ವಾತಾಪಿ ಗಣಪತಿ ಭಜೆ

ವಾತಾಪಿ ಗಣಪತಿ ಭಜೆ

ವಾತಾಪಿ ಗಣಪತಿಯನ್ನು ಬಹು ಸುಂದರಾಗಿ ವರ್ಣಿಸುವ ಈ ಕೀರ್ತನೆಯಲ್ಲಿರುವ 'ವಾತಾಪಿ' ಎಂಬ ಸ್ಥಳ ಇಂದಿನ ಐತಿಹಾಸಿಕ ನಗರಿ ಬಾದಾಮಿ. ಬಾದಾಮಿಯಲ್ಲಿ ಈ ಸುಂದರ ಗಣಪತಿಯ ದೇವಾಲಯ ಮತ್ತು ಮೂರ್ತಿ ಎಲ್ಲಿದೆ  ಎಂಬ ಪ್ರಶ್ನೆಗೆ ಉತ್ತರ ಹುಡುಕಲು ಬರಹಗಾರ ದ.ರಾ.ಪುರೋಹಿತ್ ಜತೆ ಹೊರಟಾಗ ಅನೇಕ ಅಚ್ಚರಿಯ ಅಂಶಗಳು ಸಿಕ್ಕವು..
ಬಾದಾಮಿಯ ಉತ್ತರ ಕೋಟೆಯಲ್ಲಿ ಕೆಳಗಣ ಶಿವಾಲಯವೆಂಬ ದೇವಾಲಯವಿದೆ. ಗರ್ಭ ಗುಡಿಯಲ್ಲಿ ಮೂರ್ತಿ ಇಲ್ಲದ ಈ ದೇವಾಲಯವೇ ವಾತಾಪಿ ಗಣಪತಿ ದೇವಾಲಯ ಎಂಬುದು ಖ್ಯಾತ ಇತಿಹಾಸಕಾರ ಡಾ.ಅ.ಸುಂದರ ಅವರ ತರ್ಕ. ಈ ಕುರಿತು ಕೆಲ ಸಾಕ್ಷಿಗಳನ್ನು ಹೇಳುವ ಅವರು, ಆಗಮ ಶಾಸ್ತ್ರದಲ್ಲಿ ಹೇಳಿರುವಂತೆ ಗಣಪತಿ ಸ್ಥಾಪನೆಗೆ ಇರಬೇಕಾದ ಪಾಣಿಪೀಠ ಈ ದೇವಾಲಯದಲ್ಲಿದೆ. ಇದರಲ್ಲಿಯ ಬಾಗಿಲು, ವಾಡಗಳಲ್ಲಿ ಗಣಗಳ ಶಿಲ್ಪಗಳಿವೆ. ಈ  ಲಕ್ಷಣಗಳಿಂದ ಇದೇ ವಾತಾಪಿ ಗಣಪತಿ ದೇವಾಲಯ ಎನ್ನುತ್ತಾರವರು. ಹಾಗಾದ್ರೆ ಇಲ್ಲಿಯ ಗಣಪತಿ ಮೂರ್ತಿ ಎಲ್ಲಿದೆ ಎಂದಾಗ  ತಮಿಳುನಾಡಿನ ತಂಜಾವೂರು ಜಿಲ್ಲೆಯ ತಿರುಚ್ಚಂಗಟ್ಟಾಂ ಎಂಬಲ್ಲಿ ಮತ್ತು ತಿರುಚುನಾಪಳ್ಳಿಯ ಹತ್ತಿರ ಗುಡ್ಡವೊಂದರಲ್ಲಿ ವಾತಾಪಿ ಗಣಪತಿ ಇದೆ ಎಂದು ಇತಿಹಾಸಕಾರರು ಗುರುತಿಸುತ್ತಾರೆ. ಇವೆರಡರಲ್ಲಿ ಇದೇ ವಾತಾಪಿ ಗಣಪತಿ ಎಂದು ಹೇಳಲು ಸಾಧ್ಯವಿಲ್ಲ. ವಾತಾಪಿ ಗಣಪತಿ ತಮಿಳುನಾಡಿಗೆ ಹೇಗೆ ಹೋದ ಎಂಬ ಪ್ರಶ್ನೆಗೆ ಎರಡು ಉತ್ತರಗಳು ಸಿಗುತ್ತವೆ.
ವಾತಾಪಿಯ ಮೇಲೆ ದಾಳಿ ಮಾಡಿ ಅಲ್ಲಿಯ ಅರಸನನ್ನು ಸೋಲಿಸಿದ ಪಲ್ಲವ ದೊರೆ ನರಸಿಂಹ ವರ್ಮನ ಸೇನಾಪತಿ ತಿರೊತ್ತೊಂಡ (ಕ್ರಿ.ಶ. 642 ರಲ್ಲಿ) ಈ ವಿಜಯದ ಕುರುಹಿಗಾಗಿ ವಾತಾಪಿಯಲ್ಲಿಂದ ಈ ಸುಂದರ ಗಣಪತಿಯನ್ನು ಹೊತ್ತು ತಂದು ತಿರುಚ್ಚೆಂಗಾಟ್ಟಾಂ ಗುಡಿಯಲ್ಲಿ ಪ್ರತಿಷ್ಠಾಪಿಸಿದ ಎಂದು 12 ನೇ ಶತಮಾನದ ಚೋಳ ದೊರೆ ಇಮ್ಮಡಿ ಕುಲೋತ್ತುಂಗನ್‌ನ ಆಸ್ಥಾನ ಕವಿ ಶೆಕ್ಕಿಲರ ತನ್ನ ಪೆರಿಯ ಪುರಾಣದಲ್ಲಿ ತಿಳಿಸಿದ್ದಾನೆ.
ಮತ್ತೊಂದು ವಾದವೆಂದರೆ ಇಮ್ಮಡಿ ಪುಲಕೇಶಿಯನ್ನು ಸೋಲಿಸಿದ ಪಲ್ಲವ ದೊರೆ ನರಸಿಂಹ ವರ್ವ ಬಾದಾಮಿಯ ಉತ್ತರ ಕೋಟೆಯಲ್ಲಿನ ಕೆಲ ಭಾಗಗಳನ್ನು ಧ್ವಂಸ ಮಾಡುವಾಗ ಈ ವಾತಾಪಿ ಗಣಪತಿಯ ಗುಡಿಯನ್ನು ನೋಡಿ ಆ ಶಿಲ್ಪಕ್ಕೆ ಮಾರು ಹೋಗಿ, ಆ ಗಣಪತಿ ಶಿಲ್ಪವನ್ನು ಹೊತ್ತೊಯ್ದು ತಿರುಚನಾಪಳ್ಳಿ ಸಮೀಪದ ಗುಡ್ಡಲ್ಲಿ ಸ್ಥಾಪಿಸುತ್ತಾನೆ. ಈ ಮೂರ್ತಿಯನ್ನು ನೋಡಿಯೇ ಶ್ರೇಷ್ಠ ವಾಗ್ಗೇಯಕಾರ ಮುತ್ತುಸ್ವಾಮಿ ದೀಕ್ಷಿತರು (1776-1835) ವಾತಾಪಿ ಗಣಪತಿಂ ಭಜೆ.. ಎಂದು ಕೃತಿ ರಚಿಸುತ್ತಾರೆ ಎನ್ನಲಾಗುತ್ತದೆ.  ಅಂದಿನಿಂದಲೇ ಗಣಪತಿಯ ಆರಾಧನೆ ಪರಂಪರೆ ಆರಂಭವಾಗಿದ್ದು ಎಂಬ ಅಂಶವನ್ನು ಇತಿಹಾಸಕಾರರು ಹೇಳುತ್ತಾರೆ. ಪಲ್ಲವರ ಗುಹೆಗಳಲ್ಲಿ ಗಣೇಶ ಶಿಲ್ಪಗಳು ಕಾಣುವುದಿಲ್ಲ. ತಮಿಳುನಾಡಿನ ಮೊದಲ ಗಣೇಶ ಶಿಲ್ಪ ಕಾಣುವುದು ಕಂಚಿಯ ಕೈಲಾಸನಾಥ ದೇವಾಲಯದಲ್ಲಿ. ಆದ್ದರಿಂದ ಗಣಪತಿಯನ್ನು ಪರಿಚಯಿಸಿದ ಕೀರ್ತಿ ಚಾಲುಕ್ಯರದು. ವಾತಾಪಿಯಿಂದ ಬಂದ ಈ ಗಣಪತಿ ಶಿಲ್ಪವನ್ನೇ ಅನುಸರಿಸಿ ಈ ಶಿಲ್ಪ ಪ್ರಭೇದವನ್ನೇ ಮುಂದುವರೆಸಲಾಯಿತು ಎಂಬ ಸಾಧ್ಯತೆಗಳಿವೆ ಎನ್ನುತ್ತಾರೆ ಇತಿಹಾಸಕಾರ ಡಾ.ಶೀಲಾಕಾಂತ ಪತ್ತಾರ್. ಅಂದಿನಿಂದಲೇ ಗಾಣಪತ್ಯ ಎಂಬ ಪರಂಪರೆ ಆರಂಭವಾಯಿತು ಎನ್ನಲಾಗುತ್ತದೆ.
ಹೀಗೆ ಬಾದಾಮಿಯಿಂದ ತಮಿಳುನಾಡಿಗೆ ಸಾಗಿಸಲ್ಪಟ್ಟು ಅಲ್ಲಿ ಸ್ಥಾಪನೆಗೊಂಡು ಹೊಸ ಪರಂಪರೆಗೆ ನಾಂದಿ ಹಾಡಿದ, ಸಂಗೀತಗಾರರಿಗೆ ಪ್ರಥಮ ದೈವವಾಗಿ  ಗುರುತಿಸಿಕೊಂಡ ವಾತಾಪಿ ಗಣಪತಿ ನಮ್ಮ ನೆಲದವನು. ಅದೇ ನಮಗೊಂದು ಹೆಮ್ಮೆ.

ಇವನೇ ಆ ಗಣಪತಿ
ಬಾದಾಮಿಯ ಮೇಣ ಬಸದಿಗಳ ಕೆಲ ಕಂಬಗಳಲ್ಲಿ, ಗೋಡೆಗಳಲ್ಲಿ ಮತ್ತು ಬಂಡೆ ಕಲ್ಲುಗಳ ಮೇಲೆ ಬಿಡಿ-ಬಿಡಿಯಾದ ಗಣೇಶ ಶಿಲ್ಪಗಳಿವೆಯಾದರೂ ಇದೇ ವಾತಾಪಿ ಗಣಪತಿ ಎಂದು ಹೇಳುವ ಗಣಪತಿ ಮೂರ್ತಿ ಕಾಣುವುದಿಲ್ಲ. ಆದರೆ ಇತಿಹಾಸಕಾರರ ಸಮರ್ಥನೆ, ಸಂಶೋಧನೆ ಆಧರಿಸಿ ವಾತಾಪಿ ಗಣಪತಿಯ ನೆಲೆಯನ್ನು ಗುರುತಿಸಬಹುದು.

- ಪ್ರವೀಣರಾಜು ಎಸ್. ಸೊನ್ನದ
ಚಿತ್ರಗಳು: ಡಿಆರ್‌ಪಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com