ಬಂಡೀಪುರದ ಜನಪ್ರಿಯತೆ ಹೆಚ್ಚಿಸಿದ ವ್ಯಾಘ್ರರಾಜ

ಹುಲಿ ನೋಡಿದಾಕ್ಷಣ ಎಲ್ಲರೂ ಬೆಚ್ಚಿ ಬೀಳುತ್ತಾರೆ.. ಅಬ್ಬಾ ಹುಲಿ ಅಂತಾರೆ....
ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿರುವ ಜನಪ್ರಿಯ ವ್ಯಾಘ್ರರಾಜ ಪ್ರಿನ್ಸ್ (ಸಂಗ್ರಹ ಚಿತ್ರ)
ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿರುವ ಜನಪ್ರಿಯ ವ್ಯಾಘ್ರರಾಜ ಪ್ರಿನ್ಸ್ (ಸಂಗ್ರಹ ಚಿತ್ರ)

-ವಿನೋದಕುಮಾರ್ ಬಿ.ನಾಯಕ್
ಬೆಂಗಳೂರು:
ಹುಲಿ ನೋಡಿದಾಕ್ಷಣ ಎಲ್ಲರೂ ಬೆಚ್ಚಿ ಬೀಳುತ್ತಾರೆ.. ಅಬ್ಬಾ ಹುಲಿ ಅಂತಾರೆ....

ಈಗಂತೂ ಕರ್ನಾಟಕದಾದ್ಯಂತ ಹುಲಿಯದ್ದೇ ಮಾತು, ಅದೇ ಚರ್ಚೆ ಅದೇ ವಿವಾದ..ಆದರೆ, ಇಲ್ಲೊಂದು ಹುಲಿ ಇದೆ. ಅದು ದನರನ್ನ ನೋಡಿ ಜಗ್ಗಲ್ಲ.. ಬೆದರಲ್ಲ.. ಕಾಡಿನ ರಾಜ ಅಲ್ಲವಾ... ತನ್ನ ಕಾಡಿನಲ್ಲಿ ಗಾಂಭೀರ್ಯದಿಂದ ಓಡಾಡಿಕೊಂಡು ತನ್ನ ಸೌಂದರ್ಯವನ್ನ ಎದೆಯುಬ್ಬಿಸಿ ತೋರಿಸಿಕೊಂಡು ಕ್ಯಾಟ್‌ವಾಕ್ ಮಾಡುತ್ತಾನೆ. ಈ ಕಾಡಿನ ರಾಜನ ಅದೆಷ್ಟು ಸಾವಿರ ಫೋಟೋಗಳನ್ನ ಈ ವರೆಗೆ ಕ್ಲಿಕ್ಕಿಸಲಾಗಿದೆಯೋ ಲೆಕ್ಕ ಇಟ್ಟವರಿಲ್ಲ.

ಈತ ಬಂಡೀಪುರದ ಪ್ರಿನ್ಸ್. ಬಂಡೀಪುರ ಕಾಡಿನ ಯುವರಾಜ. ಕಾಡಿನಲ್ಲಿ ಎದೆಯುಬ್ಬಿಸಿ ಠೀವಿಯಿಂದ ನಡೆಯುತ್ತಾನೆ. ಸಫಾರಿಗೆ ಬರುವ ಜೀಪುಗಳಿಗೆ ಅತಿ ಹತ್ತಿರ ಬರುತ್ತಾನೆ. ಪ್ರವಾಸಿಗರು ಹೋ ಹುಲಿ ಹುಲಿ ಅಂತಾ ಕೂಗಿದರೂ ವಿಚಲಿತನಾಗಲ್ಲ. ಈ ವರೆಗೂ ಯಾರಿಗೂ ತೊಂದರೆ ಕೊಟ್ಟಿಲ್ಲ. ಅಷ್ಟು ಸೌಮ್ಯ ಸ್ವಭಾವದವನು ಈ ಪ್ರಿನ್ಸ್. ಹಾಗಂತ ಈತನಿಗೆ ಸರ್ಕಾರವೇನೋ ಪ್ರಿನ್ಸ್ ಅಂತಾ ನಾಮಕರಣ ಮಾಡಿಲ್ಲ. ಪ್ರವಾಸಿಗರಿಗೆ ಅದ್ಭುತ ದರ್ಶನ ಕೊಡುವ ಡೋಂಟ್ ಕೇರ್ ಗುಣದ...ಕ್ಯಾಮೆರಾಗೆ ಪರ್ಫೆಕ್ಟ್ ಪೋಸು ಕೊಡುವುದರಿಂದಲೇ ಬಂಡೀಪುರಕ್ಕೆ ಬರುವ ವನ್ಯಜೀವಿ ಫೋಟೋಗ್ರಾಫರ್‌ಗಳು ಈತನಿಗೆ ಪ್ರಿನ್ಸ್ ಅಂತಾ ಹೆಸರಿಟ್ಟಿದ್ದಾರೆ.

30 ರಿಂದ 40 ಕಿ.ಮೀ. ಓಡಾಟ

ಬಂಡೀಪುರ ರಾಷ್ಟ್ರೀಯ ಉದ್ಯಾನ ಹುಲಿಗಳಿಗೆ ದೇಶದಲ್ಲೇ ಅತ್ಯಂತ ಹೆಸರುವಾಸಿಯಾದ ಧಾಮ. ಇಲ್ಲಿ ಅತಿ ಬಿಗಿಯಾದ ಸಂರಕ್ಷಣಾ ಕ್ರಮಗಳನ್ನು ಅನೇಕ ವರ್ಷಗಳಿಂದ ಮಾಡಿಕೊಂಡು ಬರಲಾಗಿದೆ. ಅದ್ದರಿಂದಲೇ ಇಲ್ಲಿ ಹುಲಿಗಳ ಸಂಖ್ಯೆ ಹೆಚ್ಚಳವಾಗಿದೆ. ಇಂತಹ ಬಂಡೀಪುರದ ಪ್ರವಾಸಿ ವಲಯದ ಪ್ರಿನ್ಸ್ ಈ ಹುಲಿ. ಮಂಗಳ ಡ್ಯಾಮ್, ಮರಳ ಹಳ್ಳ ಕ್ಯಾಂಪ್, ವೆಂಕಟಪಾಲ್ ಕಟ್ಟೆಯಿಂದ ಹಿಡಿದು ಬೋಳುಗುಡ್ಡದವರೆಗೂ ಸುಮಾರು 30ರಿಂದ 40 ಕಿಲೋ ಮೀಟರ್ ಕಾಡಿನಲ್ಲಿ ಪ್ರಿನ್ಸ್ ಓಡಾಡಿಕೊಂಡಿರುತ್ತಾನೆ.

ಬಂಡೀಪುರದ ಇಡೀ ಕಾಡು ಮಳೆಗಾಲದ ನಂತರ ಹಸಿರು ತುಂಬಿಕೊಂಡು ನಳನಳಿಸುತ್ತಿದೆ. ಇಡೀ ಅರಣ್ಯ ಚಿಗಿತುನಿಂತಿದೆ. ಇಂತಹ ಹಸಿರ ಕಾಡಿನಲ್ಲಿ ಗಾಢ ಹಳದಿ ಬಣ್ಣದ ದಷ್ಟಪುಷ್ಟ ಪ್ರಿನ್ಸ್ ಆರಾಮವಾದಿ ಓಡಾಡಿಕೊಂಡಿದ್ದಾನೆ. ಪ್ರಿನ್ಸ್ ಕಳೆದ 1 ತಿಂಗಳಿನಿಂದ ಬಂಡೀಪುರ ಸಫಾರಿ ವಾಹನಗಳಿಗೆ ಬೆಳಗ್ಗೆ ಮತ್ತು ಸಂಜೆ ದರ್ಶನ ಕೊಡುತ್ತಿದ್ದಾನೆ. ಪ್ರವಾಸಿಗರು ಅತಿ ಸಮೀಪದಿಂದ ಹುಲಿಯನ್ನು ನೋಡಿ ಖುಷಿಪಡುತ್ತಿದ್ದಾರೆ.

ಮೃಗಾಲಯಗಳಲ್ಲಿ ಎಲ್ಲರೂ ಹುಲಿ ನೋಡಿರುತ್ತಾರೆ. ಆದರೆ ಹುಲಿಯನ್ನು ಕಾಡಿನಲ್ಲಿ ಸ್ವತಂತ್ರವಾಗಿ ನೋಡುವ ಖುಷಿಯೇ ಬೇರೆ. ಆ ಖುಷಿಯನ್ನ ಪ್ರಿನ್ಸ್ ಪ್ರವಾಸಿಗರಿಗೆ ಕೊಡುತ್ತಿದ್ದಾರೆ. ಅರಣ್ಯ ಸಂರಕ್ಷಣೆಯಲ್ಲಿ ಜನಜಾಗೃತಿ ಬಹಳ ಮುಖ್ಯ. ಜನರಲ್ಲಿ ಅರಣ್ಯ, ವನ್ಯಜೀವಿಗಳ ರಕ್ಷಣೆ, ಗಿಡಮರಗಳ ಪೋಷಣೆ ಬಗ್ಗೆ ಅರಿವು ಮೂಡಿದಲ್ಲಿ ಮಾತ್ರ ಪ್ರಕೃತಿಯ ಸಂರಕ್ಷಣೆ ಹಾಗೂ ಅಭಿವೃದ್ಧಿ ಸಾಧ್ಯ. ಪ್ರಿನ್ಸ್‌ನಂತಹ ಹುಲಿಗಳು ಕಾಡಿಗೆ ವಿಹಾರಕ್ಕೆಂದು ಬರುವ ಲಕ್ಷಾಂತರ ಜನರಿಗೆ ದರ್ಶನ ಕೊಟ್ಟು ವನ್ಯ ಪ್ರಾಣಿಗಳ ಬಗ್ಗೆ ಕಾಡಿನ ಬಗ್ಗೆ ವಾತ್ಸಲ್ಯದ ಕಲ್ಪನೆ ಮೂಡಿಸುತ್ತದೆ. ಕಾಡಿನ ಸಂರಕ್ಷಣೆಗೆ ಪರೋಕ್ಷವಾಗಿ ಇಂತಹ ಲಕ್ಷಾಂತರ ಹುಲಿಗಳೂ ನೆರವಾಗುತ್ತವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com