ನವದೆಹಲಿ: ರಾಮ ಜನ್ಮ ಭೂಮಿ ಆಯೋಧ್ಯೆ ವಿವಾದ ಧಾರ್ಮಿಕ ಮತ್ತು ಭಾವನಾತ್ಮಕ ವಿಚಾರವಾಗಿದ್ದು, ಸಂಧಾನದ ಮೂಲಕ ಮಾತ್ರ ವಿವಾದ ಇತ್ಯರ್ಥ ಸಾಧ್ಯ. ಹೀಗಾಗಿ ನ್ಯಾಯಾಲಯದ ಹೊರಗೆ ವಿವಾದ ಇತ್ಯರ್ಥಪಡಿಸಿಕೊಳ್ಳಿ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಸಲಹೆ ನೀಡಿದೆ.
ರಾಮ ಮಂದಿರ ವಿವಾದದ ಅರ್ಜಿಯನ್ನು ಶೀಘ್ರ ವಿಚಾರಣೆಗೆ ತೆಗೆದುಕೊಳ್ಳುವಂತೆ ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಂಡ ಮುಖ್ಯ ನ್ಯಾಯಮೂರ್ತಿ ಜೆಎಸ್ ಖೆಹರ್ ನೇತೃತ್ವ ಪೀಠ, ರಾಮ ಮಂದಿರ ವಿಚಾರ ಭಾವನಾತ್ಮಕ ವಿಚಾರವಾಗಿದೆ. ಪರಸ್ಪರ ಸಂಧಾನದಿಂದ ಮಾತ್ರ ಸಮಸ್ಯೆ ಬಗೆಹರಿಯಲು ಸಾಧ್ಯ. ಹೀಗಾಗಿ ನ್ಯಾಯಾಲಯದ ಹೊರಗೆ ಸಂಧಾನದ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ.
ಅಂತೆಯೇ ವಿವಾದ ಸಂಬಂಧ ಎರಡೂ ಧರ್ಮದ ಮುಖಂಡರು ಪರಸ್ಪರ ಚರ್ಚೆ ನಡೆಸಿ ಎಂದೂ ಸುಪ್ರೀಂ ಕೋರ್ಟ್ ಹೇಳಿದೆ. ಆದರೆ ಸುಪ್ರೀಂ ಕೋರ್ಟ್ ನ ಈ ಸಲಹೆ ಅಸಾಧ್ಯ ಎಂದು ವಾದಿಸಿದ ಸುಬ್ರಮಣಿಯನ್ ಸ್ವಾಮಿ ಅವರು, ಎರಡು ಧರ್ಮದ ಮುಖಂಡರ ಪರಸ್ಪರ ಒಂದೇ ವೇದಿಕೆಯಲ್ಲಿ ಕೂತು ಚರ್ಚೆ ಮಾಡುವುದು ಅಸಾಧ್ಯ. ಹೀಗಾಗಿ ನ್ಯಾಯಾಲಯವೇ ವಿವಾದ ಸಂಬಂಧ ಮಧ್ಯ ಪ್ರವೇಶ ಮಾಡಿ ಸಮಸ್ಯೆ ಬಗೆಹರಿಸಬೇಕು ಎಂದು ಮನವಿ ಮಾಡಿದರು. ಈ ವೇಳೆ ಮಾರ್ಚ್ 31ರಂದು ನಡೆಯುವ ವಿಚಾರಣೆ ವೇಳೆ ಈ ಅಂಶವನ್ನು ಉಲ್ಲೇಖಿಸುವಂತೆಯೂ ಮತ್ತು ಎಲ್ಲ ಧರ್ಮೀಯರು ಮತ್ತು ಎಲ್ಲ ರಾಜಕೀಯ ಪಕ್ಷಗಳು ಒಪ್ಪುವುದಾದರೆ ಮಧ್ಯವರ್ತಿಯಾಗುವ ಕುರಿತು ಚಿಂತನೆ ನಡೆಸುವುದಾಗಿಯೂ ಸುಪ್ರೀಂ ಕೋರ್ಟ್ ಹೇಳಿದೆ.
Advertisement