ವಿದ್ಯಾರ್ಥಿಗಳೇ ಎಚ್ಚರ; ದೇಶದ 23 ವಿವಿ, 279 ತಾಂತ್ರಿಕ ಶಿಕ್ಷಣ ಸಂಸ್ಥೆಗಳು ನಕಲಿ: ಯುಜಿಸಿ

ರಾಷ್ಟ್ರ ರಾಜಧಾನಿ ಈಗ ನಕಲಿ ರಾಜಧಾನಿಯಾಗುತ್ತಿದ್ದು, ದೆಹಲಿಯ 66 ತಾಂತ್ರಿಕ ಶಿಕ್ಷಣ ಸಂಸ್ಥೆಗಳು ಸೇರಿದಂತೆ ದೇಶಾದ್ಯಂತ 279 ನಕಲಿ ತಾಂತ್ರಿಕ ಶಿಕ್ಷಣ ಸಂಸ್ಥೆಗಳನ್ನು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ರಾಷ್ಟ್ರ ರಾಜಧಾನಿ ಈಗ ನಕಲಿ ರಾಜಧಾನಿಯಾಗುತ್ತಿದ್ದು, ದೆಹಲಿಯ 66 ತಾಂತ್ರಿಕ ಶಿಕ್ಷಣ ಸಂಸ್ಥೆಗಳು ಸೇರಿದಂತೆ ದೇಶಾದ್ಯಂತ 279 ನಕಲಿ ತಾಂತ್ರಿಕ ಶಿಕ್ಷಣ ಸಂಸ್ಥೆಗಳನ್ನು ಹಾಗೂ 23 ನಕಲಿ ವಿಶ್ವವಿದ್ಯಾಲಯಗಳನ್ನು  ವಿಶ್ವವಿದ್ಯಾಲಯಗಳ ಅನುದಾನ ಆಯೋಗ(ಯುಜಿಸಿ) ಗುರುತಿಸಿದೆ.
ಪರವಾನಗಿ ಪಡೆಯದೆ ಈ 279 ಕಾಲೇಜ್ ಗಳು ಪದವಿ ಪ್ರಧಾನ ಮಾಡುವ ಯಾವುದೇ ಅರ್ಹತೆಯನ್ನು ಹೊಂದಿಲ್ಲ. ಈ ಸಂಸ್ಥೆಗಳು ನೀಡುವ ಪ್ರಮಾಣ ಪತ್ರ ಕೇವಲ ‘ತುಂಡು ಕಾಗದ’ ಅಷ್ಟೇ. ಸರ್ಕಾರದಿಂದ ಇದಕ್ಕೆ ಯಾವುದೇ ಮಾನ್ಯತೆ ಇರುವುದಿಲ್ಲ. ಹೀಗಾಗಿ ಈ ಹಿಂದೇಯ ಯುಜಿಸಿ ಮತ್ತು ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಮಂಡಳಿ(ಎಐಸಿಟಿಇ) ಅಧಿಕೃತ ವೆಬ್‌ಸೈಟ್‌ಗಳಲ್ಲಿ ನಕಲಿ ಶಿಕ್ಷಣ ಸಂಸ್ಥೆಗಳ ಪಟ್ಟಿಯನ್ನು ಪ್ರಕಟಿಸಿದ್ದು, ವಿದ್ಯಾರ್ಥಿಗಳು ಈ ಕುರಿತು ಜಾಗ್ರತೆ ವಹಿಸುವಂತೆ ಸೂಚಿಸಲಾಗಿದೆ.
ದೆಹಲಿಯ 7 ವಿಶ್ವವಿದ್ಯಾಲಯಗಳು ಸೇರಿದಂತೆ ದೇಶದಲ್ಲಿ ಒಟ್ಟು 23 ನಕಲಿ ವಿಶ್ವವಿದ್ಯಾಲಯಗಳಿದ್ದು, ಇಂಜಿನಿಯರಿಂಗ್ ಸೇರಿದಂತೆ ಇತರೆ ತಾಂತ್ರಿಕ ಕೋರ್ಸ್‌ಗಳನ್ನು ನೀಡುತ್ತಿರುವ 279 ನಕಲಿ ಸಂಸ್ಥೆಗಳ ಪೈಕಿ 66 ಕಾಲೇಜುಗಳು ದೆಹಲಿಯಲ್ಲಿವೆ.
ಅನಧಿಕೃತ ಶಿಕ್ಷಣ ಸಂಸ್ಥೆಗಳ ಪಟ್ಟಿಯನ್ನು ನಿಗದಿತ ರಾಜ್ಯಗಳಿಗೆ ಕಳುಹಿಸಲಾಗಿದ್ದು, ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ ಎಂದು ಆಯೋಗದ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ಹಿಂದುಸ್ತಾನ್‌ ಟೈಮ್ಸ್‌ ವರದಿ ಮಾಡಿದೆ.
ತೆಲಂಗಾಣ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಹಾಗೂ ಮಹಾರಾಷ್ಟ್ರದಲ್ಲೂ ಅತಿ ಹೆಚ್ಚು ನಕಲಿ ಶಿಕ್ಷಣ ಸಂಸ್ಥೆಗಳು ಪತ್ತೆಯಾಗಿವೆ. ಪಟ್ಟಿಯಲ್ಲಿರುವ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳು ಪ್ರವೇಶ ಪಡೆಯದಂತೆ ಎಚ್ಚರ ವಹಿಸುವಂತೆ ತಿಳಿಸುವ ಸಾರ್ವಜನಿಕ ಪ್ರಕಟಣೆಯನ್ನೂ ನೀಡಲಾಗಿದೆ ಎಂದು ವರದಿಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com