2032ರ ಹೊತ್ತಿಗೆ ದೇಶದಲ್ಲಿ ಡೀಸೆಲ್-ಪೆಟ್ರೋಲ್ ರಹಿತ ಇ-ವಾಹನ ವ್ಯವಸ್ಥೆ!

ಮಹತ್ವದ ಬೆಳವಣಿಗೆಯಲ್ಲಿ ಕೇಂದ್ರ ಸರ್ಕಾರ 2032ರ ಹೊತ್ತಿಗೆ ದೇಶದಲ್ಲಿ ಸಂಪೂರ್ಣ ವಿದ್ಯುತ್ ಚಾಲಿತ ವಾಹನ ವ್ಯವಸ್ಥೆಯನ್ನು ಜಾರಿಗೆ ತರುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಮಹತ್ವದ ಬೆಳವಣಿಗೆಯಲ್ಲಿ ಕೇಂದ್ರ ಸರ್ಕಾರ 2032ರ ಹೊತ್ತಿಗೆ ದೇಶದಲ್ಲಿ ಸಂಪೂರ್ಣ ವಿದ್ಯುತ್ ಚಾಲಿತ ವಾಹನ ವ್ಯವಸ್ಥೆಯನ್ನು ಜಾರಿಗೆ ತರುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿದೆ.

2032ರ ಹೊತ್ತಿಗೆ ದೇಶದಲ್ಲಿನ ಎಲ್ಲ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳ ಬದಲಿಗೆ ವಿದ್ಯುತ್ ಚಾಲಿತ ಇ-ವಾಹನಗಳನ್ನು ರಸ್ತೆಗಿಳಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಕ್ರಮ ಕೈಗೊಂಡಿದ್ದು, ಈ ಬಗ್ಗೆ ನೀತಿ ಆಯೋಗದ  ಮೂಲಕ ಕ್ರಮ ಕೈಗೊಂಡಿದ್ದಾರೆ. ಈಗಾಗಲೇ ನೀತಿ ಆಯೋಗ ಇ-ವಾಹನ ಯೋಜನೆ ಕುರಿತಂತೆ ಕರಡು ಪ್ರತಿ ರಚನೆ ಮಾಡಿದ್ದು, ಕರಡು ಪ್ರತಿಯಲ್ಲಿ ಇ-ವಾಹನಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಹಲವು ಅಂಶಗಳನ್ನು  ಪ್ರಸ್ತಾಪಿಸಲಾಗಿದೆ.

ಸುಮಾರು 90 ಪುಟಗಳ ಕರಡು ಪ್ರತಿಯಲ್ಲಿನ ಅಂಶಗಳು ಸುದ್ದಿಸಂಸ್ಥೆಗೆ ಲಭ್ಯವಾಗಿದ್ದು, ವಿದ್ಯುತ್ ಚಾಲಿತ ವಾಹನಗಳ ಮೇಲಿನ ಸಾಲಗಳಿಗೆ ತೆರಿಗೆಗಳನ್ನು ಮತ್ತು ಬಡ್ಡಿದರಗಳನ್ನು ಕಡಿಮೆಗೊಳಿಸಲು ಆಯೋಗ ಶಿಫಾರಸು ಮಾಡಲು  ಮುಂದಾಗಿದೆ. ಪ್ರಸ್ತುತ ಡೀಸೆಲ್-ಪೆಟ್ರೋಲ್ ಮತ್ತು  ಗ್ಯಾಸ್ ಬಂಕ್ ಗಳ ಮಾದರಿಯಲ್ಲೇ ಬ್ಯಾಟರಿ ಕೇಂದ್ರಗಳನ್ನು ತೆರೆಯಲು ಶಿಫಾರಸ್ಸು ಮಾಡಲಾಗಿದ್ದು, 2018ರ ಹೊತ್ತಿಗೆ ಈ ಬ್ಯಾಟರಿ ಘಟಕಗಳು ತಲೆ ಎತ್ತಲಿವೆ ಎಂದು  ತಿಳಿದುಬಂದಿದೆ. ಅಂತೆಯೇ ಪ್ರಸ್ತುತ ಇರುವ ಪೆಟ್ರೋಲ್ ಮತ್ತು ಡೀಸೆಲ್ ಬಂಕ್ ಗಳಲ್ಲಿ ವಿದ್ಯುತ್ ಕಾರುಗಳನ್ನು ಚಾರ್ಜ್ ಮಾಡುವ ವ್ಯವಸ್ಥೆ ಒದಗಿಸುವಂತೆಯೂ ಶಿಫಾರಸ್ಸು ಮಾಡಲಾಗಿದೆ.

ಭಾರತದ ಹೊಸ ಮಾದರಿಯ ವಾಹನ ವ್ಯವಸ್ಥೆ ಸ್ಥಳೀಯವಾಗಿ ಮತ್ತು ಜಾಗತಿಕವಾಗಿ ಗಮನಾರ್ಹ ಪರಿಣಾಮವನ್ನು ಬೀರಬಹುದು ಎಂದು ಕರಡು ಪ್ರತಿಯಲ್ಲಿ ನೀತಿ ಆಯೋಗ ಅಭಿಪ್ರಾಯಪಟ್ಟಿದೆ.

ಈ ಹಿಂದೆ ಅಂದರೆ ಕಳೆದ ವರ್ಷ ನೆರೆಯ ಚೀನಾ ಸರ್ಕಾರ ಕೂಡ ಪೆಟ್ರೋಲ್ ಡೀಸೆಲ್ ಬಳಕೆಯ ಪ್ರಮಾಣವನ್ನು ಗಣನೀಯವಾಗಿ ತಗ್ಗಿಸುವ ನಿಟ್ಟಿನಲ್ಲಿ ಇ-ವಾಹನಗಳ ಮಾರುಕಟ್ಟೆ ಉತ್ತೇಜನಕ್ಕೆ ಹಲವು ಕ್ರಮಗಳನ್ನು  ಕೈಗೊಂಡಿತ್ತು. ಇದರ ಬೆನ್ನಲ್ಲೇ ಭಾರತ ಕೂಡ ಇದೇ ಮಾದರಿಯ ಕ್ರಮಕ್ಕೆ ಮುಂದಾಗಿರುವುದು ಭಾರತೀಯ ವಾಹನೋಧ್ಯಮದಲ್ಲಿ ಮಹತ್ತರ ಬದಲಾವಣೆಯ ಮುನ್ಸೂಚನೆ ನೀಡುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com