಗೆ ಉದ್ಯೋಗಗಳ ವಿರುದ್ಧದ ಮಸೂದೆಗೆ ಅನುಮೋದನೆ ನೀಡಿದೆ.
ಬಿಪಿಓ ಮತ್ತು ಕಾಲ್ ಸೆಂಟರ್ ಗಳ ಮೂಲಕ ವಿದೇಶಿಗರಿಗೆ ಉದ್ಯೋಗ ನೀಡುವ ಅಮೆರಿಕದ ಕಂಪನಿಗಳಿಗೆ ನೀಡುತ್ತಿರುವ ತೆರಿಗೆ ವಿನಾಯಿತಿಯನ್ನು ಈ ಮಸೂದೆ ಮೂಲಕ ಅಮೆರಿಕ ಸರ್ಕಾರ ರದ್ದುಗೊಳಿಸುವ ಸಾಧ್ಯತೆ ಇದೆ. ಅಮೆರಿಕ ಸರ್ಕಾರದ ಈ ಕಠಿಣ ನಿಲುವಿನಿಂದಾಗಿ ಹೊರಗುತ್ತಿಗೆ ಉದ್ಯೋಗಗಳನ್ನೇ ನೆಚ್ಚಿಕೊಂಡಿರುವ ಭಾರತದಂತಹ ದೇಶಗಳಿಗೆ ಇದು ಮಾರಕವಾಗಿ ಪರಿಣಮಿಸಲಿದೆ.
ಅಮೆರಿಕದ ಪಾಲಿಗೆ ಮಹತ್ವವಾಗಿರುವ ಈ ಮಸೂದೆಯನ್ನು ಡೆಮಾಕ್ರಟಿಕ್ ಪಕ್ಷದ ಅಮೆರಿಕ ಕಾಂಗ್ರೆಸ್ ನ ಸದಸ್ಯ ಜೀನಿ ಗ್ರೀನ್ ಮತ್ತು ರಿಪಬ್ಲಿಕನ್ ಪಕ್ಷದ ಡೇವಿಡ್ ಮೆಕಿನ್ಲಿ ಮಂಡಿಸಿದರು. ಅದರಂತೆ ಅಮೆರಿಕ ಕಾಲ್ ಸೆಂಟರ್ ಹಾಗೂ ಗ್ರಾಹಕ ರಕ್ಷಣಾ ಕಾಯ್ದೆಯ ಅನ್ವಯ ಅಮೆರಿಕದ ನೌಕರಿಗಳನ್ನು ಇತರೆ ದೇಶಗಳೊಂದಿಗೆ ಹಂಚಿಕೊಳ್ಳುವುದನ್ನು "ಕೆಟ್ಟ ನಡೆ" ಎಂದು ಪರಿಗಣಿಸಲಾಗುತ್ತದೆ. ಇಂತಹ ಚಟುವಟಿಕೆಗಳು ಕಂಡುಬಂದರೆ ಅಂತಹ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಬಹುದಾಗಿದ್ದು, ಆಯಾ ಸಂಸ್ಥೆಗಳಿಗೆ ನೀಡಲಾಗುತ್ತಿರುವ ಆರ್ಥಿಕ ನೆರವು ಹಾಗೂ ಸಬ್ಸಿಡಿ, ತೆರಿಗೆ ವಿನಾಯಿತಿಯನ್ನು ಸರ್ಕಾರ ಸ್ಥಗಿತಗೊಳಿಸಬಹುದಾಗಿದೆ.
ಪ್ರಸ್ತುತ ಅಮೆರಿಕ ಕಾಂಗ್ರೆಸ್ ಜಾರಿಗೆ ತಂದಿರುವ ಈ ಮಸೂದೆ 2013ರಲ್ಲಿ ಜಾರಿಯಾಗಿದ್ದ ಮಸೂದೆಯಂತೆಯೇ ಇದೆ.
ಗ್ರೇಟರ್ ಹ್ಯೂಸ್ಟನ್ ಪ್ರದೇಶವೊಂದರಲ್ಲೇ ಸುಮಾರು 54 ಸಾವಿರ ಕಾಲ್ ಸೆಂಟರ್ ಉದ್ಯೋಗಗಳಿದ್ದು, ದೇಶಾದ್ಯಂತ ಸುಮಾರು 2.5 ಮಿಲಿಯನ್ ಉದ್ಯೋಗಗಳಿವೆ. ಅಮೆರಿಕದ ಪ್ರಜೆ ಉತ್ತಮ ಕೆಲಸ ಮಾಡುವ ಕೆಲಸಕ್ಕೆ ತಕ್ಕಂತೆ ಉತ್ತಮ ವೇತನ ಪಡೆಯುವಂತಾಗಬೇಕು. ಇದಕ್ಕೆ ಈ ನೂತನ ಮಸೂದೆ ಸಹಕಾರಿಯಾಗಲಿದೆ. ಆದರೆ ದುರಾದೃಷ್ಟವಶಾತ್ ಅಮೆರಿಕದ ಪಾಲಾಗಬೇಕಿದ್ದ ಉದ್ಯೋಗಗಳು ಭಾರತ, ಫಿಲಿಫೈನ್ಸ್ ನಂತಹ ರಾಷ್ಟ್ರಗಳಿಗೆ ಹಂಚಿಹೋಗಿದ್ದು, ಈ ಬೈ ಪಾರ್ಟಿಶಿಯ.ನ್ ಮಸೂದೆಯಿಂದಾಗಿ ದೇಶದ ಉದ್ಯೋಗಗಳ ರಕ್ಷಣೆಯಾಗಲಿದೆ. ಅಮೆರಿಕನ್ನರ ಉದ್ಯೋಗ ಇನ್ನು ಮುಂದೆ ಅಮೆರಿಕನ್ನರಿಗೇ ದಕ್ಕಲಿದೆ ಎಂದು ಗ್ರೀನ್ ಅಭಿಪ್ರಾಯಪಟ್ಟಿದ್ದಾರೆ.
ನಮ್ಮ ಮೊದಲ ಆದ್ಯತೆ ಏನಿದ್ದರೂ ಅಮೆರಿಕನ್ನರ ಕೆಲಸಗಳ ರಕ್ಷಣೆ ಮತ್ತು ಹೊಸ ಉದ್ಯೋಗಗಳ ಸೃಷ್ಟಿಯಾಗಿದ್ದು, ಅಮೆರಿಕನ್ನರ ಉದ್ಯೋಗ ವಿದೇಶಿಗರ ಪಾಲಾಗಬಾರದು. ಒಂದು ವೇಳೆ ಕಂಪನಿಗಳು ಈ ನಿಯಮವನ್ನು ಗಾಳಿಗೆ ತೂರಿ ಹೆಚ್ಚಿನ ಲಾಭಾಂಶದ ಆಸೆಗೆ ಬಿದ್ದಜ ವಿದೇಶಿಗರಿಗೆ ಉದ್ಯೋಗ ನೀಡಿದರೆ ಅಂತಹ ಸಂಸ್ಥೆಗಳಿಗೆ ಸರ್ಕಾರದ ಯಾವುದೇ ರೀತಿಯ ಆರ್ಥಿಕ ನೆರವು ಮತ್ತು ತೆರಿಗೆ ವಿನಾಯಿತಿ ದೊರೆಯುವುದಿಲ್ಲ ಎಂದು ಮೆಕಿನ್ಲಿ ಸ್ಪಷ್ಟಪಡಿಸಿದರು.
Advertisement