ನವದೆಹಲಿ: ದೇಶಾದ್ಯಂತ ವ್ಯಾಪಕ ಚರ್ಚೆಗೆ ಕಾರಣವಾಗಿರುವ ತ್ರಿವಳಿ ತಲಾಖ್ ವಿವಾದ ಇದೀಗ ಸುಪ್ರೀಂ ಕೋರ್ಟ್ ನಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, ಮುಸ್ಲಿಂ ಸಮುದಾಯದಲ್ಲಿ ಚಾಲ್ತಿಯಲ್ಲಿರುವ ಬಹು ಪತ್ನಿತ್ವ ಹಾಗೂ ನಿಖಾ ಹಲಾಲಾ ಆಚರಣೆಯ ಕಾನೂನು ಮಾನ್ಯತೆ ಕುರಿತು ಪರಿಶೀಲನೆ ನಡೆಸುತ್ತೇವೆ ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ.
ಸೋಮವಾರ ತ್ರಿವಳಿ ತಲಾಖ್ ಬಗೆಗಿನ ವಿಚಾರಣೆಯನ್ನು ಮುಂದುವರೆಸಿದ ಸುಪ್ರೀಂ ಕೋರ್ಟ್ ನ ಪಂಚ ಸದಸ್ಯ ಪೀಠ, ಏಕಕಾಲದಲ್ಲಿ ತ್ರಿವಳಿ ತಲಾಖ್, ಬಹುಪತ್ನಿತ್ವ, ನಿಖಾ ಹಲಾಲಾ ಬಗ್ಗೆ ವಿಚಾರಣೆ ಸಾಧ್ಯವಾಗುವುದಿಲ್ಲ. ಹೀಗಾಗಿ ಬಹುಪತ್ನಿತ್ವ, ನಿಖಾ ಹಲಾಲಾ ಕಾನೂನು ಮಾನ್ಯತೆ ಕುರಿತು ಮುಂದಿನ ದಿನಗಳಲ್ಲಿ ಪರಿಶೀಲನೆ ನಡೆಸುತ್ತೇವೆ ಎಂದು ಹೇಳಿತು. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಜೆಎಸ್ ಖೆಹರ್ ನೇತೃತ್ವದ ಪಂಚ ಸದಸ್ಯ ಪೀಠವು ನಿಖಾ ಹಲಾಲಾ (ನಿಖಾ ಹಲಾಲ್ ಎಂದರೆ ವಿಚ್ಛೇದನದ ಬಳಿಕ ಮಹಿಳೆ ತನ್ನ ಪತಿ ಬಳಿಗೆ ಮರಳಿ ಹೋಗಬೇಕೆಂದರೆ ಬೇರೊಬ್ಬನ ಜತೆ ಮದುವೆಯಾಗುವ ಪ್ರಕ್ರಿಯೆ) ಮತ್ತು ಬಹುಪತ್ನಿತ್ವ ವಿಚಾರಗಳನ್ನು ಮುಂದಿನ ದಿನಗಳಲ್ಲಿ ವಿಚಾರಣೆಗೆ ಕೈಗೆತ್ತಿಕೊಳ್ಳುತ್ತೇವೆ. ಪ್ರಸ್ತುತ ತ್ರಿವಳಿ ತಲಾಖ್ ಬಗ್ಗೆ ಮಾತ್ರ ವಿಚಾರಣೆ ನಡೆಸುತ್ತೇವೆ ಎಂದು ಹೇಳಿದರು.
ಇದಕ್ಕೂ ಮೊದಲು ಕೇಂದ್ರ ಸರ್ಕಾರದ ಪರ ತಮ್ಮ ವಾದ ಮಂಡಿಸಿದ ಆಟಾರ್ನಿ ಜನರಲ್ ಮುಕುಲ್ ರೋಹ್ಟಗಿ ಅವರು, ತ್ರಿವಳಿ ತಲಾಖ್ ನಂತೆಯೇ ನಿಖಾ ಹಲಾಲಾ ಮತ್ತು ಬಹುಪತ್ನಿತ್ವದ ಕುರಿತೂ ಕೂಡ ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಬೇಕು ಎಂದು ಹೇಳಿದರು. ಅಂತೆಯೇ ಪಾಕಿಸ್ತಾನ ಮತ್ತು ಆಫ್ಘಾನಿಸ್ತಾನದಂತಹ ದೇಶಗಳೇ ಈ ಬಗೆಗಿನ ತಮ್ಮ ನೀತಿಗಳನ್ನು ಬದಲಿಸಿಕೊಂಡಿದ್ದು, ವಿಶ್ವದ ಅತೀ ದೊಡ್ಡ ಪ್ರಜಾಪ್ರಭುತ್ವ ಮತ್ತು ಅತೀ ದೊಡ್ಡ ಜ್ಯಾತ್ಯಾತೀತ ರಾಷ್ಟ್ರವಾಗಿರುವ ಭಾರತ ಮಾತ್ರ ಈ ಬಗ್ಗೆ ಇನ್ನೂ ಚರ್ಚೆಯಲ್ಲಿ ತೊಡಗಿದೆ ಎಂದು ನ್ಯಾಯಾಲಯಕ್ಕೆ ಪರಿಸ್ಥಿತಿ ಕುರಿತು ವಿವರಿಸಿದರು.
ಇದಕ್ಕೆ ಉತ್ತರಿಸಿದ ಪಂಚ ಸದಸ್ಯ ಪೀಠ ಪ್ರಸ್ತುತ ನ್ಯಾಯಾಲಯದ ಬಳಿ ಅಷ್ಟ ಸಮಯವಿಲ್ಲ. ಭವಿಷ್ಯದಲ್ಲಿ ಇನವುಗಳ ಕಾನೂನು ಮಾನ್ಯತೆ ಬಗ್ಗೆ ಖಂಡಿತಾ ಚರ್ಚಿಸುತ್ತೇವೆ ಪ್ರಸ್ತುತ ತ್ರಿವಳಿ ತಲಾಖ್ ಬಗ್ಗೆ ಮಾತ್ರ ವಿಚಾರಣೆ ಸಾಧ್ಯ ಎಂದು ಹೇಳಿದೆ.
Advertisement