ನವದೆಹಲಿ: ಏಪ್ರಿಲ್ ೨೩ ರಂದು ನಡೆಯಲಿರುವ ನಗರಸಭಾ ಚುನಾವಣೆಯಲ್ಲಿ ಆಡಳಿತ ಆಮ್ ಆದ್ಮಿ ಪಕ್ಷಕ್ಕೆ ಹಿನ್ನಡೆಯಾಗುವ ನಡೆಯಲ್ಲಿ ಎಎಪಿ ಶಾಸಕ ವೇದ್ ಪ್ರಕಾಶ್ ಪಕ್ಷ ತೊರೆದು ಸೋಮವಾರ ಭಾರತೀಯ ಜನತಾ ಪಕ್ಷ ಸೇರುತ್ತಿರುವುದಾಗಿ ಘೋಷಿಸಿದ್ದಾರೆ.
ಎಎಪಿಯಲ್ಲಿ ಆತಂತರಿಕ ಪ್ರಜಾಪ್ರಭುತ್ವ ಇಲ್ಲ ಎಂದು ದೂರಿರುವ ಭವಾನದ ಶಾಸಕ, ೨೦೧೫ ರಲ್ಲಿ ವಿಧಾನಸಭಾ ಚುನಾವಣೆ ಗೆಲ್ಲುವ ಮೊದಲು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೀಡಿದ್ದ ಭರವಸೆಗಳನ್ನು ಪೂರೈಸಲು ವಿಫಲರಾಗಿದ್ದಾರೆ ಎಂದು ಕೂಡ ಅವರು ಆರೋಪಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಸೇರುವ ತಮ್ಮ ನಿರ್ಧಾರವನ್ನು ಪ್ರಕಾಶ್ ಪ್ರಕಟಿಸಿದ್ದಾರೆ. ಈ ಸಭೆಯಲ್ಲಿ ದೆಹಲಿ ಬಿಜೆಪಿ ಅಧ್ಯಕ್ಷ ಮನೋಜ್ ತಿವಾರಿ ಕೂಡ ಉಪಸ್ಥಿತರಿದ್ದರು.
ಉತ್ತರ, ಪೂರ್ವ ಮತ್ತು ದಕ್ಷಿಣ ದೆಹಲಿಯ ೨೭೨ ವಾರ್ಡ್ ಗಳ ಮುನ್ಸಿಪಲ್ ಚುನಾವಣೆ ಏಪ್ರಿಲ್ ೨೩ ಕ್ಕೆ ನಡೆಯಲಿದ್ದು, ಏಪ್ರಿಲ್ ೨೫ ಕ್ಕೆ ಫಲಿತಾಂಶ ಹೊರಬೀಳಲಿದೆ.