ಕುಲಭೂಷಣ್ ಜಾಧವ್ ಗೆ ಗಲ್ಲು ಶಿಕ್ಷೆ: ನಾಳೆ ಅಂತರಾಷ್ಟ್ರೀಯ ಕೋರ್ಟ್ ನಿಂದ ತೀರ್ಪು ಪ್ರಕಟ

ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್ ಜಾಧವ್ ಗಲ್ಲು ಶಿಕ್ಷೆಗೆ ಸಂಬಂಧಿಸಿದಂತೆ ಅಂತರಾಷ್ಟ್ರೀಯ ಕೋರ್ಟ್ ಗುರುವಾರ...
ಕುಲಭೂಷಣ್ ಜಾಧವ್
ಕುಲಭೂಷಣ್ ಜಾಧವ್
ನವದೆಹಲಿ: ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್ ಜಾಧವ್ ಗಲ್ಲು ಶಿಕ್ಷೆಗೆ ಸಂಬಂಧಿಸಿದಂತೆ ಅಂತರಾಷ್ಟ್ರೀಯ ಕೋರ್ಟ್ ಗುರುವಾರ ತನ್ನ ತೀರ್ಪು ಪ್ರಕಟಿಸಿಲಿದೆ.
ಗೂಢಾಚಾರಿಕೆ ಮಾಡಿದ ಆರೋಪದ ಮೇಲೆ ಪಾಕಿಸ್ತಾನ ಸೇನಾ ಕೋರ್ಟ್ ಜಾಧವ್ ಗೆ ಗಲ್ಲು ಶಿಕ್ಷೆ ವಿಧಿಸಿದ್ದು, ಅದಕ್ಕೆ ತಡೆ ನೀಡಿರುವ ಅಂತರಾಷ್ಟ್ರೀಯ ಕೋರ್ಟ್ ನಾಳೆ ಮಧ್ಯಾಹ್ನ 3.30ಕ್ಕೆ ಅಂತಿಮ ತೀರ್ಪು ಪ್ರಕಟಿಸಲಿದೆ.
ಕಳೆದ ಸೋಮವಾರ ಕುಲಭೂಷಣ್ ಜಾಧವ್ ಗಲ್ಲು ಶಿಕ್ಷೆಗೆ ಸಂಬಂಧಿಸಿದಂತೆ ಭಾರತ-ಪಾಕಿಸ್ತಾನ ಅಂತಾರಾಷ್ಟ್ರೀಯ ನ್ಯಾಯಾಲಯದ ಮುಂದೆ ತಮ್ಮ ವಾದ ಮಂಡಿಸಿವೆ. ಮೊದಲು ವಾದ ಮಂಡಿಸಿದ ಭಾರತ, ಈ ಕೂಡಲೇ ಜಾಧವ್ ಗಲ್ಲು ಶಿಕ್ಷೆಯನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿದೆ. ಅಲ್ಲದೆ ಮಾನವ ಹಕ್ಕುಗಳು ವಿಶ್ವದ ಯಾವುದೇ ಕಡೆಯಲ್ಲಾದರೂ ಅತ್ಯಗತ್ಯವಾಗಿದ್ದು ಅದನ್ನು  ಪಾಕಿಸ್ತಾನ ಗಾಳಿಗೆ ತೂರಿದೆ. ಜಾಧವ್ ಅವರಿಗೆ ದೂತಾವಾಸ ಅಧಿಕಾರಿಗಳನ್ನು ಸಂಪರ್ಕಿಸಲು ಕೋರಿದ ಮನವಿಗೆ ಪಾಕಿಸ್ತಾನ ಜಾಣಕಿವುಡು ಪ್ರದರ್ಶಿಸುತ್ತಿದೆ ಎಂದು ಆಪಾದಿಸಿತ್ತು.
ಭಾರತದ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಹರೀಶ್ ಸಾಳ್ವೆ ಅವರು, ವಿಚಾರಣೆ ಮುಗಿಯುವ ಮೊದಲೇ ಪಾಕಿಸ್ತಾನ ಕುಲಭೂಷಣ್ ಯಾದವ್ ರನ್ನು ಗಲ್ಲಿಗೇರಿಸುವ ಸಾಧ್ಯತೆಯೂ ಇದೆ ಎಂದು ಆತಂಕ ವ್ಯಕ್ತಪಡಿಸಿದರು. ಮಾತ್ರವಲ್ಲ ಪಾಕಿಸ್ತಾನ ವಿಯೆನ್ನಾ ಘೋಷಣೆಯನ್ನು ಉಲ್ಲಂಘಿಸಿದೆ. ಜಾಧವ್ ಸಂಪರ್ಕಿಸಲು ಭಾರತ 16 ಬಾರಿ ಪ್ರಯತ್ನಪಟ್ಟರೂ ಅವಕಾಶ ನೀಡಿಲ್ಲ. ಜತೆಗೆ ಅವರ ತಾಯಿ ಕೇಳಿದಾಗಲೂ ಭೇಟಿ ನಿರಾಕರಿಸಲಾಗಿದೆ. ಪರಿಸ್ಥಿತಿ ತೀರಾ ಕಳವಳಕಾರಿಯಾಗಿದೆ ಮತ್ತು ತುಂಬಾ ತುರ್ತಿನದಾಗಿದೆ ಎಂದು ಹೇಳಿದ್ದರು,
ಇನ್ನು ಪಾಕಿಸ್ತಾನದ ಪರ ವಾದ ಮಂಡಿಸಿದ ದುಬೈ ರಾಯಭಾರಿ ಮೊಝ್ಝಮ್ ಅಹ್ಮದ್ ಖಾನ್ ಅವರು ಭಾರತದ ವಾದವನ್ನು ಸ್ಪಷ್ಟವಾಗಿ ತಳ್ಳಿಹಾಕಿದ್ದು, ಭಾರತ ಹೇಳುವುದರಲ್ಲಿ ಸುಳ್ಳಿದೆ. ಹಾಗಾಗಿ ಕುಲಭೂಷಣ್ ಜಾಧವ್ ಸ್ವತಃ ತಪ್ಪೊಪ್ಪಿಕೊಂಡಿರುವ ವೀಡಿಯೊವನ್ನು ತಾವು ವೀಕ್ಷಿಸಬೇಕು ಮತ್ತು ಇದರ ಪ್ರಸಾರಕ್ಕೆ ಅನುವು ಮಾಡಿಕೊಡಬೇಕು ಎಂದು ಮನವಿ ಮಾಡಿದರು. ಆದರೆ ಕೋರ್ಟ್ ಪಾಕ್ ಮನವಿಯನ್ನು ತಿರಸ್ಕರಿಸಿದೆ. 
ವಾದ-ಪ್ರತಿವಾದ ಆಲಿಸಿರುವ ಅಂತರಾಷ್ಟ್ರೀಯ ಕೋರ್ಟ್ ತೀರ್ಪನ್ನು ನಾಳೆಗೆ ಕಾಯ್ದಿರಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com