"ತ್ರಿವಳಿ ತಲಾಖ್" ಮುಸ್ಲಿಂ ಧರ್ಮದ ಮೂಲಭೂತ ಪ್ರಕ್ರಿಯೆಯೇ ಎಂದು ಪರಿಶೀಲಿಸುತ್ತೇವೆ: ಸುಪ್ರೀಂ ಕೋರ್ಟ್

ತ್ರಿವಳಿ ತಲಾಖ್ ಗೆ ಸಂಬಂಧಿಸಿದಂತೆ ವಿವಿಧ ಪ್ರಕರಣಗಳ ವಿಚಾರಣೆಯನ್ನು ವಿವಿಧ ಧರ್ಮಗಳ ಪಂಚ ನ್ಯಾಯಾಧೀಶರ ಪೀಠ ಗುರುವಾರ ಕೈಗೆತ್ತಿಕೊಂಡಿದ್ದು, ತ್ರಿವಳಿ ತಲಾಖ್ ಮುಸ್ಲಿಂ ಧರ್ಮದ ಮೂಲಭೂತ ಪ್ರಕ್ರಿಯೆಯೇ ಎಂಬುದನ್ನು ಪರಿಶೀಲಿಸಲಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ತ್ರಿವಳಿ ತಲಾಖ್ ಗೆ ಸಂಬಂಧಿಸಿದಂತೆ ವಿವಿಧ ಪ್ರಕರಣಗಳ ವಿಚಾರಣೆಯನ್ನು ವಿವಿಧ ಧರ್ಮಗಳ ಪಂಚ ನ್ಯಾಯಾಧೀಶರ ಪೀಠ ಗುರುವಾರ ಕೈಗೆತ್ತಿಕೊಂಡಿದ್ದು, ತ್ರಿವಳಿ ತಲಾಖ್ ಮುಸ್ಲಿಂ ಧರ್ಮದ ಮೂಲಭೂತ  ಪ್ರಕ್ರಿಯೆಯೇ ಎಂಬುದನ್ನು ಪರಿಶೀಲಿಸಲಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ದೇಶಾದ್ಯಂತ ವ್ಯಾಪಕ ಚರ್ಚೆಗೆ ಕಾರಣವಾಗಿರುವ ತ್ರಿವಳಿ ತಲಾಖ್ ಗೆ ಸಂಬಂಧಿಸಿದಂತೆ ಐದು ಬೇರೆ ಬೇರೆ ಧರ್ಮಕ್ಕೆ ಸೇರಿದ ನ್ಯಾಯಮೂರ್ತಿಗಳನ್ನು ಒಳಗೊಂಡ ಪಂಚ ಸದಸ್ಯರ ಪೀಠ ಈ ಪ್ರಕರಣದ ವಿಚಾರಣೆ ನಡೆಸುತ್ತಿದ್ದು,  ಸಿಖ್ ಸಮುದಾಯಕ್ಕೆ ಸೇರಿದ ಮುಖ್ಯ ನ್ಯಾಯಮೂರ್ತಿ ಜೆ.ಎಸ್ ಖೇಹರ್ ನೇತೃತ್ವದ ಪೀಠದಲ್ಲಿ ಕ್ರಿಶ್ಚಿಯನ್ -ನ್ಯಾ. ಕುರಿಯನ್ ಜೋಸೆಫ್, ಪಾರ್ಸಿ ಧರ್ಮಕ್ಕೆ ಸೇರಿದ- ರೋಹಿಂಗ್ಟನ್ ನಾರಿಮನ್, ಹಿಂದೂ ಧರ್ಮಕ್ಕೆ ಸೇರಿದ-ನ್ಯಾ.  ಉದಯ್ ಲಲಿತ್ ಹಾಗೂ ಮುಸ್ಲಿಂ ಧರ್ಮೀಯರಾದ ನ್ಯಾ. ಅಬ್ದುಲ್ ನಜೀರ್ ಈ ಪೀಠದಲ್ಲಿ ವಿಚಾರಣೆ ನಡೆಸಲಾಗುತ್ತಿದೆ.

ಇಂದು ಆರಂಭಗೊಂಡ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್, ಉಭಯ ವಕೀಲರಿಗೆ ತಮ್ಮ ತಮ್ಮ ವಾದ ಮಂಡಿಸಲು ಎರಡೆರಡು ದಿನಗಳ ಕಾಲಾವಕಾಶ ನೀಡಿದ್ದು, ಪೀಠ ಕೇಳಲಾಗುವ ಪ್ರಶ್ನೆಗಳಿಗೆ ಒಂದು ದಿನದಲ್ಲಿ  ಉತ್ತರಿಸುವಂತೆಯೂ ಹೇಳಿದೆ. ಅಲ್ಲದೆ ಪದೇ ಪದೇ ಒಂದೇ ವಾದವನ್ನು ಮಂಡಿಸುವರ ವಾದವನ್ನು ಕೂಡಲೇ ಸ್ಥಗಿತಗೊಳಿಸುವ ಎಚ್ಚರಿಕೆಯನ್ನೂ ನ್ಯಾಯಪೀಠ ಉಭಯ ವಕೀಲ ಹಾಗೂ ಕಕ್ಷೀದಾರರಿಗೆ ನೀಡಿದೆ. ಅಂತೆಯೇ ತ್ರಿವಳಿ  ತಲಾಖ್ ಮುಸ್ಲಿಂ ಧರ್ಮದ ಮೂಲಭೂತ ಪ್ರಕ್ರಿಯೆಯೇ ಎಂಬುದನ್ನು ಪರಿಶೀಲಿಸುವುದಾಗಿಯೂ ತಿಳಿಸಿದೆ.

ತ್ರಿವಳಿ ತಲಾಖ್ ಪ್ರಶ್ನಿಸಿ ಹಲವು ಅರ್ಜಿಗಳು ಸುಪ್ರೀಂ ಕೋರ್ಟಿಗೆ ಸಲ್ಲಿಕೆಯಾಗಿದ್ದು ಎಲ್ಲಾ ಪ್ರಕರಣಗಳ ವಿಚಾರಣೆಯನ್ನು ಈ ನ್ಯಾಯಪೀಠ ನಡೆಸುತ್ತಿದೆ. ಕೇಂದ್ರ ಸರ್ಕಾರವನ್ನು ಅಟಾರ್ನಿ ಜನರಲ್ ಮುಕುಲ್ ರೋಹ್ಟಗಿ  ಪ್ರತಿನಿಧಿಸುತ್ತಿದ್ದು, ತ್ರಿವಳಿ ತಲಾಖ್ ವಿಚಾರವನ್ನು ಬಲವಾಗಿ ವಿರೋಧಿಸುತ್ತಾ ಬಂದಿದ್ದಾರೆ. ಇನ್ನು ಬೇರೆ ಬೇರೆ ವೇದಿಕೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಕೂಡಾ ತ್ರಿವಳಿ ತಲಾಖ್ ಗೆ ತಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದಾರೆ. ಆದರೆ  ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಮಾತ್ರ ತ್ರಿವಳಿ ತಲಾಖ್ ವಿಚಾರವನ್ನು ಸಮರ್ಥಿಸುತ್ತಲೇ ಬಂದಿದ್ದು, ಧಾರ್ಮಿಕ ಸ್ವಾತಂತ್ರ್ಯದ ನೆಲೆಗಟ್ಟಿನಲ್ಲಿ ಬೋರ್ಡ್ ಈ ವಿಚಾರವನ್ನು ಪ್ರತಿಪಾದಿಸುತ್ತಿದೆ. ಆದರೆ ಇದನ್ನು  ವಿರೋಧಿಸಿರುವ ಕೇಂದ್ರ ಸರ್ಕಾರರ ಲಿಂಗ ಸಮಾನತೆಯನ್ನು ಪ್ರತಿಪಾದಿಸುತ್ತಾ ತ್ರಿವಳಿ ತಲಾಖ್ ನಿಷೇಧಕ್ಕೆ ಒತ್ತಾಯಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com